ಫರಿದಾಬಾದ್(ನವದೆಹಲಿ): ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣ ಪೊಲೀಸರು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ದೆಹಲಿಯ ಫರಿದಾಬಾದ್‌ನ ಮನೆಯೊಂದರಲ್ಲಿ ಅಪಾರ ಪ್ರಮಾಣದ ದಹನಕಾರಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇವುಗಳು ಅಮೋನಿಯಂ ನೈಟ್ರೇಟ್ ಮತ್ತು ಅಸಾಲ್ಟ್ ರೈಫಲ್ ಮತ್ತು ಮದ್ದುಗುಂಡುಗಳಾಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಕಳೆದ ವಾರ ಬಂಧನಕ್ಕೊಳಗಾಗಿದ್ದ ವೈದ್ಯ ನೀಡಿದ ಮಾಹಿತಿ ಮೇರೆಗೆ ಈ ದಾಳಿ ದಾಳಿ ನಡೆದಿದೆ.
ಈ ಕುರಿತು ಮಾಧ್ಯಮಗೋಷ್ಟಿಯಲ್ಲಿ ಮಾಹಿತಿ ನೀಡಿದ ಫರಿದಾಬಾದ್ ಪೊಲೀಸ್ ಆಯುಕ್ತರು, ಫರಿದಾಬಾದ್‌ನ ಧೌಜ್ ಪ್ರದೇಶದ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ಬೋಧನೆ ಮಾಡುತ್ತಿದ್ದ ಡಾ.ಮುಜಮ್ಮಿಲ್ನನ್ನು ಕೆಲವು ದಿನಗಳ ಹಿಂದೆ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆಯಲ್ಲಿ ವಶಕ್ಕೆ ಪಡೆಯಲಾಗಿತ್ತು. ಇದಾದ ಬಳಿಕ ಭಾನುವಾರ ಇಲ್ಲಿನ ಹಲವು ಸ್ಥಳಗಳಲ್ಲಿ ದಾಳಿ ನಡೆಸಲಾಯಿತು. ಕಳೆದ ಕೆಲವು ದಿನಗಳಿಂದ ಫರಿದಾಬಾದ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಾರ್ಯಾಚರಣೆಯಲ್ಲಿ ಮುಜಮ್ಮಿಲ್ನನ್ನು ನಮ್ಮ ತಂಡ ಬಂಧಿಸಿದೆ. ನಿನ್ನೆ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ್ದು, ಈ ವೇಳೆ ಮನೆಯೊಂದರಲ್ಲಿ 360 ಕೆಜಿ ದಹನಕಾರಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಅದು ಬಹುಶಃ ಅಮೋನಿಯಂ ನೈಟ್ರೇಟ್ ಆಗಿರಬಹುದು. ಆದರೆ, ಆರ್‌ಡಿಎಕ್ಸ್ ಅಲ್ಲ ಎಂದು ಸ್ಪಷ್ಟವಾಗಿದೆ. ತನಿಖೆ ಮುಂದುವರೆದಿದೆ ಎಂದು ಹೇಳಿದರು.


