ಬೆಳಗಾವಿ, ನವೆಂಬರ್ 15: ಬೆಳಗಾವಿಯಲ್ಲಿ ಕಾಲ್ ಸೆಂಟರ್ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿಕೊಂಡು ದೂರದ ಅಮೆರಿಕಾ ನಾಗರಿಕರ ಡಾಲರ್ ಡಾಲರ್ ಹಣ ಎಗರಿಸುತ್ತಿದ್ದ ಗ್ಯಾಂಗೊಂದನ್ನು ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದಾರೆ. ಸೈಬರ್ ವಂಚನಾ ಗ್ಯಾಂಗ್ ಕೃತ್ಯವನ್ನು ಬೆಳಗಾವಿ ಸೈಬರ್ ಪೊಲೀಸರು ಪತ್ತೆಹಚ್ಚಿ, ದಾಳಿ ನಡೆಸಿ 33 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಮೇರಿಕಾ ಪ್ರಜೆಗಳನ್ನು ಗುರಿಯಾಗಿಸಿಕೊಂಡು ಕೋಟ್ಯಂತರ ಡಾಲರ್ ವಂಚಿಸುತ್ತಿದ್ದ ಈ ಗ್ಯಾಂಗ್ ವಿರುದ್ಧ ಈಗ ಸೈಬರ್ ಅಪರಾಧ ವಿಭಾಗದಲ್ಲಿ ಪ್ರಕರಣ ದಾಖಲಾಗಿದೆ.
ಕಾಲ್ ಸೆಂಟರ್ ಹೆಸರಿನಲ್ಲಿ ಡಾಲರ್ಗೆ ಕನ್ನ: ಬೆಳಗಾವಿಯಲ್ಲಿ ಖದೀಮರ್ ಗ್ಯಾಂಗ್ ಖೆಡ್ಡಾಗೆ

ಸೈಬರ್ ವಂಚಕರ ಗ್ಯಾಂಗ್ ಬೆಳಗಾವಿಯ ಅಜಮ್ ನಗರದ ಕುಮಾರ್ ಹಾಲ್ನಲ್ಲಿ ‘ಕಾಲ್ ಸೆಂಟರ್’ ಹೆಸರಿನಲ್ಲಿ ವ್ಯವಹಾರಕ್ಕೆ ಅನುಮತಿ ಪಡೆದು ವಂಚನೆ ಎಸಗುತ್ತಿತ್ತು. ಅನಾಮಧೇಯ ವ್ಯಕ್ತಿಗಳು ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಬೃಹತ್ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ 37 ಲ್ಯಾಪ್ಟಾಪ್ಗಳು, 37 ಮೊಬೈಲ್ಗಳು ಹಾಗೂ ವಂಚನೆಗೆ ಬಳಸಿದ್ದ ಅನೇಕ ಡಿಜಿಟಲ್ ಸಾಕ್ಷಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

