ಬೆಂಗಳೂರು, ನವೆಂಬರ್ 11: ದೆಹಲಿಯಲ್ಲಿ ಕಾರು ಸ್ಫೋಟ ಪ್ರಕರಣದ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಅಮಿತ್ ಶಾ ಅವರು ಅತ್ಯಂತ ಅಸಮರ್ಥ ಗೃಹ ಸಚಿವರು ಎಂದು ಖರ್ಗೆ ಹೇಳಿದ್ದಾರೆ. ದೆಹಲಿ, ಮಣಿಪುರ, ಪುಲ್ವಾಮಾ ಮತ್ತು ಪೆಹೆಲ್ಗಾಮ್ ಘಟನೆಗಳನ್ನು ಉಲ್ಲೇಖಿಸಿದ ಅವರು, ಇಂತಹ ಘಟನೆಗಳಿಗೆ ಯಾರು ಹೊಣೆಗಾರರು ಎಂದು ಪ್ರಶ್ನಿಸಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಇಂತಹ ಸಾವಿರಾರು ಪ್ರಾಣಹಾನಿಗಳು ಸಂಭವಿಸಿದ್ದು, ಗುಪ್ತಚರ ಇಲಾಖೆಯ ವೈಫಲ್ಯವೇ ಇದಕ್ಕೆ ಕಾರಣ ಎಂದಿದ್ದಾರೆ. ಬಾಂಗ್ಲಾದೇಶಿಗಳು ದೇಶಕ್ಕೆ ನುಸುಳುತ್ತಿರುವ ಬಗ್ಗೆ ಸ್ವತಃ ಅಮಿತ್ ಶಾ ಅವರು ವಿವಿಧ ರಾಜ್ಯಗಳಲ್ಲಿ ಹೇಳಿಕೆ ನೀಡಿದ್ದನ್ನು ನೆನಪಿಸಿದ ಅವರು, ಹಾಗಾದರೆ ಇದಕ್ಕೆ ಯಾರು ಜವಾಬ್ದಾರರು ಎಂದು ಕೇಳಿದ್ದಾರೆ. ಅಲ್ಲದೆ, ಈ ಎಲ್ಲಾ ಘಟನೆಗಳ ನೈತಿಕ ಹೊಣೆ ಹೊತ್ತು ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಸಚಿವ ಖರ್ಗೆ ಒತ್ತಾಯಿಸಿದ್ದಾರೆ.

