ತೆಲಂಗಾಣ: ಇತ್ತೀಚಿಗೆ ಸರಣಿ ಬಸ್ ಅಪಘಾತಗಳು ಸಂಭವಿಸುತ್ತಲೇ ಇದೆ. ನಿನ್ನೆ ರಾಜಸ್ಥಾನದಲ್ಲಿ ಜೋಧ್ಪುರದಲ್ಲಿ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್, ನಿಂತಿದ್ದ ಟ್ರೇಲರ್ಗೆ ಡಿಕ್ಕಿ ಹೊಡೆದ ಪರಿಣಾಮ 18 ಜನರು ಸಾವನಪ್ಪಿದ್ದರು. ಈ ಘಟನೆ ಮಾಸುವ ಮುನ್ನವೇ ಇಂದು ಭೀಕರ ಅಪಘಾತ ಸಂಭವಿಸಿದೆ. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾ ಬಳಿಯ ಮಿರ್ಜಗುಡದಲ್ಲಿ ಸೋಮವಾರ ಬೆಳಿಗ್ಗೆ ಘೋರ ರಸ್ತೆ ಅಪಘಾತ ಸಂಭವಿಸಿದ್ದು, ಕನಿಷ್ಠ 20 ಜನ ಸಾವನ್ನಪ್ಪಿದ್ದಾರೆ.
ಸಾರಿಗೆ ಬಸ್ಗೆ ಟಿಪ್ಪರ್ ಲಾರಿ ಡಿಕ್ಕಿಯಾಗಿ ಭೀಕರ ದುರಂತ ಸಂಭವಿಸಿದ್ದು ಕನಿಷ್ಠ 20 ಜನ ಸಾವನ್ನಪ್ಪಿದ್ದಾರೆ. ಇದರಲ್ಲಿ 3 ತಿಂಗಳ ಹೆಣ್ಣು ಶಿಶು ಸಹ ಸೇರಿದ್ದು, 18 ಜನ ಗಾಯಗೊಂಡಿದ್ದಾರೆ. ಜಲ್ಲಿಕಲ್ಲು ತುಂಬಿಕೊಂಡ ಟಿಪ್ಪರ್ ಟ್ರಕ್ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಆರ್ಟಿಸಿ ಬಸ್ಗೆ ಡಿಕ್ಕಿ ಹೊಡೆದಿದೆ.
ಈ ಘಟನೆಯಿಂದ ಬಸ್ನಲ್ಲಿ ಸಿಕ್ಕಿಹಾಕಿಕೊಂಡ ಪ್ರಯಾಣಿಕರ ಮೇಲೆ ಜಲ್ಲಿಕಲ್ಲುಗಳು ಬಿದ್ದು, ದುರಂತ ಉಂಟಾಗಿದೆ. ಸ್ಥಳೀಯರು ಮತ್ತು ಪೊಲೀಸ್ ತಂಡಗಳು ರಕ್ಷಣಾ ಕಾರ್ಯ ನಡೆಸಿ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಚೆವೆಲ್ಲಾ ಪೊಲೀಸ್ ಎಸಿಪಿ ಬಿ. ಕಿಶನ್ ಅವರ ಪ್ರಕಾರ, ಬಸ್ ತಾಂಡೂರ್ನಿಂದ ಹೊರಟು ಚೆವೆಲ್ಲಾಗೆ ಬರುತ್ತಿತ್ತು. ಬಸ್ನಲ್ಲಿ ಸುಮಾರು 70 ಪ್ರಯಾಣಿಕರಿದ್ದರು. “ಟ್ರಕ್ ಜಲ್ಲಿಕಲ್ಲು ಹೊತ್ತುಕೊಂಡು ಬರುತ್ತಿತ್ತು. ಡಿಕ್ಕಿಯಿಂದ ಟ್ರಕ್ ಚಾಲಕ ಮತ್ತು ಬಸ್ ಪ್ರಯಾಣಿಕರಲ್ಲಿ ಹಲವರು ಮೃತಪಟ್ಟಿದ್ದಾರೆ. ನಾವು 20 ಸಾವುಗಳನ್ನು ಖಚಿತಪಡಿಸಿದ್ದೇವೆ” ಎಂದು ಹೇಳಿದರು. ರಾಜೇಂದ್ರನಗರ ಡಿಸಿಪಿ ಯೋಗೇಶ್ ಗೌತಮ್ ಹೇಳಿದ್ದಂತೆ, ಟ್ರಕ್ ಸರಿಯಾದ ಲೇನ್ನಲ್ಲಿತ್ತು.”ಟ್ರಕ್ ಚಾಲಕ ಓವರ್ಟೇಕ್ ಮಾಡಲು ಪ್ರಯತ್ನಿಸುತ್ತಿದ್ದಾಗ ಡಿಕ್ಕಿ ಸಂಭವಿಸಿದೆಯೇ ಅಥವಾ ತಪ್ಪು ದಿಕ್ಕಿನಲ್ಲಿ ಬರುತ್ತಿದ್ದನೇ ಎಂಬುದನ್ನು ತನಿಖೆ ಮಾಡಬೇಕು” ಎಂದರು.


