ನವದೆಹಲಿ, ನವೆಂಬರ್ 10: ರೈತರಿಗೆ ವಿಶೇಷ ಗುರುತಿನ ಚೀಟಿ ಕೊಡುವ ಕೇಂದ್ರ ಸರ್ಕಾರದ ಕಿಸಾನ್ ಪೆಹಚಾನ್ ಕಾರ್ಡ್ ಯೋಜನೆ ಭರದಿಂದ ಸಾಗಿದೆ. ವರದಿಗಳ ಪ್ರಕಾರ 16 ರಾಜ್ಯಗಳಿಂದ 7.4 ಕೋಟಿ ರೈತರಿಗೆ ಈ ಐಡಿಯನ್ನು ನೀಡಲಾಗಿದೆ. ಈಗ ಪಂಜಾಬ್, ಹಿಮಾಚಲ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲೂ ಅಭಿಯಾನ ನಡೆಯುತ್ತಿದೆ. ಈ ಹಣಕಾಸು ವರ್ಷದೊಳಗೆ 9 ಕೋಟಿ ಕಿಸಾನ್ ಪೆಹಚಾನ್ ಕಾರ್ಡ್ ವಿತರಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.
ಕಿಸಾನ್ ಪೆಹಚಾನ್ ಕಾರ್ಡ್ ಮೂಲಕ ಕೇಂದ್ರ ಸರ್ಕಾರವು ರಾಷ್ಟ್ರವ್ಯಾಪಿ ರೈತರ ಡಿಜಿಟಲ್ ರಿಜಿಸ್ಟ್ರಿಯನ್ನು ಸ್ಥಾಪಿಸುವ ಉದ್ದೇಶ ಹೊಂದಿದೆ. ಡಿಜಿಟಲ್ ಅಗ್ರಿಕಲ್ಚರ್ ಮಿಷನ್ ಅಡಿಯಲ್ಲಿ ಈ ಹೆಜ್ಜೆ ಇಡಲಾಗುತ್ತಿದೆ. ಈ ಡಿಜಿಟಲ್ ಅಗ್ರಿಕಲ್ಚರ್ ಮಿಷನ್ ಅಡಿಯಲ್ಲಿ ರೈತರಿಗೆ ಹಲವ ಯೋಜನೆಗಳನ್ನು ವಿತರಿಸಲು ಅನುಕೂಲವಾಗುತ್ತದೆ. ಹೀಗಾಗಿ, ರೈತರನ್ನು ಗುರುತಿಸಿ ಕಿಸಾನ್ ಪೆಹಚಾನ್ ಕಾರ್ಡ್ಗಳನ್ನು ವಿತರಿಸುವುದು ಬಹಳ ಮುಖ್ಯ ಹೆಜ್ಜೆ ಎನ್ನಲಾಗಿದೆ. ಪಿಎಂ ಕಿಸಾನ್ ಸೇರಿದಂತೆ ರೈತರಿಗೆ ಸರ್ಕಾರ ರೂಪಿಸುವ ವಿವಿಧ ಯೋಜನೆಗಳಿಗೆ ಈ ಕಾರ್ಡ್ ಮುಖ್ಯ ದಾಖಲೆಯಾಗಿ ಅಥವಾ ಆಧಾರವಾಗಿ ಇರುತ್ತದೆ.
ಅತಿಹೆಚ್ಚು ರೈತರಿಗೆ ಈ ಗುರುತಿನ ಕಾರ್ಡ್ ವಿತರಿಸಿರುವುದು ಉತ್ತರ ಪ್ರದೇಶ ರಾಜ್ಯ. ಇಲ್ಲಿ 1.56 ಕೋಟಿ ರೈತರಿಗೆ ಪೆಹಚಾನ್ ಕಾರ್ಡ್ ಕೊಡಲಾಗಿದೆ. ಮಹಾರಾಷ್ಟ್ರದಲ್ಲೂ ಕೋಟಿಗಿಂತ ಹೆಚ್ಚು ರೈತರಿಗೆ ಕಾರ್ಡ್ ಕೊಡಲಾಗಿದೆ. ಮಧ್ಯಪ್ರದೇಶ ರಾಜಸ್ಥಾನ್, ಗುಜರಾತ್, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಲ್ಲೂ ಸಾಕಷ್ಟು ಪೆಹಚಾನ್ ಕಾರ್ಡ್ಗಳನ್ನು ವಿತರಿಸಲಾಗಿದೆ.


