ನವದೆಹಲಿ: ಇಂದು ಪಾಕಿಸ್ತಾನ ಅಣ್ವಸ್ತ್ರ ರಾಷ್ಟ್ರವಾಗಲು ಒಂದರ್ಥದಲ್ಲಿ ಭಾರತವೇ ಕಾರಣವಾಗಿದ್ದು, ಅಂದಿನ ಪ್ರಧಾನಿ ಇಂದಿರಾಗಾಂಧಿ ಪಾಕ್ ಪರಮಾಣು ಸ್ಥಾವರ ಮೇಲೆ ದಾಳಿ ಮಾಡಲು ಹಿಂದೇಟು ಹಾಕಿದ್ದರು ಎಂದು ಮಾಜಿ ಸಿಐಎ ಅಧಿಕಾರಿ ರಿಚರ್ಡ್ ಬಾರ್ಲೋ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಎಎನ್ಐ ಸುದ್ದಿಸಂಸ್ಥೆ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿರುವ ರಿಚರ್ಡ್ ಬಾರ್ಲೋ, ತಮ್ಮ ವೃತ್ತಿ ಜೀವನದ ಹಲವು ಪ್ರಮುಖ ಘಟನೆಗಳನ್ನು ಮೆಲುಕು ಹಾಕಿಕೊಂಡಿದ್ದು, ಪ್ರಮುಖವಾಗಿ ಪಾಕಿಸ್ತಾನ ಅಣ್ವಸ್ತ್ರ ರಾಷ್ಟ್ರವಾಗಲು ಭಾರತವೇ ಕಾರಣ ಎಂಬರ್ಥದಲ್ಲಿ ಮಾತನಾಡಿದ್ದಾರೆ.
ಪಾಕಿಸ್ತಾನದ ಪರಮಾಣು ಯೋಜನೆಗಳನ್ನು ತಡೆಯುವ ಅವಕಾಶಗಳನ್ನು ಭಾರತ ಹೇಗೆ ಕೈಚೆಲ್ಲಿತ್ತು ಎಂಬುದನ್ನು ಮಾಜಿ ಸಿಐಎ ಅಧಿಕಾರಿ ರಿಚರ್ಡ್ ಬಾರ್ಲೋ ಬಿಚ್ಚಿಟ್ಟಿದ್ದು, ‘1980ರ ದಶಕದಲ್ಲಿ ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರವು, ಪಾಕಿಸ್ತಾನದ ಕಹುತಾ ಪರಮಾಣು ಸೌಲಭ್ಯದ ಮೇಲೆ ದಾಳಿ ಮಾಡಲು ನಿರಾಕರಿಸಿತ್ತು’ ಎಂಬ ಸ್ಪೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ.


