ಅಥಣಿ : ಕನ್ನಡ ಕೇವಲ ಒಂದು ಭಾಷೆಯಲ್ಲ, ಅದೊಂದು ಸಂಸ್ಕೃತಿ ಮತ್ತು ಪರಂಪರೆಯಾಗಿದೆ. ಸಾವಿರಾರು ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ ಎಂದು ಮೋಟಿಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಹೇಳಿದರು.ಅವರು ಇಲ್ಲಿನ ಎಚ್ ಶಿವರಾಮೇಗೌಡ ಸಾರಥದ ಕರ್ನಾಟಕ ರಕ್ಷಣಾ ವೇದಿಕೆ ಘಟಕದಿಂದ ಹಮ್ಮಿಕೊಳ್ಳಲಾಗಿದ್ದ ಗಡಿನಾಡು ಕನ್ನಡ ಉತ್ಸವ ಹಾಗೂ ಗಡಿನಾಡು ಕನ್ನಡ ರತ್ನ ಪ್ರಶಸ್ತಿ ಪುರಾಣ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಸುದೀರ್ಘ ಇತಿಹಾಸ , ಪರಂಪರೆಯನ್ನ ಹೊಂದಿದೆ. ಇದು ಶ್ರೀಗಂಧದ ಬೀಡು, ಸಾಧು ಸಂತರು ದಾಸರು, ಶಿವಶರಣರು ಹಾಗೂ ಕವಿಗಳ, ಸಾಹಿತಿಗಳಿಂದ ಕಂಗೊಳಿಸುತ್ತಿರುವ ಸಮೃದ್ಧ ಕನ್ನಡ ನಾಡು. ಕನ್ನಡ ನಮ್ಮ ಬದುಕಿನ ಬಾಷೆ, ಅನ್ನದ ಭಾಷೆ, ಪವಿತ್ರ ಬಾಸಿ ಮತ್ತು ಹೃದಯದ ಭಾಷೆಯಾಗಿದೆ. ಈ ಭಾಷೆಯನ್ನ ಉಳಿಸಿ ಬೆಳೆಸಿ ಎನ್ನುವ ಪರಿಸ್ಥಿತಿ ಬರಬಾರದು. ಕೇವಲ ಉಳಿಸಿ ಉಳಿಸಿ ಎನ್ನುವ ಭಾಷಣಕ್ಕಿಂತ ಪ್ರತಿನಿತ್ಯ ಜೀವನದಲ್ಲಿ ಕನ್ನಡವನ್ನು ಬಳಸುವುದರಿಂದ ನಮ್ಮ ಮಾತೃಭಾಷೆಯನ್ನು ಗಟ್ಟಿಯಾಗಿ ಕಟ್ಟಲು ಸಾಧ್ಯ ಎಂದು ಹೇಳಿದರು.
ಕನ್ನಡ ಕೇವಲ ಭಾಷೆಯಲ್ಲ, ಅದೊಂದು ಸಂಸ್ಕೃತಿ, ಪರಂಪರೆ – ಮೋಟಗಿಮಠದ ಪ್ರಭು ಚನ್ನಬಸವ ಸ್ವಾಮೀಜಿ

ಕನ್ನಡ ಭಾಷೆ, ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದರ ಜೊತೆಗೆ ಕನ್ನಡಿಗರಿಗೆ ಅನ್ಯಾಯವಾದ, ಗಡಿ ವಿಚಾರದಲ್ಲಿ ಬೀದಿಗಿಳಿದು ಹೋರಾಟ ಮಾಡುವ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರ ಕಾಯಕ ದೊಡ್ಡದು. ದೇಶದಲ್ಲಿ ಸೈನಿಕರು ನಮ್ಮ ಸಂರಕ್ಷಣೆ ಮಾಡಿದರೆ ನಾಡಿನಲ್ಲಿ ಕರವೇ ಸೇನಾನಿಗಳು ನಾಡಿನ ಭಾಷೆ ಮತ್ತು ಕನ್ನಡಿಗರ ಧ್ವನಿಯಾಗಿ ಮುಂಚೂಣಿಯಲ್ಲಿ ನಿಂತು ನ್ಯಾಯ ಒದಗಿಸುತ್ತಿದ್ದಾರೆ. ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರವೇ ಘಟಕದಿಂದ ಎಲೆ ಮರಿ ಕಾಯಿಯಂತೆ ಸೇವೆ ಸಲ್ಲಿಸುವ ಕನ್ನಡ ಸೇವಕರನ್ನು ಗುರುತಿಸಿ ಗಡಿನಾಡು ಕನ್ನಡರತ್ನ ಪ್ರಶಸ್ತಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಪ್ರಸಂಶೆ ವ್ಯಕ್ತಪಡಿಸಿದರು.
ಸಮಾರಂಭವನ್ನು ಉದ್ಘಾಟಿಸಿದ ಉತ್ತರ ಕರ್ನಾಟಕ ಕರವೇ ಅಧ್ಯಕ್ಷ ಮಹಾಂತೇಶ ರಣಗಟ್ಟಿಮಠ ಮಾತನಾಡಿ ವಿವಿಧ ಪ್ರಾಂತಗಳಲ್ಲಿ ಹಂಚಿ ಹೋಗಿದ್ದ ಕನ್ನಡಿಗರನ್ನು ಒಗ್ಗೂಡಿಸಿ ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬರಬೇಕಾದರೆ ಅನೇಕ ಕನ್ನಡ ಚಳುವಳಿ, ಏಕೀಕರಣದ ಹೋರಾಟದ ಫಲವನ್ನು ಸ್ಮರಿಸಬೇಕಾಗುತ್ತದೆ. ಅನೇಕ ಏಕೀಕರಣ ಹೋರಾಟಗಾರರ ತ್ಯಾಗದ ಫಲವಾಗಿ ನಮ್ಮ ಕನ್ನಡ ನಾಡು ಉದಯವಾಗಿದೆ. ಆದರೆ ಅನ್ಯ ಭಾಷೆಗಳ ಪ್ರಭಾವದಿಂದ ಕನ್ನಡಕ್ಕೆ ಕುತ್ತು ಬರುತಿದ್ದು, ಇದರಿಂದ ಕನ್ನಡಿಗರಿಗೆ ಮೇಲಿಂದ ಮೇಲೆ ಅನ್ಯಾಯವಾಗುತ್ತಿದೆ. ಆದ್ದರಿಂದಲೇ ಅನೇಕ ಕನ್ನಡಪರ ಸಂಘಟನೆಗಳು ಹುಟ್ಟಿಕೊಂಡಿವೆ. ಕಳೆದ 25 ವರ್ಷಗಳಿಂದ ಕರ್ನಾಟಕ ರಕ್ಷಣಾ ಕನ್ನಡಿಗರ ಹಿತ ಕಾಪಾಡುವ ನಿಟ್ಟಿನಲ್ಲಿ ಬೀದಿಗಿಳಿದು ಹೋರಾಟ ಮಾಡುತ್ತಾ ಬಂದಿದೆ. ಇಂದು ಅಥಣಿಯಲ್ಲಿ ಆಯೋಜಿಸಿರುವ ಗಡಿನಾಡು ಕನ್ನಡ ಉತ್ಸವ ಬಹಳಷ್ಟು ಅರ್ಥಪೂರ್ಣ ಕಾರ್ಯಕ್ರಮವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಜಿಲ್ಲಾ ಅಧ್ಯಕ್ಷ ವಾಜಿದ್ ಹಿರೇಕುಡಿ ಮಾತನಾಡಿ ಬೆಳಗಾವಿ ಗಡಿ ವಿಚಾರದಲ್ಲಿ ಎಂಇಎಸ್ ಮತ್ತು ಶಿವಸೇನೆ ಮುಖಂಡರು ಮೇಲಿಂದೆ ಮೇಲೆ ಖ್ಯಾತಿ ಮಾಡುತ್ತಲೇ ಇದ್ದಾರೆ. ನಾವೆಲ್ಲರೂ ರಾಜ್ಯೋತ್ಸವ ಆಚರಿಸಿದರೇ ಅವರು ಕರಾಳ ದಿನಾಚರಣೆ ಮಾಡುತ್ತಾರೆ. ನಮ್ಮ ಸರ್ಕಾರ ವಿಧಾನಸಭೆ ನಡೆಸಿದರೆ, ಅವರು ಮಹಾಮೇಳಾವ ನಡೆಸುತ್ತಾರೆ. ರಾಜ್ಯ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅವರ ಮೇಲೆ ಯಶಸ್ವಿ ಕ್ರಮ ಜರುಗಿಸಿ ಅವರನ್ನು ಗಡಿಪಾರು ಮಾಡುವಂತೆ ಅಗ್ರಹಿಸಿದ ಬೆಳಗಾವಿಯಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಿದ್ದೇವೆ. ಅಥಣಿ ಘಟಕದಿಂದಲೂ ಕೂಡ ಗಡಿನಾಡು ಕನ್ನಡ ರತ್ನ ಪ್ರಶಸ್ತಿ ಮತ್ತು ರಸಮಂಜರಿ ಕಾರ್ಯಕ್ರಮ ಹಮ್ಮಿಕೊoಡಿದ್ದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ಪ್ರಶಸ್ತಿ ಪ್ರಧಾನ :
ಈ ಸಂದರ್ಭದಲ್ಲಿ ಅಥಣಿಯ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ, ಹಿರಿಯ ವೈದ್ಯ ಡಾ. ಅಣ್ಣಪ್ಪ ಪಾoಗಿ, ಕನ್ನಡದ ಹುಚ್ಚುರಾಯ ಡಾ. ಅಲಾಸೆ ಎಂ ಡಿ, ಯೋಗ ಶಿಕ್ಷಕ ಎಸ್ ಕೆ ಹೊಳೆಪ್ಪನವರ, ಸಮಾಜ ಸೇವಕ ಆನಂದ ಟೋಣಪಿ, ಕನ್ನಡಪರ ಹೋರಾಟಗಾರ ವಿಜಯಕುಮಾರ ನೇಮಗೌಡ, ಶಿಕ್ಷಕ ಹಾಗೂ ಸಾಹಿತಿ ಸಂಗಮೇಶ ಹಚಡದ ಅವರಿಗೆ 2025 ನೇ ಸಾಲಿನ ಗಡಿನಾಡು ಕನ್ನಡರತ್ನ ಪ್ರಶಸ್ತಿ ಯನ್ನು ನೀಡಿ ಗೌರವಿಸಲಾಯಿತು.
ಸಭಿಕರನ್ನು ರಂಜಿಸಿದ ಕನ್ನಡ ರಸಮಂಜರಿ :
ಗಡಿನಾಡು ಕನ್ನಡ ಉತ್ಸವ ಕಾರ್ಯಕ್ರಮದ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಸಮಂಜರಿ ಕಾರ್ಯಕ್ರಮದಲ್ಲಿ ವಿಜಯಪುರದ ವೀರೇಶ ವಾಲಿ ಅವರ ತಂಡದ ಕಲಾವಿದರು ಕನ್ನಡ ಹಾಡುಗಳ ಮೂಲಕ ನೆರೆದಿದ್ದ ಸಭಿಕರನ್ನು ರಂಜಿಸಿದರು. ಅವರ ಹಾಡುವ ಹಾಡುಗಳಿಗೆ ಅನೇಕ ಸಭಿಕರು ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ನೃತ್ಯ ಮಾಡುವ ಮೂಲಕ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಶೆಟ್ಟರ ಮಠದ ಮರುಳು ಸಿದ್ಧ ಸ್ವಾಮೀಜಿ, ಪುರಸಭೆ ಸ್ಥಾಯಿ ಸಮಿತಿ ಸದಸ್ಯ ದತ್ತಾ ವಾಸ್ಟರ್, ಪುರಸಭಾ ಸದಸ್ಯ ರಾವಸಾಬ ಐಹೊಳೆ, ಸಮಾಜ ಸೇವಕ ರಿಹಾನ್ ಡಾಂಗೆ, ರೈತ ಸಂಘದ ಅಧ್ಯಕ್ಷ ಮಹಾದೇವ ಮಡಿವಾಳ, ಕಂದಾಯ ನಿರೀಕ್ಷಕ ಎಂ ಎಸ್ ಮೆಣಸಂಗಿ, ನೌಕರರ ಸಂಘದ ಅಧ್ಯಕ್ಷ ಆರ್ ಎಸ್ ಪಾಟೀಲ, ಜಗನ್ನಾಥ ಬಾಮನಿ, ಇರ್ಫಾನ್ ತಾಂಬೊಳಿ, ಸಿದ್ದು ಹಂಡಗಿ, ಶಂಕರ ಮಗದುಮ್ಮ, ಕುಮಾರ ಬಡಿಗೇರ, ಸಿದ್ದು ಮಾಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕರವೇ ಅಧ್ಯಕ್ಷ ಉದಯ ಮಾಕಾಣಿ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣ್ಣಾಸಾಬ ತೆಲಸಂಗ ಪ್ರಸ್ತಾವಿಕವಾಗಿ ಮಾತನಾಡಿದರು. ಮುರುಗೇಶ ಬಾನಿ ನಿರೂಪಿಸಿದರು. ಕಾನೂನು ಸಲಹೆಗಾರ, ನ್ಯಾಯವಾದಿ ವಿನಯ ಪಾಟೀಲ ವಂದಿಸಿದರು.

