ಬೆಳಗಾವಿ: 29ನೇ ಕರ್ನಾಟಕ ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೋರೇಟ್ (ಬೃಹತ್ ಮಕ್ಕಳ ಮೇಳ) ಇದೇ ಡಿಸೆಂಬರ್ 27ರಿಂದ ಜ.1ರ ವರೆಗೆ 6 ದಿನಗಳ ಕಾಲ ಬೆಳಗಾವಿಯಲ್ಲಿ ಏರ್ಪಡಿಸಲಾಗಿದೆ ಎಂದು ಮಾಜಿ ಸಚಿವ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಘಟಕದ ಅಧ್ಯಕ್ಷ ಪಿ.ಜಿ.ಆರ್. ಸಿಂಧ್ಯ ತಿಳಿಸಿದರು.
ನಗರದಲ್ಲಿ ಮಂಗಳವಾರ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಬೆಳಗಾವಿ ತಾಲೂಕಿನ ಹೊನಗಾ ಗ್ರಾಮದ ಫಿನಿಕ್ಸ್ ಪಬ್ಲಿಕ್ ಶಾಲೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಸ್ಕೌಟ್ಸ್, ಗೈಡ್ಸ್, ರೋವರ್ ಮತ್ತು ರೇಂಜರ್ಗಳು ಸೇರಿ 5 ಸಾವಿರಕ್ಕೂ ಅಧಿಕ ಮಕ್ಕಳು ಪಾಲ್ಗೊಳ್ಳಲಿದ್ದಾರೆ. ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಮಕ್ಕಳನ್ನು ಬಿಟ್ಟು ಇನ್ನುಳಿದ ತರಗತಿಗಳ ಸ್ಕೌಟ್ಸ್ ಮತ್ತು ಗೈಡ್ಸ್ಗಳು ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಪ್ರತಿ 4 ವರ್ಷಕ್ಕೊಮ್ಮೆ ಜಾಂಬೋರೇಟ್ ಏರ್ಪಡಿಸಲಾಗುತ್ತದೆ ಎಂದು ಹೇಳಿದರು.
ಇಲ್ಲಿಯವರೆಗೆ 28 ಜಾಂಬೋರೇಟ್ ನಡೆಸಲಾಗಿದೆ. 2001ರಲ್ಲಿ 24ನೇ ಜಾಂಬೋರೇಟ್ ಬೆಳಗಾವಿಯಲ್ಲಿ ಯಶಸ್ವಿಯಾಗಿ ನಡೆದಿತ್ತು. 24 ವರ್ಷಗಳ ಬಳಿಕ ಇದೀಗ ಮತ್ತೆ ಬೆಳಗಾವಿಯಲ್ಲೇ 29ನೇ ಜಾಂಬೋರೇಟ್ ನಡೆಯುತ್ತಿರುವುದು ಹರ್ಷ ತಂದಿದೆ. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಿದ್ದೇವೆ. ಅದೇ ರೀತಿ ಜಿಲ್ಲೆಯ ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ ಮತ್ತಿತರರು ಆಗಮಿಸಲಿದ್ದಾರೆ. ಇನ್ನು ಉತ್ತರಪ್ರದೇಶದ ಲಕ್ನೋದಲ್ಲಿ ರಾಷ್ಟ್ರಮಟ್ಟದ ಜಾಂಬೋರಿ ನಡೆಯುತ್ತಿದೆ. ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಆ ಕಾರ್ಯಕ್ರಮದಲ್ಲಿ ನಮ್ಮ ನಾಡಿನ ಹೆಮ್ಮೆಯ ಕಿತ್ತೂರು ರಾಣಿ ಚನ್ನಮ್ಮನವರ ಶೌರ್ಯ, ಸಾಹಸ ತಿಳಿಸುವ ಕೆಲಸ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ರಾಷ್ಟ್ರಪತಿ ಪುರಸ್ಕಾರ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸ್ಕೌಟ್ಸ್ ಮತ್ತು ಗೈಡ್ಸ್ನ ನೂರು ಮಕ್ಕಳಿಗೆ ಪ್ರತಿವರ್ಷ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಸೇರಿ ವೃತ್ತಿಪರ ಕೋರ್ಸ್ಗಳಿಗೆ ಮೀಸಲಿಡಲಾಗಿದೆ. ಅದೇ ರೀತಿ ರೈಲ್ವೆ ಇಲಾಖೆಯಲ್ಲಿ ನೇಮಕಾತಿಗೆ ಶೇ. 2ರಷ್ಟು ಮೀಸಲಾತಿ ಇದೆ. ಪೊಲೀಸ್ ಸೇರಿ ಮತ್ತಿತರ ಇಲಾಖೆ ನೇಮಕಾತಿಗಳಲ್ಲೂ ಸ್ಕೌಟ್ಸ್ ಮತ್ತು ಗೈಡ್ಸ್ಗಳಿಗೆ ಮೀಸಲಾತಿ ಕಲ್ಪಿಸಬೇಕು ಎಂಬ ಬೇಡಿಕೆ ಇದೆ ಎಂದು ಹೇಳಿದರು.


