ಬೆಂಗಳೂರು (ನ.14): ಕರ್ನಾಟಕದಲ್ಲಿ ಮರ-ಗಿಡ, ಪರಿಸರ ರಕ್ಷಣೆ ಎಂದ್ರೆ ಥಟ್ ಅಂತ ನೆನಪಾಗುವ ಹೆಸರೇ ಸಾಲು ಮರದ ತಿಮ್ಮಕ್ಕ. ಸಾವಿರಾರು ಗಿಟ್ಟಗಳನ್ನ ನೆಟ್ಟು ಅವುಗಳನ್ನ ಮಕ್ಕಳಂತೆ ಸಾಕಿದ ಸಾಲು ಮರದ ತಿಮ್ಮಕ್ಕ ಇಂದು ಇಹಲೋಕ ತ್ಯಜಿಸಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಾಲು ಮರದ ತಿಮ್ಮಕ್ಕ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಉಸಿರೆಳೆದಿದ್ದಾರೆ. ಸಾಲುಮರದ ತಿಮ್ಮಕ್ಕ ಅವರಿಗೆ 114 ವರ್ಷ ವಯಸ್ಸಾಗಿತ್ತು. ವೃಕ್ಷಮಾತೆ ಎಂದು ಕರೆಸಿಕೊಳ್ಳುತ್ತಿದ್ದ ಸಾಲು ಮರದ ತಿಮ್ಮಕ್ಕ ನೆಟ್ಟ ಗಿಡಗಳೆಷ್ಟು ಗೊತ್ತಾ? ಅವುಗಳ ಮೌಲ್ಯವೇನು?
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಚಿಕ್ಕರಂಗಯ್ಯ ಹಾಗೂ ವಿಜಯಮ್ಮ ದಂಪತಿಯ ಪುತ್ರಿಯಾಗಿ ತಿಮ್ಮಕ್ಕ ಜನಿಸಿದರು. ಪೋಷಕರು ಶಾಲೆ ಕಳುಹಿಸದ ಹಿನ್ನೆಲೆ ತಿಮ್ಮಕ್ಕ ಮೊದಲು ದನಕರುಗಳನ್ನು ಮೇಯಿಸುತ್ತಿದ್ದರು. ದಿನಗೂಲಿ ನೌಕರರಾಗಿ ಕೆಲಸ ಮಾಡಿದ್ರು. ತಿಮ್ಮಕ್ಕ ಅವ್ರಿಗೆ 12ನೇ ವಯಸ್ಸಿನಲ್ಲೇ ಚಿಕ್ಕಯ್ಯ ಎನ್ನುವವರ ಜೊತೆ ಮದುವೆಯಾಯ್ತು.
ಚಿಕ್ಕಯ್ಯ ಅವರು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಹುಲಿಕಲ್ ಗ್ರಾಮದವರಾಗಿದ್ರು. ಮದುವೆಯಾಗಿ ಹಲವು ವರ್ಷಗಳಾದ್ರೂ ತಿಮ್ಮಕ್ಕ ಅವರಿಗೆ ಮಕ್ಕಳಾಗಿರಲ್ಲಿಲ್ಲ. ಹೀಗಾಗಿ ತಿಮ್ಮಕ್ಕ ಮಕ್ಕಳಿಲ್ಲದ ದುಃಖವನ್ನು ಮರೆಯೋಕೆ ಅಂತ ರಸ್ತೆಯ ಬದಿಗಳಲ್ಲಿ ಸಸಿಗಳನ್ನು ನೆಡಲು ಆರಂಭಿಸಿದ್ದರಂತೆ.


