ರಾಯಬಾಗ: ಸಹಕಾರಿ ಸಂಘಗಳು ಆರ್ಥಿಕವಾಗಿ ಸದೃಢವಾಗಿ ಬೆಳೆಯಲು ಎಲ್ಲರೂ ಕೈಜೋಡಿಸಬೇಕೆಂದು ಬೆಳಗಾವಿ ಜಿಲ್ಲಾ ಹಾ.ಉ.ಸ.ಸಂ.ಒಕ್ಕೂಟ ನಿರ್ದೇಶಕ ಹಾಗೂ ವಿಧಾನ ಪರಿಷತ್ತ ಮಾಜಿ ಸದಸ್ಯ ವಿವೇಕರಾವ ಪಾಟೀಲ ಹೇಳಿದರು.
ಶನಿವಾರ ಪಟ್ಟಣದ ಮಹಾದೇವ ಮಂಗಲ ಕಾರ್ಯಾಲಯದಲ್ಲಿ ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ತಾಲೂಕಾ ಸಹಕಾರ ಮತ್ತು ಸೌಹಾರ್ದ ಸಹಕಾರಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತಾಲೂಕಾ ಸಹಕಾರ ಅಭಿವೃದ್ಧಿ ಅಧಿಕಾರಿ ಎಸ್.ಎಸ್.ಕರಬಸನವರ ಮಾತನಾಡಿ, ಸಹಕಾರಿ ಪಿತಾಮಹ ಸಿದ್ದನಗೌಡ ಪಾಟೀಲ ಅವರು ಸ್ಥಾಪಿಸಿದ ಸಹಕಾರ ಸಂಘ ಇಂದು ದೇಶಾದ್ಯಂತ ಹೆಮ್ಮರವಾಗಿ ಬೆಳೆದಿದೆ. ಸಹಕಾರ ಸಂಘಗಳ ಹೆಚ್ಚಿನ ಅಭಿವೃದ್ಧಿಗಾಗಿ ಪ್ರತಿ ವರ್ಷ ನ.14 ರಿಂದ 20 ರವರೆಗೆ ಸಹಕಾರ ಸಪ್ತಾಹ ಆಚರಿಸಲಾಗುತ್ತಿದೆ. ಸಹಕಾರ ಸಂಘಗಳು ನಿರಂತರವಾಗಿ ಬೆಳೆಯಬೇಕಾದರೆ ಉತ್ತಮ ಸೇವೆ ಮತ್ತು ಸಾಲವನ್ನು ನೀಡಬೇಕೆಂದರು. ಕಾರವಾರ ಮತ್ತು ಮಂಗಳೂರ ಜಿಲ್ಲೆಗಳ ಸಹಕಾರ ಸಂಘಗಳು ನಮಗೆ ಒಳ್ಳೆಯ ಮಾದರಿಯಾಗಿವೆ ಎಂದು ತಿಳಿಸಿದರು.
ಚಿಕ್ಕೋಡಿ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಬಾಹುಬಲಿ ಹಂಜೆ ಮಾತನಾಡಿ, ಭಾರತ ಸ್ವಾವಲಂಬನೆ ಸಾಧಿಸಲು ಸಹಕಾರ ಸಂಘಗಳು ವಾಹಕಗಳಾಗಿವೆ. ಸಾಮೂಹಿಕ ಹಿತಾಸಕ್ತಿಯಿಂದ ಸಹಕಾರ ಸಂಘಗಳು ಬೆಳೆಯುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಲಕ್ಷ್ಮೀಕಾಂತ ದೇಸಾಯಿ ವಹಿಸಿದ್ದರು.
ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಸಗೌಡ ಪಾಟೀಲ, ಕಂಕಣವಾಡಿ ಪ.ಪಂ ಅಧ್ಯಕ್ಷ ಪ್ರಕಾಶ ಹುಕ್ಕೇರಿ, ಹಾರೂಗೇರಿ ಜನತಾ ಬ್ಯಾಂಕ ಅಧ್ಯಕ್ಷ ರಾಜಶೇಖರ ಪಾಟೀಲ, ಬಿ.ಎಸ್.ಸುಲ್ತಾನಪೂರ, ಈರನಗೌಡ ಪಾಟೀಲ, ಬಸಪ್ಪ ಕೋಣೆ, ಎಸ್.ಬಿ.ಪಾಟೀಲ, ಸಿದ್ದಣ್ಣ ನಾಗನೂರ, ಎಸ್.ಎಸ್.ಅಮರಶೆಟ್ಟಿ ಹಾಗೂ ತಾಲೂಕಿನ ವಿವಿಧ ಸಹಕಾರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯದರ್ಶಿಗಳು ಇದ್ದರು.
ಹಾಲಪ್ಪ ಜಗ್ಗಿನವರ ಸ್ವಾಗತಿಸಿದರು, ಶೈಲಜಾ ಕೊಕ್ಕರೆ ನಿರೂಪಿಸಿದರು.


