ಬಳ್ಳಾರಿ: 06..ರಾಜ್ಯದಲ್ಲಿ ರೈತರು ಬೆಳೆದ ಪ್ರತಿ ಟನ್ ಕಬ್ಬಿಗೆ ರೂ. ೪೮೦೦ ನಿಗದಿ ಮಾಡಿ, ಹಿಂದಿನ ಬಾಕಿ ಇರುವ ಹಣವನ್ನು ಕೂಡಲೇ ರೈತರಿಗೆ ಪಾವತಿಸಲು ಸರ್ಕಾರ ಅದೇಶಿಸಬೇಕು ಎಂದು ಎಐಕೆಕೆಎಂಎಸ್ ಕರ್ನಾಟಕ ರಾಜ್ಯ ಸಮಿತಿ ಒತ್ತಾಯಿಸಿದೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ರಾಜ್ಯ ಕಾರ್ಯದರ್ಶಿ ಭಗವಾನ್ ರೆಡ್ಡಿ ಅವರು, ಕರ್ನಾಟಕ ರಾಜ್ಯದ ಕಬ್ಬು ಬೆಳೆಗಾರ ರೈತರು ಹಲವಾರು ಕಷ್ಟ-ನಷ್ಟಗಳ ನಡುವೆ ರೈತರು ಪ್ರತಿ ವರ್ಷ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಬೆಳೆದು ದೇಶವಾಸಿಗಳಿಗೆ ಸಿಹಿ ತಿನ್ನಿಸಿ ತಾವು ಮಾತ್ರ ಕಹಿ ತಿಂದು, ಕಾರ್ಖಾನೆ ಮಾಲೀಕರ ಶೋಷಣೆಯಿಂದ ಬಸವಳಿದ್ದಾರೆ. ಲಾಭವಿಲ್ಲದ ಬೆಲೆ ನಿಗಧಿ, ವಿಳಂಬದ ಕಟಾವು, ಬಾಕಿ ಪಾವತಿ ಉಳಿಸಿಕೊಂಡಿರುವುದು, ಪ್ರಕೃತಿ ವಿಕೋಪ, ಹಲವು ವರ್ಷಗಳಿಂದ ಉತ್ಪಾದನಾ ವೆಚ್ಚಗಳು ನಿರಂತರವಾಗಿ ಏರಿಕೆಯಾಗುತ್ತಿದ್ದು, ರೈತರಿಗೆ ದೊರೆಯುತ್ತಿರುವ ಕಬ್ಬಿನ ಬೆಲೆ ಆ ವೆಚ್ಚವನ್ನು ಕೂಡಾ ಮುಟ್ಟಲಾರದೆ ಇದ್ದು, ರೈತರು ಆರ್ಥಿಕ ಹಿನ್ನಡೆಯತ್ತ ಸಾಗುತ್ತಿದ್ದಾರೆ.
ಕಬ್ಬು ಬೆಳೆ ಬೆಳೆಯಲು ಪ್ರತಿ ಎಕರೆಗೆ ಸರಾಸರಿ ೬೦,೦೦೦ ರಿಂದ ೮೦,೦೦೦ ಖರ್ಚಾಗುತ್ತಿದೆ. ಗೊಬ್ಬರ, ಬೀಜ, ಕಾರ್ಮಿಕರ ವೇತನ, ನೀರಾವರಿ, ಡೀಸೆಲ್, ಯಂತ್ರೋಪಕರಣ ಮತ್ತು ಸಾರಿಗೆ ವೆಚ್ಚಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಆದರೆ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಗಳು ಸಮರ್ಪಕ ಹಾಗೂ ನ್ಯಾಯಯುತ ಬೆಲೆಯನ್ನು ನೀಡುತ್ತಿಲ್ಲ. ಇದು ಕೈಗಾರಿಕಾ ಮಾಲೀಕರ ಲಾಭ ಹೆಚ್ಚಿಸುವ ನೀತಿಯಾಗಿದೆ ಎಂದರು.
ಅಲ್ಲದೆ, ಸಕ್ಕರೆ ಕಾರ್ಖಾನೆಗಳು ಕಬ್ಬಿನಿಂದ ಕೇವಲ ಸಕ್ಕರೆಯಷ್ಟೇ ಅಲ್ಲ – ಅನೇಕ ಉಪ ಉತ್ಪನ್ನಗಳಿಂದ ಭಾರೀ ಲಾಭ ಗಳಿಸುತ್ತಿವೆ.
ರೈತರು ಬೆಳೆದ ಕಬ್ಬಿಗೆ ನ್ಯಾಯಸಮ್ಮತ ಬೆಲೆ ನೀಡದೆ, ಕಾರ್ಖಾನೆಗಳು ಬಹುಮುಖ ಲಾಭ ಗಳಿಸುತ್ತಿರುವುದು ತುಂಬಾ ಅನ್ಯಾಯಕರವಾಗಿದೆ. ರೈತರ ಕಷ್ಟದಿಂದಲೇ ಕಾರ್ಖಾನೆಗಳು ನಿಲ್ಲುತ್ತಿವೆ; ಆದ್ದರಿಂದ ಕಾರ್ಖಾನೆಗಳಿಗೆ ಸಿಗುವ ಲಾಭದ ಒಂದು ನ್ಯಾಯಯುತ ಭಾಗ ರೈತರಿಗೆ ಹಂಚಿಕೆಯಾಗಬೇಕು.
ಕೇAದ್ರ ಸರ್ಕಾರ ೨೦೨೫-೨೦೨೬ ಸಾಲಿನಲ್ಲಿ ಕಬ್ಬಿನಲ್ಲಿ ದೊರೆಯುವ ಸಕ್ಕರೆಯ ಪ್ರಮಾಣವು ಶೇಕಡ ೧೦.೨೫ ಇದ್ದರೆ ೩೫೫೦ ರೂಪಾಯಿಗಳನ್ನು ಮತ್ತು ಹೆಚ್ಚುವರಿ ಪ್ರಮಾಣದ ಪ್ರತಿ ಶೇಕಡ ೧ ಕ್ಕೆ ರೂ. ೩೪.೬ ಹೆಚ್ಚಿಸಬೇಕು ಎಂದು ತೀರ್ಮಾನಿಸಿದೆ. ಉತ್ತರ ಪ್ರದೇಶ, ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಒಂದು ಟನ್ ಕಬ್ಬಿಗೆ ೪೦೦೦ ರೂಗಳನ್ನು ರೈತರಿಗೆ ನೀಡಲಾಗುತ್ತಿದೆ ಹಾಗೂ ಕೇರಳ ಮತ್ತು ತಮಿಳುನಾಡಿನಲ್ಲಿ ಕರ್ನಾಟಕದ ಕಬ್ಬಿನ ಗುಣಮಟ್ಟ ಇಲ್ಲದಿದ್ದರೂ ಕರ್ನಾಟಕಕ್ಕಿಂತ ಹೆಚ್ಚಿನ ಬೆಲೆ ನೀಡಲಾಗುತ್ತಿದೆ.
ಕಬ್ಬು ಉತ್ಪಾದನೆ ಮತ್ತು ಮಾರುಕಟ್ಟೆ ಬೆಲೆಗಳ ಹಿನ್ನಲೆ ಪರಿಗಣಿಸಿ, ಪ್ರತಿ ಟನ್ಗೆ ಕನಿಷ್ಠ ೪ ೮೦೦ ನಿಗದಿ ಮಾಡುವುದು ಮಾತ್ರ ನ್ಯಾಯಸಮ್ಮತ ಕ್ರಮವಾಗಿದೆ. ಹೀಗಾಗಿ, ಸರ್ಕಾರವು ತಕ್ಷಣವೇ ಕಬ್ಬಿನ ಎಫ್ಆರ್ಪಿ ಬೆಲೆಯನ್ನು ಪರಿಷ್ಕರಿಸಿ ಪ್ರತಿ ಟನ್ ಗೆ ೪೮೦೦ ರೂ ಎಂದು ನಿಗದಿ ಮಾಡಿ, ಈ ದರವನ್ನು ಎಲ್ಲ ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಲು ಆದೇಶಿಸಬೇಕು. ಅಲ್ಲದೆ, ಕಾರ್ಖಾನೆಗಳು ರೈತರ ಕಬ್ಬು ಖರಿಧಿಯ ಬ ಹಣವನ್ನು ತಿಂಗಳುಗಟ್ಟಲೆ ಬಾಕಿ ಇಡುವುದನ್ನು ತಡೆದು, ತಕ್ಷಣ ಪಾವತಿಸುವ ವ್ಯವಸ್ಥೆ ಜಾರಿಗೆ ತರಬೇಕು ಎಮದರು.
ನಮ್ಮ ಬೇಡಿಕೆಗಳು: ಕಬ್ಬಿನ ಬೆಲೆಯನ್ನು ತಕ್ಷಣ ರೂ. ೪೮೦೦ ಟನ್ಗೆ ನಿಗದಿ ಮಾಡಬೇಕು. ರಂಗರಾಜನ್ ವರದಿಯಂತೆ ಉಪ ಉತ್ಪನ್ನಗಳ ಬಾಬ್ತು ಕಳೆದ ಸಾಲಿನ ಬಾಕಿ ಒಂದು ಟನ್ಗೆ ೧೫೦/- ಗಳನ್ನು ಬಡ್ಡಿ ಸಹಿತ ಕೊಡಬೇಕು. ಬಾಕಿ ಉಳಿದ ಕಬ್ಬು ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು. ಭವಿಷ್ಯದಲ್ಲಿ ಕಬ್ಬಿನ ದರ ನಿಗದಿಗೆ ರೈತರ ಪ್ರತಿನಿಧಿಗಳನ್ನೂ ಒಳಗೊಂಡ ಸಮಿತಿಯನ್ನು ರಚಿಸಬೇಕು, ಇಲ್ಲದಿದ್ದಲ್ಲಿ ಕಬ್ಬು ಬೆಳೆಗಾರರ ಮುಂದಿನ ಹೋರಾಟದೊಂದಿಗೆ ನಾವು ನಿರಂತರವಾಗಿ ಜೊತೆಗಿರುತ್ತೇವೆ ಎಂದು ರಾಜ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ ಎಂದು ಬಳ್ಳಾರಿ ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.


