ಬಳ್ಳಾರಿ, ನ. 03 : ಕನ್ನಡ ನಾಡು ಹಾಗೂ ನುಡಿಯ ಗೌರವಕ್ಕಾಗಿ ಪ್ರತಿಯೊಬ್ಬ ಕನ್ನಡಿಗನು ಸದಾ ಸಜ್ಜನಾಗಿರಬೇಕು ಎಂದು ಜಯ ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಶ್ಯಾಮ್ ಸುಂದರ್ ಕರೆ ನೀಡಿದರು.
ನಗರದ ಎಪಿಎಂಸಿ ಆವರಣದಲ್ಲಿ ಜಯ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಆಯೋಜಿಸಲಾದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಪ್ರತಿವರ್ಷವೂ ವೇದಿಕೆಯ ಕಾರ್ಯಕರ್ತರು ರಾಜ್ಯೋತ್ಸವವನ್ನು ಭಾವಭರಿತವಾಗಿ ಆಚರಿಸುತ್ತಾರೆ ಎಂಬುದನ್ನು ಮೆಚ್ಚಿದ ಅವರು, “ನಾಡು-ನುಡಿಯ ಹಿತದ ವಿಷಯದಲ್ಲಿ ವೇದಿಕೆಯ ಪ್ರತಿಯೊಬ್ಬ ಸದಸ್ಯನು ಹಗಲು-ರಾತ್ರಿ ಎನ್ನದೆ ಹೋರಾಟಕ್ಕೆ ಸಿದ್ಧನಾಗಿರುತ್ತಾನೆ. ನೆಲ, ಜಲ ಮತ್ತು ಭಾಷೆಯ ವಿಷಯದಲ್ಲಿ ಯಾವುದೇ ರೀತಿಯ ರಾಜಿ ಅಸಾಧ್ಯ. ಅಗತ್ಯವಿದ್ದರೆ ಉಗ್ರ ಹೋರಾಟಕ್ಕೂ ಹಿಂದಿರುಗುವುದಿಲ್ಲ,” ಎಂದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಪಿ. ಹಸೇನ್ ವೇದಿಕೆಯ ಚಟುವಟಿಕೆಗಳಿಗೆ ಸದಾ ಬೆಂಬಲ ನೀಡುವುದಾಗಿ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಅಲಿವೇಲು ಸುರೇಶ್ ಹೇಳಿದರು. ಸಾಮಾಜಿಕ ಸಮರದಲ್ಲಿ ಕನ್ನಡಿಗರ ಶಕ್ತಿ ಒಂದಾಗಬೇಕು, ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಶೋಟೋ ಕಾನ್ ಕರಾಟೆ ಅಕಾಡೆಮಿಯ ಅಧ್ಯಕ್ಷ ಕಟ್ಟೆ ಸ್ವಾಮಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಪಿ. ಹಸೇನ್, ಜಿಲ್ಲಾಧ್ಯಕ್ಷ ಸುಧಾಕರ್ ಹೆಗಡೆ, ದೇವರೆಡ್ಡಿ, ಪೊಲ ವಲಿ, ರೂಪ, ಪದ್ಮಾವತಿ, ತಲಮಾಮಿಡಿ ನಾಗರಾಜ್, ಮುಡಿನಾಗರಾಜ್, ಆಟೋ ಮಂಜು, ಬಿ. ಅಸ್ಲಾಂ ಬಾಷಾ, ನಾಗರಾಜ್ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
ರಾಜ್ಯೋತ್ಸವದ ಉತ್ಸಾಹಭರಿತ ವಾತಾವರಣದಲ್ಲಿ ಧ್ವಜಾರೋಹಣದ ನಂತರ ಕಾರ್ಯಕ್ರಮದ ಅಂತ್ಯದಲ್ಲಿ ವೇದಿಕೆಯ ವತಿಯಿಂದ ಆಗಮಿಸಿದವರಿಗೆ ಸುಮಾರು 1500 ಕ್ಕೂ ಹೆಚ್ಚು ಜನರಿಗೆ ಊಟೋಪಚಾರ ವ್ಯವಸ್ಥೆ ಮಾಡಲಾಗಿತ್ತು. ಜನರು ಉಪಹಾರವನ್ನು ಸೇವಿಸಿ ಕನ್ನಡ ರಾಜ್ಯೋತ್ಸವದ ಸಂಭ್ರಮವನ್ನು ಹಂಚಿಕೊಂಡರು.


