ಬೆಂಗಳೂರು, ನವೆಂಬರ್ 4: ವಿದೇಶಾಂಗ ನೀತಿಯಿಂದ ಹಿಡಿದು ಮಿಲಿಟರಿ ತಂತ್ರಗಾರಿಕೆವರೆಗೆ ಎಲ್ಲದರ ಬಗ್ಗೆ ಉದ್ದುದ್ದ ಬೊಗಳೆ ಭಾಷಣ ಬಿಗಿಯುವ ಪ್ರಿಯಾಂಕ್ ಖರ್ಗೆ ಅವರೇ, ತಮಗೆ ಕಲ್ಯಾಣ ಕರ್ನಾಟಕದ ಹಳ್ಳಿಗಳ ಜನ ಬಸ್ಸಿಲ್ಲದೆ ದುಪ್ಪಟ್ಟು ಬೆಲೆ ತೆತ್ತು ಸ್ವಂತ ಗಾಡಿ, ಟಂಟಂ, ಜೀಪಿನಲ್ಲಿ ಪ್ರಯಾಣ ಮಾಡುವುದು ತಮಗೆ ಕಾಣುತ್ತಿಲ್ಲವೇ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಪ್ರಶ್ನಿಸಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶದ 38 ಹಳ್ಳಿಗಳಿಗೆ ಬಸ್ ಸೌಕರ್ಯವೇ ಇಲ್ಲ. ಇದರಿಂದಾಗಿ ಅಲ್ಲಿನ ಮಹಿಳೆಯರಿಗೆ ಶಕ್ತಿ ಯೋಜನೆಯ ಪ್ರಯೋಜನವೂ ದೊರೆಯುತ್ತಿಲ್ಲ ಎಂಬ ಮಾಧ್ಯಮ ವರದಿ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪ್ರಸ್ತಾಪಿಸಿದ ಅಶೋಕ್, ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರೇ, ಕಲ್ಯಾಣ ಕರ್ನಾಟಕದ 38 ಗ್ರಾಮದ ಮಹಿಳೆಯರಿಗೆ ಶಕ್ತಿ ಯೋಜನೆಯಿಂದ ಯಾವುದೇ ಪ್ರಯೋಜನವಿಲ್ಲ. ಯಾಕೆ ಪ್ರಯೋಜನವಿಲ್ಲ ಅಂದರೆ 38 ಗ್ರಾಮಗಳಿಗೆ ಬಸ್ಸೇ ಇಲ್ಲ. ಬಸ್ಸು ಯಾಕಿಲ್ಲ ಅಂದರೆ ಅಲ್ಲಿ ಯೋಗ್ಯ ರಸ್ತೆಯೇ ಇಲ್ಲ. ಕಲ್ಯಾಣ ಕರ್ನಾಟಕದ ಜನರ ಮತ ಪಡೆದು, ಅಧಿಕಾರ ಅನುಭವಿಸಿ ತಮ್ಮ ಕುಟುಂಬದ ಕಲ್ಯಾಣ ಮಾಡಿಕೊಂಡಿರುವುದೇ ನಿಮ್ಮ ಏಕೈಕ ಸಾಧನೆ ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.


