ಜಮಖಂಡಿ;ತಾಲೂಕಿನ ಹಿಪ್ಪರಗಿ ಗ್ರಾಮದ ಸದ್ಗುರು ಸಮರ್ಥ ಸಂಗಮೇಶ್ವರ ಮಹಾರಾಜರ 94ನೇ ಪುಣ್ಯ ಸ್ಮರಣೋತ್ಸವ ಹಾಗೂ ಆಧ್ಯಾತ್ಮಸಪ್ತಾಹ ಶನಿವಾರ ದಿ.8 ರಿಂದ 10ರ ವರೆಗೆ ಹಿಪ್ಪರಗಿಯ ಮೂಲ ಸನ್ನಿಧಾನದಲ್ಲಿ ನಡೆಯಲಿದೆ ಎಂದು ಇಂಚಗೇರಿ ಸಂಪ್ರದಾಯದ ಗುರುಗಳಾದ ಪ್ರಭುಜಿ ಮಹಾರಾಜರು ತಿಳಿಸಿದರು. ಬುಧವಾರ ನಗರದ ಗಿರಿಮಲ್ಲೇಶ್ವರ ದೇವಸ್ಥಾನದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, 8 ರಂದು ದಾಸಬೋಧ, ವೀಣಾ ಪೂಜೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಲಿದೆ. ಅಂದು ವಿವಿಧ ಗ್ರಾಮಗಳಿಂದ ಹಾಗೂ ಮಹರಾಷ್ಟ್ರದಿಂದ ಆಗಮಿಸುವ ದಿಂಡಿ ಪಲ್ಲಕ್ಕಿ ಪಾದಯಾತ್ರಿಗಳ ಆಹ್ವಾನ ವಿರುತ್ತದೆ, ದಿ.9 ರಂದು ಸಂಜೆ 5.30ಕ್ಕೆ ಸರ್ವಧರ್ಮ ಏಕತಾ ಸಮಾವೇಶ, ದಿ.10 ರಂದು ಸಪ್ತಾಹ ಸಮಾರೋಪ ಸಮಾರಂಭ ಪುಷ್ಪವೃಷ್ಠಿ ಕಾರ್ಯಕ್ರಮ ಇರುತ್ತದೆ. ಮೂರು ದಿನಗಳ ಕಾಲ 2 ಪಕ್ಷಕ್ಕೂ ಅಧಿಕ ಭಕ್ತರು ಭಾಗವಹಿಸಲಿದ್ದಾರೆ. ಮೂರೂ ದಿನಗಳಕಾಲ ಬೆಳಗಿನಿಂದಲೇ ನಿರಂತರ ದಾಸೋಹ ನಡೆಯಲಿದೆ. ಸುಮಾರು ನೂರು ಕ್ವಿಂಟಾಲ್ ಧಾನ್ಯ ದಾಸೋಹಕ್ಕೆ ಬಳಕೆಯಾಗಲಿದೆ. ಆಗಮಿಸುವ ಸಾಧು ಸಂತರಿಂದ ನಾಮ ಸ್ಮರಣೆ ಹಾಗೂ ಆಧ್ಯಾತ್ಮ ಚಿಂತನೆ ಸಾಕ್ಷಾತ್ಕಾರದ ಕುರಿತು ಪುರಾಣ ಪ್ರವಚನಗಳು ನಡೆಯಲಿವೆ ಎಂದು ವಿವರಿಸಿದರು. ಇಂಚಗೇರಿ ಆಧ್ಯಾತ್ಮ ಸಂಪ್ರದಾಯದಲ್ಲಿ ಯಾವುದೇ ಜಾತಿ, ಮತ, ಪಂಥ, ಧರ್ಮದ ಬೇಧ ಭಾವ ವಿರುವದಿಲ್ಲ. ಎಲ್ಲ ಸಮಾಜದವರು ಕಾರ್ಯಕ್ರಮದಲ್ಲಿ ಭಾಗ ವಹಿಸಬಹುದಾಗಿದೆ ಎಂದು ಹೇಳಿದರು. ಪ್ರದೀಪ ಮೆಟಗುಡ್ ಹಾಗೂ ಮಠದ ಭಕ್ತರು ಇದ್ದರು.

