ನವದೆಹಲಿ: ಕಳೆದ ಮೂವತ್ತು ವರ್ಷಗಳಲ್ಲಿ ಹವಾಮಾನ ವೈಪರೀತ್ಯ ಘಟನಾವಳಿಗಳಿಂದ ಹೆಚ್ಚು ಬಾಧಿತವಾದ ದೇಶಗಳಲ್ಲಿ ಭಾರತ ಜಗತ್ತಿನಲ್ಲೇ 9ನೇ ಸ್ಥಾನದಲ್ಲಿದೆ. ಸುಮಾರು 430 ತೀವ್ರ ಸ್ವರೂಪದ ಹವಾಮಾನ ವಿಕೋಪಗಳಿಂದ ಸುಮಾರು 80,000ಕ್ಕೂ ಹೆಚ್ಚು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಇತ್ತೀಚಿನ ಹೊಸ ವರದಿ ತಿಳಿಸಿದೆ.
ಪರಿಸರ ಚಿಂತಕರ ಚಾವಡಿ ‘ಜರ್ಮನ್‌ವಾಚ್’ ಬ್ರೆಜಿಲ್‌ನ ಬೆಲೆಮ್‌ನಲ್ಲಿ ಜಾಗತಿಕ ಹವಾಮಾನ ಪರಿಣಾಮಗಳ ಕುರಿತು ಚರ್ಚಿಸುವ COP30ನಲ್ಲಿ ಮಂಗಳವಾರ ಹವಾಮಾನ ಅಪಾಯ ಸೂಚ್ಯಂಕ (ಸಿಆರ್‌ಐ) 2026 ಎಂಬ ವರದಿ ಬಿಡುಗಡೆ ಮಾಡಿತು.
ಈ ವರದಿಯ ಪ್ರಕಾರ, ಹವಾಮಾನ ವಿಕೋಪಗಳು 1.3 ಬಿಲಿಯನ್ ಜನರ ಬದುಕಿನ ಮೇಲೆ ಪರಿಣಾಮ ಬೀರಿವೆ. ಅಷ್ಟೇ ಅಲ್ಲದೇ, 1995ರಿಂದ 2024ರ ವರೆಗೆ ಅಂದರೆ ಕಳೆದ ವರ್ಷದವರೆಗೆ ಅಂದಾಜು 170 ಬಿಲಿಯನ್ ಯುಎಸ್ ಡಾಲರ್ ಆರ್ಥಿಕ ನಷ್ಟ ಉಂಟುಮಾಡಿದೆ ಎಂದಿದೆ.
ಜಾಗತಿಕ ತಾಪಮಾನ ಏರಿಕೆಯೊಂದಿಗೆ ಪದೇ ಪದೇ ನಡೆಯುತ್ತಿರುವ ಪ್ರವಾಹ, ಚಂಡಮಾರುತ, ಬರ ಮತ್ತು ಶಾಖದ ಅಲೆಗಳಿಂದಾಗಿ ಭಾರತದಲ್ಲಿ ನಷ್ಟಗಳು ಹೆಚ್ಚಾಗುತ್ತಿವೆ ಎಂದು ವರದಿ ಉಲ್ಲೇಖಿಸಿದೆ. 1998ರ ಗುಜರಾತ್ ಚಂಡಮಾರುತ, 1999ರ ಒಡಿಶಾ ಚಂಡಮಾರುತ, 2013ರ ಉತ್ತರಾಖಂಡ ಪ್ರವಾಹ ಮತ್ತು ಇತ್ತೀಚಿನ ಶಾಖದಲೆಗಳ ಪರಿಣಾಮ ಭಾರತ ಸಾಕಷ್ಟು ಕಷ್ಟ-ನಷ್ಟ ಅನುಭವಿಸಿದೆ ಎಂಬ ಅಂಶ ವರದಿಯಲ್ಲಿದೆ.
ದೇಶ ಹಲವು ಪ್ರಾಕೃತಿಕ ವಿಪತ್ತುಗಳಿಗಿಂತ ನಿರಂತರವಾಗಿ ಬೆದರಿಕೆ ಎದುರಿಸುತ್ತಿದೆ. ಪುನರಾವರ್ತಿತ ವಿಪತ್ತುಗಳು ಅಭಿವೃದ್ಧಿಯ ಲಾಭಗಳನ್ನು ಸ್ಥಿರವಾಗಿ ನಾಶ ಮಾಡುತ್ತಿವೆ. ಇದರೊಂದಿಗೆ ಜನರ ಜೀವನೋಪಾಯವನ್ನೂ ಹಾಳುಮಾಡಿವೆ ಎಂಬುದು ವರದಿಯಲ್ಲಿದೆ. ಜನಸಂಖ್ಯೆ ಮತ್ತು ಮಳೆಯ ಏರಿಳಿತಗಳಿಗೆ ಹೆಚ್ಚಿನ ಒಡ್ಡಿಕೊಳ್ಳುವಿಕೆಯು ಅದನ್ನು ಇನ್ನಷ್ಟು ದುರ್ಬಲಗೊಳಿಸುತ್ತದೆ. ಹೀಗೆ, ವಿಪರೀತ ಘಟನೆಗಳು ಪ್ರತಿವರ್ಷ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತವೆ ಎಂದು ವರದಿ ತಿಳಿಸಿದೆ.
2024ರಲ್ಲಿ ಮಾತ್ರ ಭಾರತ ವಿಪರೀತ ಮಳೆ ಮತ್ತು ದಿಢೀರ್ ಪ್ರವಾಹದಿಂದ ತತ್ತರಿಸಿದೆ. ಇದು ಎಂಟು ದಶಲಕ್ಷಕ್ಕೂ ಹೆಚ್ಚು ಜನರ ಮೇಲೆ, ಅದರಲ್ಲೂ ಗುಜರಾತ್, ಮಹಾರಾಷ್ಟ್ರ ಮತ್ತು ತ್ರಿಪುರದಲ್ಲಿ ಹೆಚ್ಚು ಪರಿಣಾಮ ಬೀರಿದೆ ಎಂಬುದನ್ನು ವರದಿ ಹೇಳಿದೆ.
ಪ್ರವಾಹ ಮತ್ತು ಬಿರುಗಾಳಿ ಕಳೆದ ವರ್ಷ ಜಾಗತಿಕವಾಗಿ ಅತ್ಯಂತ ಹಾನಿಕಾರಕ ಘಟನೆಗಳಾಗಿವೆ. ಇದರಿಂದಾಗಿ ವಿಶ್ವದ ಸುಮಾರು ಅರ್ಧದಷ್ಟು ಜನರು ತೊಂದರೆ ಅನುಭವಿಸಿದ್ದಾರೆ. ಶತಕೋಟಿ ನಷ್ಟವೂ ಆಗಿದೆ ಎಂದಿದೆ.
ಜರ್ಮನ್ ವಾಚ್ ಪ್ರಕಾರ, ಜಗತ್ತಿನಲ್ಲಿ 1995ರಿಂದ 2024ರ ವರೆಗೆ 9,700ಕ್ಕೂ ಹೆಚ್ಚು ಹವಾಮಾನ ವೈಪರೀತ್ಯಗಳಿಂದ 8.3 ಲಕ್ಷಕ್ಕೂ ಹೆಚ್ಚು ಜನರ ಸಾವು ಸಂಭವಿಸಿದೆ. ಸುಮಾರು 5.7 ಶತಕೋಟಿ ಜನರನ್ನು ವಿಕೋಪಗಳು ಬಾಧಿಸಿವೆ. ಅಂದಾಜು 4.5 ಟ್ರಿಲಿಯನ್ ಯುಎಸ್ ಡಾಲರ್‌ಗಳಷ್ಟು ನೇರ ಆರ್ಥಿಕ ಹಾನಿಯಾಗಿದೆ.


