ಉತ್ತರ ಕನ್ನಡ ಜಿಲ್ಲೆಯಾದ್ಯಂತ ತುರ್ತು ಹೈ ಅಲರ್ಟ್: ನೌಕಾನೆಲೆ, ಅಣುಸ್ಥಾವರಕ್ಕೆ ಬಿಗಿ ಭದ್ರತೆ

Ravi Talawar
ಉತ್ತರ ಕನ್ನಡ ಜಿಲ್ಲೆಯಾದ್ಯಂತ ತುರ್ತು ಹೈ ಅಲರ್ಟ್: ನೌಕಾನೆಲೆ, ಅಣುಸ್ಥಾವರಕ್ಕೆ ಬಿಗಿ ಭದ್ರತೆ
WhatsApp Group Join Now
Telegram Group Join Now

ಕಾರವಾರ(ಉತ್ತರ ಕನ್ನಡ):‌ ದೆಹಲಿ ಕಾರು ಬಾಂಬ್ ಸ್ಫೋಟ ಹಿನ್ನೆಲೆಯಲ್ಲಿ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಅದರಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ತುರ್ತು ಹೈ ಅಲರ್ಟ್ ಘೋಷಿಸಲಾಗಿದೆ. ಜಿಲ್ಲೆಯ ಸೂಕ್ಷ್ಮ ಮತ್ತು ಕಾರ್ಯತಂತ್ರದ ಪ್ರದೇಶಗಳಾದ ಕೈಗಾ ಅಣು ವಿದ್ಯುತ್ ಸ್ಥಾವರ, ಅರಗಾ ಸೀಬರ್ಡ್ ನೌಕಾನೆಲೆ ಹಾಗೂ ಜನನಿಬಿಡ ಸಾರ್ವಜನಿಕ ಸ್ಥಳಗಳಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಭಾರತದ ಅತಿದೊಡ್ಡ ನೌಕಾನೆಲೆ ಎನಿಸಿರುವ ಕಾರವಾರದ ಸೀಬರ್ಡ್ ಯೋಜನಾ ಪ್ರದೇಶದಲ್ಲಿ ಭದ್ರತೆ ಮತ್ತಷ್ಟು ಹೆಚ್ಚಿಸಲಾಗಿದೆ. ನೌಕಾನೆಲೆ ಸಿಬ್ಬಂದಿ ಮತ್ತು ಕಾರ್ಮಿಕರನ್ನು ಹೊರತುಪಡಿಸಿ ಮತ್ಯಾರಿಗೂ ಒಳಗೆ ಪ್ರವೇಶವಿಲ್ಲ. ವಿಸಿಟರ್ ಪಾಸ್‌ಗಳಿಗೂ ಕಟ್ಟುನಿಟ್ಟಿನ ನಿಯಮ ಅನ್ವಯಿಸಿದ್ದು, ಸದ್ಯಕ್ಕೆ ಯಾವುದೇ ಹೊಸ ವ್ಯಕ್ತಿಗಳ ಪ್ರವೇಶಕ್ಕೆ ಅನುಮತಿ ನೀಡುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿ ಹಾಗೂ ಯೋಜನಾ ಪ್ರದೇಶದ ಗಡಿಯುದ್ದಕ್ಕೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ನೌಕಾಪಡೆ ಮತ್ತು ಕೋಸ್ಟ್‌ಗಾರ್ಡ್‌ನಿಂದ ಸಮುದ್ರದಲ್ಲಿ ಪೆಟ್ರೋಲಿಂಗ್ ಕಾರ್ಯ ಆರಂಭವಾಗಿದೆ. ಸಮುದ್ರ ಮಾರ್ಗದಿಂದ ಯಾವುದೇ ಸಂಶಯಾಸ್ಪದ ಚಟುವಟಿಕೆ ನಡೆಯದಂತೆ ರಡಾರ್ ಸರ್ವೇಲೆನ್ಸ್, ಪೆಟ್ರೋಲ್ ಬೋಟ್‌ಗಳ ನಿಯೋಜನೆ ಹಾಗೂ ನೈಟ್ ಪೆಟ್ರೋಲಿಂಗ್ ಬಲಪಡಿಸಲಾಗಿದೆ.

​ಪೊಲೀಸ್ ಇಲಾಖೆಯು ಜಿಲ್ಲೆಯ ಕರಾವಳಿ ಭಾಗದಾದ್ಯಂತ ವ್ಯಾಪಕ ಪರಿಶೀಲನೆ ನಡೆಸಿದ್ದು, ಬಾಂಬ್ ಸ್ಕ್ವಾಡ್ ಮತ್ತು ಡಾಗ್ ಸ್ಕ್ವಾಡ್ ತಂಡಗಳನ್ನು ಬಳಕೆ ಮಾಡಲಾಗಿದೆ. ಎಸ್​ಪಿ ದೀಪನ್ ಎಮ್.ಎನ್. ನೇತೃತ್ವದಲ್ಲಿ ಸೋಮವಾರ ತಡರಾತ್ರಿ 2.30ರವರೆಗೂ ಕಾರ್ಯಾಚರಣೆ ನಡೆಯಿತು. ಕಾರವಾರದ ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ, ಬಂದರು, ಕ್ರಿಮ್ಸ್ ಜಿಲ್ಲಾಸ್ಪತ್ರೆ ಹಾಗೂ ಮಾಜಾಳಿ ಚೆಕ್‌ಪೋಸ್ಟ್​ಗಳಲ್ಲಿ ಡಾಗ್ ಸ್ಕ್ವಾಡ್ ಮತ್ತು ಬಾಂಬ್ ಸ್ಕ್ವಾಡ್ ಪ್ರತ್ಯೇಕ ತಂಡಗಳಾಗಿ ತಪಾಸಣೆ ನಡೆಸಿದವು.

​ಮಂಗಳವಾರ ಬೆಳಗ್ಗೆಯಿಂದಲೇ ಈ ಪರಿಶೀಲನಾ ಕಾರ್ಯವನ್ನು ಮುಂದುವರೆಸಲಾಗಿದ್ದು ಅಂಕೋಲಾ, ಗೋಕರ್ಣ, ಕುಮಟಾ, ಮುರುಡೇಶ್ವರ, ಭಟ್ಕಳ ಸೇರಿದಂತೆ ಕರಾವಳಿ ಭಾಗದ ರೈಲ್ವೇ ನಿಲ್ದಾಣಗಳು, ಬಸ್‌ಸ್ಟ್ಯಾಂಡ್‌ಗಳು, ದೇವಸ್ಥಾನಗಳು ಹಾಗೂ ವಿವಿಧ ಜನನಿಬಿಡ ಪ್ರದೇಶಗಳಲ್ಲಿ ಪೊಲೀಸರ ತಂಡಗಳಿಂದ ಬಿರುಸಿನ ತಪಾಸಣೆ ನಡೆದಿದೆ. ವಿಶೇಷವಾಗಿ, ಕೈಗಾ ಅಣುಸ್ಥಾವರದ ಸುತ್ತಮುತ್ತಲಿನ ಪ್ರದೇಶದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ದಿನದ 24 ಗಂಟೆಗಳ ಕಾಲ ನಿಗಾವಹಿಸಲಾಗಿದೆ.

WhatsApp Group Join Now
Telegram Group Join Now
Share This Article