ಗ್ರಾಮೀಣ ಅಭಿವೃದ್ಧಿಗೆ ಬಿಡುಗಡೆ ಆಗುವ ಅನುದಾನ ಸದುಪಯೋಗವಾಗಬೇಕು:  ಡಿ.ಆರ್.ಪಾಟೀಲ

Ravi Talawar
 ಗ್ರಾಮೀಣ ಅಭಿವೃದ್ಧಿಗೆ ಬಿಡುಗಡೆ ಆಗುವ ಅನುದಾನ ಸದುಪಯೋಗವಾಗಬೇಕು:  ಡಿ.ಆರ್.ಪಾಟೀಲ
WhatsApp Group Join Now
Telegram Group Join Now
ಧಾರವಾಡ : ಗ್ರಾಮೀಣ ಅಭಿವೃದ್ಧಿಗೆ ಸರಕಾರದಿಂದ ಬಿಡುಗಡೆ ಆಗುವ ಅನುದಾನದ ಪ್ರತಿ ಪೈಸೆ ಸದುಪಯೋಗವಾಗಬೇಕು. ಯೋಜನೆಗೆ ಅನುಗುಣವಾಗಿ ಹಣ ಬಳಕೆ ಆಗಬೇಕು. ಅಭಿವೃದ್ಧಿಯಲ್ಲಿ ತಾರತಮ್ಯ ಆಗಬಾರದು. ಎಲ್ಲರನ್ನು ಸಮಾನವಾಗಿ ಕಾಣಬೇಕು. ಅಂದಾಗ ಮಾತ್ರ ಅಭಿವೃದ್ಧಿಗೆ ವೇಗ ಮತ್ತು ಸ್ಪಂದನೆ ಸೀಗುತ್ತದೆ ಎಂದು ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಿ.ಆರ್.ಪಾಟೀಲ ಅವರು ಹೇಳಿದರು.
 ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬೆಳಗಾವಿ ವಿಭಾಗ ಮಟ್ಟದ ಎಲ್ಲ ಜಿಲ್ಲೆಗಳ 2026-27 ನೇ ಸಾಲಿನ ಜಿಲ್ಲಾ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮ ಅಭಿವೃದ್ಧಿ ನಮ್ಮ ಸಹಭಾಗಿತ್ವದಲ್ಲಿ ಎಂಬ ಬಲವಾದ ನಂಬಿಕೆ ಸಾಮಾನ್ಯ ಜನರಲ್ಲಿ ಮೂಡಬೇಕು. ಇದಕ್ಕಾಗಿ ಯೋಜನೆಗಳ ವಿಕೇಂದ್ರಿಕರಣ, ಅಧಿಕಾರದ ವಿಕೇಂದ್ರಿಕರಣ ಆಗಬೇಕು. ಅಂದಾಗ ಪಂಚಾಯತ ರಾಜ್ಯ ವ್ಯವಸ್ಥೆಗೆ ಸ್ವರೂಪ ಬರುತ್ತದೆ ಎಂದು ಅವರು ಹೇಳಿದರು.
ಹಳ್ಳಿ ಸ್ವಚ್ಛ ಮಾಡಿದರೆ, ಅದು ಸ್ವರ್ಗವಾಗುತ್ತದೆ. ಗ್ರಾಮಗಳಲ್ಲಿ ಶೌಚಾಲಯ ಹೆಚ್ಚಿಸಿ. ಗ್ರಾಮದ ಸ್ವಚ್ಛತೆಗೆ ತಿಂಗಳಗೊಂದು ದಿನ ಶ್ರಮದಾನ ಮಾಡಿ. ಅಧಿಕಾರಿಗಳ ನಡೆ ಜನರಲ್ಲಿ ಧನಾತ್ಮಕ ಪ್ರೇರಣೆ ಬೆಳೆಸಬೇಕು ಎಂದು ಹೇಳಿದರು.
ಸರಕಾರದ ನಿಯಮಗಳ ಚೌಕಟ್ಟಿನಲ್ಲಿ ಕೆಲಸ ಮಾಡಿ, ಖುಷಿ ಪಡೋಣ. ಜನರ ಭಾವನೆಗಳನ್ನು ಗೌರವಿಸಿ, ಬೇಡಿಕೆಗಳಿಗೆ ಸ್ಪಂಧಿಸಿದರೆ, ಜನರು ನಿಮ್ಮನ್ನು ದೈವಿ ಸ್ವರೂಪದಲ್ಲಿ ಕಾಣುತ್ತಾರೆ. ನಮಗೆ ಸಿಕ್ಕ ಸ್ಥಾನಮಾನ ಜನರ ಪ್ರಗತಿಗೆ ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.
ಬರುವ ಮಾರ್ಚ 31 ರೊಳಗೆ ಬೆಳಗಾವಿ ವಿಭಾಗದ ಎಲ್ಲ ಗ್ರಾಮಗಳಲ್ಲಿ ಸ್ಮಶಾನ ಸೌಲಭ್ಯ ಸೀಗಬೇಕು. ಇದು ಗ್ರಾಮಗಳ ಮೂಲಸೌಕರ್ಯವಾಗಿದ್ದು, ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.
ಚಕ್ಕಡಿ ದಾರಿಗೆ ನವಲಗುಂದ ಶಾಸಕರು, ಧಾರವಾಡ ಗ್ರಾಮೀಣ ಶಾಸಕರ ಕಾರ್ಯಗಳು ಮಾದರಿ ಆಗಿವೆ. ಗ್ರಾಮೀಣ ಜನರ ಮತ್ತು ರೈತರ ಸಕ್ರೀಯವಾಗಿ ಪಾಲ್ಗೋಳ್ಳುವಿಕೆಯಿಂದ ಸಾಧ್ಯವಾಗಿದೆ ಎಂದು ಅವರು ಹೇಳಿದರು.
ಯೋಜನೆಗಳು ಅಧಿಕಾರಿಗಳ ಹಂತದಲ್ಲಿ ರೂಪಿತವಾಗಬಾರದು. ಸಾರ್ವಜನಿಕರ ಸಹಭಾಗಿತ್ವದಲ್ಲಿ ಯೋಜನೆಗಳು ರಚನೆ ಆಗಬೇಕು. ಜನರ ಬೇಡಿಕೆಗಳಿಗೆ ಸ್ಪಂಧಿಸುವ ಯೋಜನೆಗಳು ದೀರ್ಘಕಾಲಿಕ ಬಾಳಿಕೆ ಬರುತ್ತವೆ ಎಂದು ಅಧ್ಯಕ್ಷರಾದ ಡಿ.ಆರ್.ಪಾಟೀಲ ಅವರು ಹೇಳಿದರು.
ಜನರ ಪಾಲ್ಗೋಳ್ಳುವಿಕೆಯಿಂದ ಮಾತ್ರ ಅಭಿವೃದ್ಧಿ ಯೋಜನೆ ಯಶಸ್ವಿಯಾಗುತ್ತದೆ. ಜನರ ಬೇಡಿಕೆಗಳನ್ನು ಗ್ರಾಮ ಸಭೆಗಳ ಮೂಲಕ ಸಂಗ್ರಹಿಸಿ, ಯೋಜನೆಗಳನ್ನು ರೂಪಿಸಬೇಕು. ಜಿಲ್ಲಾ ವಾರ್ಷಿಕ ಅಭಿವೃದ್ಧಿ ಯೋಜನೆ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಪ್ರತೀಕವಾಗಿರಬೇಕು. ಎಲ್ಲ ವರ್ಗದ ಜನರ, ಸಮುದಾಯಗಳ ಬೇಡಿಕೆಗಳನ್ನು ಗ್ರಾಮ ಮಟ್ಟದಲ್ಲಿ ಚರ್ಚಿಸಿ, ಸೆರ್ಪಡೆಗೊಳಿಸಬೇಕು ಎಂದರು.
ಗಾಂಧಿಜೀಯವರ ಸ್ವರಾಜ್ಯದ ಕನಸು ನನಸು ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಎಲ್ಲರೂ ಪ್ರಾಮಾಣೀಕ ಪ್ರಯತ್ನ ಮಾಡಬೇಕು ಎಂದು ಅವರು ಹೇಳಿದರು.
ನವಲಗುಂದ ಶಾಸಕರಾದ ಎನ್.ಎಚ್.ಕೋನರಡ್ಡಿ ಅವರು ಸಭೆಯಲ್ಲಿ ಮಾತನಾಡಿ, ಸ್ಥಳೀಯ ಸಂಸ್ಥೆಗಳಿಗೆ ಕಾಯಕಲ್ಪ ನೀಡುವ ಉದ್ದೇಶ. ಸರಕಾರದ ಯೋಜನೆಗಳು ಜನರಿಗೆ ತಲುಪಿಸಲು  ಶಾಸಕರೊಂದಿಗೆ, ಜನಪ್ರತಿನಧಿಗಳೊಂದಿಗೆ ಅಧಿಕಾರಿಗಳು ಕೈ ಜೋಡಿಸಬೇಕು ಎಂದು ಅವರು ಹೇಳಿದರು.
ರಾಜ್ಯಕ್ಕೆ ಮಾದರಿ ಆಗಿರುವ ಹೊಲದ ರಸ್ತೆಯು ನವಲಗುಂದ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 300 ಕೀ.ಮೀ. ರಷ್ಟು ಆಗಿದೆ. ಅನೇಕ ಮಂತ್ರಿಗಳು, ಶಾಸಕರು, ಹಿರಿಯ ಅಧಿಕಾರಿಗಳು ಈ ಚಕ್ಕಡಿ ರಸ್ತೆ ಬಗ್ಗೆ ಶ್ಲಾಘೀಸಿದ್ದಾರೆ ಎಂದು ಅವರು ಹೇಳಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ, ಗ್ರಾಮೀಣ ಅಭಿವೃದ್ಧಿಯಲ್ಲಿ  ಪ್ರಮುಖ ಪಾತ್ರವಹಿಸುತ್ತದೆ. ಇದರ ಪರಿಣಾಮಕಾರಿ ಬಳಕೆ ಆಗಬೇಕು ಎಂದು ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದರು.
ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಜಾನಕಿ.ಕೆ.ಎಂ. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಇವತ್ತಿನ ಈ ಸಭೆ ಅತ್ಯಂತ ಅಮೂಲ್ಯ, ಗ್ರಾಮ ಸ್ವರಾಜ್ಯದ ಕಲ್ಪನೆಯನ್ನು ಸಾಕಾರಗೊಳಿಸುವುದು ಮುಖ್ಯವಾಗಿದೆ. ಈ ವರ್ಷದಿಂದ ಗ್ರಾಮ, ತಾಲೂಕು, ಜಿಲ್ಲೆಯ ಅಭಿವೃದ್ಧಿಗೆ ಸಾರ್ವಜನಿಕರ ಸಹಭಾಗಿತ್ವ ಮುಖ್ಯವಾಗಿದೆ.
ಯೋಜನಾ ಹಂತದಲ್ಲಿ ಪ್ರತಿಯೊಬ್ಬರಿಗೂ ಇಚ್ಛಾಶಕ್ತಿ ಇರಬೇಕು. ಗ್ರಾಮ ಸ್ವರಾಜ್ಯ ಪಾರದರ್ಶಕವಾಗಿ, ನಿಯಮಾನುಸಾರ ಆಗಬೇಕು. ಯೋಜನಾಭಿವೃದ್ಧಿಯು ಕ್ಷೇತ್ರಮಟ್ಟದಲ್ಲಿ ಸ್ಫೂರ್ತಿಯಿಂದ ಜಾರಿ ಆಗಬೇಕು. ಯೋಜನಾ ಅನುμÁ್ಠನದಲ್ಲಿ ಲಭ್ಯ ತಾಂತ್ರಿಕತೆಯನ್ನು ಬಳಸಿಕೊಂಡು, ಜನರ ಬೇಡಿಕೆಗಳಿಗೆ ಅನುಗುಣವಾಗಿ ಅಭಿವೃದ್ಧಿಯ ಕರಡು ರೂಪಿಸಬೇಕು ಎಂದು ಹೇಳಿದರು.
ಪ್ರತಿಯೊಬ್ಬ ಅಧಿಕಾರಿ ತಮಗೆ ಸಿಗುವ ಅವಕಾಶವನ್ನು ಪ್ರಾಮಾಣಿಕತೆಯಿಂದ ಬಳಸಿಕೊಂಡು ಸರಕಾರದ ಕಾರ್ಯಕ್ಷಮತೆ ಹೆಚ್ವುವಂತೆ ಮಾಡಬೇಕು. ಜನರಿಗೆ ಉಪಯುಕ್ತತೆ, ಗ್ರಾಮಕ್ಕೆ ಒಂದು ಆಸ್ತಿ ಆಗುವಂತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಪ್ರಾದೇಶಿಕ ಆಯುಕ್ತರಾದ ಜಾನಕಿ. ಕೆ.ಎಂ. ಅವರು ತಿಳಿಸಿದರು.
ಪ್ರತಿ ತಿಂಗಳ 4ನೇ ರವಿವಾರ ಸ್ವಚ್ಛತಾ ದಿನ: ಬೆಳಗಾವಿ ವಿಭಾಗದ ಪ್ರತಿ ಗ್ರಾಮ ಮತ್ತು ನಗರಗಳಲ್ಲಿ ಜನವರಿ ತಿಂಗಳ 4ನೇ ರವಿವಾರದಂದು ಸ್ವಚ್ಛತಾ ವಾರ ಆಚರಿಸಬೇಕು. ಈ ಪರಂಪರೆ ಮುಂದಿನ ಪ್ರತಿ ತಿಂಗಳ 4ನೇ ರವಿವಾರದಂದು ಎಲ್ಲ ಜಿಲ್ಲೆಗಳಲ್ಲಿ ಅಧಿಕಾರಿಗಳು ಸಮುದಾಯದ ಸಹಭಾಗಿತ್ವದಲ್ಲಿ ಸ್ವಚ್ಛತಾ ವಾರ ಆಚರಿಸಿ, ಗ್ರಾಮ ಮತ್ತು ನಗರಗಳ ಸ್ವಚ್ಛತೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲ ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶಗಳಿಂದ ಕ್ರಿಯಾಯೋಜನೆ ಸಿದ್ದಪಡಿಸಿಕೊಳ್ಳಬೇಕೆಂದು ಪ್ರಾದೇಶಿಕ ಆಯುಕ್ತರಾದ ಜಾನಕಿ ಕೆ.ಎಂ. ಅವರು ಅಧಿಕಾರಿಗಳಿಗೆ ತಿಳಿಸಿದರು.
ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಸರಿಯಾಗಿ ಯೋಜನೆಗಳ ಅನುಷ್ಠಾನ ಆಗುವದರಿಂದ ಅನೇಕ ಸಮಸ್ಯೆಗಳು ಬಗೆ ಹರಿಯುತ್ತವೆ. ಸಾರ್ವಜನಿಕರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಒಟ್ಟಾಗಿ ಹೋಗುವದರಿಂದ, ಸಮನ್ವಯದಿಂದ ಕೆಲಸ ಮಾಡುವದರಿಂದ ಅಭಿವೃದ್ಧಿ ಸಾಧ್ಯವಾಗುತ್ತದೆ.
ಧಾರವಾಡ ಜಿಲ್ಲೆಯಲ್ಲಿ ಜಿಲ್ಲಾ ಅಭಿವೃದ್ಧಿ ಯೋಜನೆಯ ಕರಡು ವರದಿ ಸಿದ್ದಗೊಳಿಸಲಾಗುತ್ತಿದೆ. ಗ್ರಾಮ ಮಟ್ಟದಲ್ಲಿ ಸಭೆಗಳ ಆಯೋಜನೆ ಕಾರ್ಯಕ್ರಮ ಪ್ರಗತಿಯಲ್ಲಿದೆ. ವಿಕೇಂದ್ರೀಕರಣ ಸಫಲಗೊಳಿಸಲು ನಮ್ಮ ಎಲ್ಲ ಜಿಲ್ಲಾಧಿಕಾರಿಗಳು, ಸಿಇಓಗಳು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು  ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ವೇದಿಕೆಯಲ್ಲಿ ಗದಗ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ, ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ.ಲಕ್ಷ್ಮಿ ಪ್ರಿಯಾ, ಬೆಳಗಾವಿ ಜಿಲ್ಲಾಧಿಕಾರಿ ಮಹಮ್ಮದ ರೋಷನ್, ಕರ್ನಾಟಕ ಬಾಲ ವಿಕಾಸ ಅಕಾಡಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಧಾರವಾಡ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಬೆಳಗಾವಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಉತ್ತರ ಕನ್ನಡ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ದೀಲಿಶ್ ಸಶಿ ಹಾಗೂ ಇತರರು ಇದ್ದರು.
2026-27 ನೇಯ ಸಾಲಿನ ಜಿಲ್ಲಾ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಜಿಲ್ಲಾ ಕರಡು ಅಭಿವೃದ್ಧಿ ಯೋಜನೆ ತಯ್ಯಾರಿ ಕುರಿತು ಧಾರವಾಡ ಜಿಲ್ಲಾ ಪಂಚಾಯತ ಸಿಪಿಓ ದೀಪಕ ಮಡಿವಾಳರ, ಬೆಳಗಾವಿ ಜಿಲ್ಲಾ ಪಂಚಾಯತ ಸಿಪಿಓ ಗಂಗಾಧರ ದೀವಟೇರ, ಗದಗ ಜಿಲ್ಲಾ ಪಂಚಾಯತ ಸಿಪಿಓ ಕಂಬಾಳಿಮಠ, ಹಾವೇರಿ ಜಿಲ್ಲಾ ಪಂಚಾಯತ ಸಿಪಿಓ ಹೆಚ್.ವೈ.ಮೀಸಿ, ಉತ್ತರ ಕನ್ನಡ ಜಿಲ್ಲಾ ಪಂಚಾಯತ ಸಿಪಿಓ ಸೋಮಶೇಖರ ಮಿಸ್ತಾ, ಬಾಗಲಕೋಟ ಜಿಲ್ಲಾ ಪಂಚಾಯತ ಸಿಇಓ ಅಲ್ಲಮಪ್ರಭು ಅಲ್ಲಾಪುರ ಅವರು ವಿವರಿಸಿದರು.
ಸಭೆಯಲ್ಲಿ ಧಾರವಾಡ, ಗದಗ, ಬೆಳಗಾವಿ, ಬಾಗಲಕೋಟ, ಉತ್ತರ ಕನ್ನಡ, ಹಾವೇರಿ ಜಿಲ್ಲೆಗಳ ಎಲ್ಲ ತಾಲೂಕು ಪಂಚಾಯತಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ವಿವಿಧ ಇಲಾಖೆಗಳ ಧಾರವಾಡ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article