ಬೆಳಗಾವಿ. ಜಿಲ್ಲೆಯ ಗುರ್ಲಾಪುರ ಕ್ರಾಸಿನಲ್ಲಿ ಇಂದು ಮತ್ತೊಮ್ಮೆ ಅನ್ನದಾತನ ಆಕ್ರೋಶ ಆರ್ಭಟಿಸುತ್ತಿದೆ. ಕಬ್ಬು ಬೆಳಗಾರರ ಕಷ್ಟ ನಷ್ಟದ ಕುರಿತು ನಡೆಯುತ್ತಿರುವ ಈ ಹೋರಾಟ ಅಂದೂ ಹೀಗೆ ಇತ್ತು, ಇಂದಿಗೂ ಹಾಗೆಯೇ ಇದೆ. ಕಬ್ಬಿನ ರೈತರ ಗೋಳು ಹಾಗೂ ಅನ್ನದಾತರಿಗೆ ಸಕ್ಕರೆ ಕಾರ್ಖಾನೆಗಳಿಂದ ಆಗುತ್ತಿರುವ ಅನ್ಯಾಯದ ಬಗ್ಗೆ 2018 ರಲ್ಲೇ ನಾ ಬರೆದ ಈ ಬರಹ ಇಂದಿಗೂ ಪ್ರಸ್ತುತ. ಬನ್ನಿ ಅನ್ನದಾತರ ಜೊತೆಗೂಡಿ ನ್ಯಾಯಕ್ಕಾಗಿ ಹೋರಾಡೋಣ ಎಂದು ರೈತ ಮುಖಂಡ, ಬಿಜೆಪಿ ಮಹಾನಗರ ಜಿಲ್ಲಾ ಉಪಾಧ್ಯಕ್ಷರಾದ ಮಹಾಂತೇಶ ವಕ್ಕುಂದ ರೈತರ ಕುರಿತು ಅಗತ್ಯ ಮಾಹಿತಿ ನೀಡಿದ್ದಾರೆ.
ಕಬ್ಬು ಬೆಳೆದು, ಬೇಸತ್ತು ಮನನೊಂದ ರೈತನೊಬ್ಬ ೧೬/೧೧/೨೦೧೮ ರಂದು ಬೆಳಗಾವಿಯ ಡಿ ಸಿ ಕಚೇರಿಯ ಮುಂಬಾಗದ ದೊಡ್ಡ ಆಲದ ಮರವೊಂದರ ಮೇಲೇರಿ ಇನ್ನೇನೂ ನೆಗೆದೆ ಬಿಟ್ಟ ಅನ್ನೋ ಅಷ್ಟರಲ್ಲಿ ರೈತ ಹೋರಾಟಗಾರರು, ಪೊಲೀಸರು, ತುರ್ತು ಸೇವೆಯವರು, ಸಹ ಜಿಲ್ಲಾ ಆಯುಕ್ತರು ಎಲ್ಲರು ಸೇರಿ ಆತನ ಮನವೊಲಿಸಿ, ಕೆಳಗಿಳಿಸಿದರು. ಆ ಕ್ಷಣ ಆ ರೈತನ ಪ್ರಾಣಕ್ಕೇನಾದರೂ ಚ್ಯುತಿ ಬಂದಿದ್ದರೆ ಮುಂದಾಗಬಹುದಾದ ಅನಾಹುತಗಳನ್ನು ಊಹಿಸಿದರೆ ಮೈ ಜುಮ್ಮೆನ್ನುತ್ತದೆ. ಕರ್ನಾಟಕದ ಕಬ್ಬು ಬೆಳೆಗಾರರು ಹಾಗು ರೈತ ಸಂಘದ ಸಾವಿರಾರು ಜನ ಈ ಹೋರಾಟದಲ್ಲಿ ಇದಾಗಲೇ ಕಳೆದ ೩-೪ ದಿನಗಳಿಂದ ಮನೆ ಮಠ, ಅಣ್ಣ ನೀರು ಬಿಟ್ಟು ಬೆಳಗಾವಿಯ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಕೂತು ಧರಣಿ ನಡೆಸುತ್ತಿದ್ದಾರೆ. ರೈತರು ಬೆಳೆದ ಕಬ್ಬಿಗೆ ಕಾರ್ಖಾನೆಗಳು ಬೆಲೆ ನೀಡದಿರುವುದೇ ಈ ಹೋರಾಟದ ಮೂಲ ಕಾರಣ.
ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ “ಊದೊದು ಕೊಟ್ಟ, ಬಾರಿಸೋದ ಕೊಂಡಂತ”ಹ ಪರಿಸ್ಥಿತಿ ಕಬ್ಬು ಬೆಳಗಾರರದ್ದು. ಜೀವನಾವಶ್ಯಕತೆಗೆ ಬೇಕಾದದ್ದು, ಮಾರುಕಟ್ಟೆಯಲ್ಲಿ ನೇರವಾಗಿ ಮಾರಬಹುದಾದಂತಹ ದವಸ ಧಾನ್ಯ ಬೆಳೆದು, ಕಡಿಮೆ ಬಂದರು ಚಿಂತೆಯಿಲ್ಲ ನೇರವಾಗಿ ತಮ್ಮ ಕೈಗೆ ದುಡ್ಡು ಬರುವಂತಹ ಬೆಳೆಯ ವ್ಯಾಪಾರ ಮಾಡಿ ಹೊಟ್ಟೆ ತುಂಬಿಕೊಳ್ಳುತ್ತಿದ್ದವರು, ಕೊಂಚ ಹೆಚ್ಚಿನದೇನೋ ಸಿಗಬಹುದೆಂಬ ಮುಗ್ದ ಆಸೆಗೆ ಕಬ್ಬು ಬೆಳೆದವರು ನಾವು. ಆದರೆ ಈಗ ಕೈಯಲ್ಲಿ ಕಬ್ಬು ಇಲ್ಲ, ಕೊಟ್ಟ ಕಬ್ಬಿಗೆ ಹಣವೂ ಇಲ್ಲ. ಕಬ್ಬಿನ ಫ್ಯಾಕ್ಟರಿಗಳು ಮಾತ್ರ ಉಂಡೂ ಹೋದವು, ಕೊಂಡೂ ಹೋದವು.
ಸುಮಾರು ಒಂದು ವರ್ಷ ಹಗಲು ರಾತ್ರಿ ಎನ್ನದೆ ಬೆವರು ಸುರಿಸಿ ಬೆಳೆದ ಕಬ್ಬನ್ನು ನಾವು ರೈತರು ಕಾರ್ಖಾನೆಗಳ ಮಡಿಲಿಗೆ ತಂದು ಸುರಿಯುತ್ತೇವೆ. ಹಗಲಲ್ಲಂತೂ ಕರೆಂಟು ಕೊಟ್ಟು ರೈತರನ್ನು ಉದ್ದಾರ ಮಾಡಿದ ಸರ್ಕಾರಗಳನ್ನು ನಾವು ಕಂಡಿಲ್ಲ ಆದರೆ ರಾತ್ರಿ ಬರುವ ೩-೪ ಘಂಟೆಯ ವಿದ್ಯುತ ಪಡೆದು ಹೊಲ ಗದ್ದೆಗಳಿಗೆ ನೀರು ಹಾಯಿಸುವ ಪರಿಸ್ಥಿತಿ ರೈತರದ್ದು. ಗೊಬ್ಬರಕ್ಕೆ ಸಾಲು ಸಾಲು ನಿಂತು, ಕಳಪೆ ಬೀಜ ಸಿಕ್ಕಿತೇನೋ ಎಂಬ ಭಯದಲ್ಲಿ ಆರಿಸಿ ಬೀಜ ತಂದು, ವರ್ಷವಿಡೀ ಕ್ರಿಮಿ ನಾಶಕ, ಔಷದ, ಗೊಬ್ಬರ ನೀಡಿ, ಸಾಲ ಸೂಲ ಮಾಡಿ ಬೆಳೆದ ಬೆಳೆಯನ್ನು ಕಟಾವು ಮಾಡುವಾಗ ಕಾರ್ಖಾನೆಗಳ ಬಾಗಿಲ ಬಳಿ ಹೋಗಿ ಅವರ ಕೈ ಕಾಲಿಗೆ ಬಿದ್ದು, ಕಟಾವು ಮಾಡುವವರ ಕರೆತಂದು, ಅವರಿಗೆ ಪ್ರತಿ ಗಾಡಿಗೆ ಇಂತಿಷ್ಟು ಎಂಬತ್ತೆ ದುಡ್ಡು ಕೊಟ್ಟು, ನಮ್ಮ ಹೊಲದಲ್ಲಿ ಬೆಳೆದ ನಮ್ಮ ಕಬ್ಬನ್ನೇ ಕಟಾವು ಮಾಡಲು ಕಾರ್ಖಾನೆಗಳ ಫೀಲ್ಡ್ ಆಫೀಸರಗಳ ಕೈ ಕಾಲು ಹಿಡಿದು , ಅವರಿಗೆ ಲಂಚ ಕೊಟ್ಟು ಕೊನೆಗೆ ಫ್ಯಾಕ್ಟರಿಗಳ ಮಡಿಲಿಗೆ ತಂದು ಈ ಕಬ್ಬನ್ನು ಸುರಿಯುವ ರೈತರು ನಾವು. ಸರ್ಕಾರ ನಿಗದಿ ಮಾಡಿದ ಬೆಲೆ ಏನು, ನಮ್ಮ ಹಕ್ಕೇನು, ನಾನು ಏನು ಬಯಸಿ ಈ ಕಬ್ಬು ಬೆಳೆದೆ ಎಂದು ಅರಿಯದ ಮುಗ್ದರು ನಾವು.
ಆದರೆ, ಇಂದೇನಾಗುತ್ತಿದೆ ?
ಕರ್ನಾಟಕದಲ್ಲಿ ಸುಮಾರು ೭೧ ಸಕ್ಕರೆ ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿವೆ ಅದರಲ್ಲಿ ಸುಮಾರು ೨೮ ಸಹಕಾರಿ ಹಾಗು ಉಳಿದೆಲ್ಲ ಖಾಸಗಿ ಕಾರ್ಖಾನೆಗಳು. ಬೆಳಗಾವಿ ಜಿಲ್ಲೆಯೊಂದರಲ್ಲೇ ಸುಮಾರು ೨೨ ಸಕ್ಕರೆ ಕಾರ್ಖಾನೆಗಳು ಇರೋದು ವಿಶೇಷ. ಬೆಳಗಾವಿ ಜಿಲ್ಲೆಯ ಕಬ್ಬು ಬೆಳೆಗಾರರು ಅಲ್ಪ ಸ್ವಲ್ಪ ಈ ಬೆಳೆಯ ಬಗ್ಗೆ ಮಾಹಿತಿ ಇಟ್ಟುಕೊಂಡಿದ್ದೇವೆ. ಇನ್ನು ಈ ಮಾಹಿತಿ ಗೊತ್ತಿಲ್ಲದ ರೈತರ ಗತಿ ಆ ದೇವರಿಗೆ ಪ್ರೀತಿ.
ಕಬ್ಬು ಬೆಳೆ ಹಾಗು ಸಕ್ಕರೆ ಉದ್ಯಮದ ಬಗ್ಗೆ ಹೇಳುವುದಾದರೆ ಕೇಂದ್ರ ಸರ್ಕಾರ ನಿಗದಿ ಪಡಿಸಿರುವಂತಹ FRP (Fair and Renumerative Price – ನ್ಯಾಯಯುತ ಹಾಗು ಲಾಭದಾಯಕ ಬೆಲೆ ) ಯನ್ನು ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಲೇ ಬೇಕು. ಪ್ರಸಕ್ತ ಸಾಲಿನ ಈ ಬೆಲೆ ಪ್ರತಿ ಟನ್ ಕಬ್ಬಿಗೆ ೨೭೫೦ ರೂಪಾಯಿ ಅದು ೯. ೫% ರಿಕವರಿ ಗೆ (ಅಂದರೆ ೧೦೦ ಕಿಲೋ ಕಬ್ಬಿಗೆ ೯. ೫ ಕಿಲೋ ಸಕ್ಕರೆ ಉತ್ಪಾದನೆ) ಇದು ಸರ್ವೇ ಸಾಮಾನ್ಯವಾಗಿ ಸಾಧ್ಯವಾದದ್ದು. ಇನ್ನು ಈ ಹಣ ಸಂಪೂರ್ಣವಾಗಿ ಹಾಗು ನೇರವಾಗಿ ರೈತರ ಕೈಗೆ ಸೇರಬೇಕು, ಇದರಲ್ಲಿ ಯಾವುದೇ ಹಣ ಸಕ್ಕರೆ ಕಾರ್ಖಾನೆಗಳು ಕಡಿತಗೊಳಿಸುವ ಹಾಗಿಲ್ಲ, ಕಬ್ಬು ಕಟಾವು ಮಾಡುವವರು ಹಾಗು ತುಂಬಿ ಸಾಗಿಸುವವರ ಕೂಲಿಯನ್ನೂ ಸಕ್ಕರೆ ಕಾರ್ಖಾನೆಗಳೇ ಭರಿಸಬೇಕು ಎನ್ನುವುದು ನಿಯಮ. ಆದರೆ ನಡೆಯುತ್ತಿರುವುದೇನು ?
ಸಕ್ಕರೆ ಕಾರ್ಖಾನೆಗಳು ತಾವು ಕೊಳ್ಳುತ್ತಿರುವ ಕಬ್ಬಿಗೆ ತಾವೇ ಬೆಲೆ ನಿಗದಿ ಮಾಡುತ್ತಿದ್ದಾರೆ, ಕೆಲವರು ೧೮೦೦ ರೂಪಾಯಿ ಪ್ರತಿ ಟನ್ ಗೆ ನಿಗದಿ ಮಾಡಿದರೆ, ಕೆಲವರದ್ದು ೨೦೦೦, ಇನ್ನು ಕೆಲವರದ್ದು ೨೩೦೦, ಈ ಬೆಲೆ ನಿಗದಿಯ ಮೇಲೆ ಹದಿನಾರು ನಾಟಕಗಳು, ಕಟಾವು ಹಾಗು ಸಾಗಣೆಯ ಹಣ ರೈತರೇ ಕೊಡಬೇಕು, ಸಾಗಿಸುವ ಕೂಲಿಗಳಿಗೆ ಖರ್ಚು ವೆಚ್ಚ – ಖುಶಾಲಿ ಕೊಡಬೇಕು ಇತ್ಯಾದಿ. ಆದರೂ ಇವನ್ನೆಲ್ಲ ನಿಭಾಯಿಸಿಕೊಂಡು ನಾವು ರೈತರು ಸಕ್ಕರೆ ಕಾರ್ಖಾನೆಗಳಿಗೆ ನಮ್ಮ ಶ್ರಮದ ಕಬ್ಬು ಹೊತ್ತೊಯ್ದು ಸುರಿಯುತ್ತಿದ್ದೇವೆ, ಸುರಿಯದಿದ್ದರೆ ಬೆಳೆದ ಬೆಳೆ ನಮ್ಮ ನಮ್ಮ ಹೊಲದಲ್ಲೇ ಸತ್ತು ಹೋಗುವುದಂತೂ ನಿಶ್ಚಿತ. ಇಂತಹ ಪರಿಸ್ಥಿತಿಯಲ್ಲಿ ಮೂರು ವರ್ಷದ ಕೆಳಗೆ ೨೫೫೦ ರೂಪಾಯಿ FRP ದರ ಇದ್ದ ಸಂಧರ್ಭದಲ್ಲಿ ಕೊಟ್ಟ ಕಬ್ಬು ಕಾಟಾವುಗೊಂಡು, ನುರಿತು, ಸಕ್ಕರೆಯಾಗಿ, ಮಾರಾಟವಾಗಿ, ಜನ ತಿಂದು, ಅದು ಮಲವಾಗಿ, ಮತ್ತೆ ಗೊಬ್ಬರವಾಗಿ ಆ ಗೊಬ್ಬರವೇ ಮತ್ತೆ ಕಬ್ಬಾಗಿ ಎರಡೆರಡು ಬಾರಿ ಕಟಾವು ಆದರೂ ಕಬ್ಬಿನ ಬಿಲ್ ಮಾತ್ರ ಇನ್ನೂ ಪಾವತಿಯಾಗಿಲ್ಲ.
ಬೆಳಗಾವಿಯ ಉಸ್ತುವಾರಿ ಮಂತ್ರಿಯವರ ಸಕ್ಕರೆ ಕಾರ್ಖಾನೆ ಈ ಬಾಕಿ ಉಳಿಸಿಕೊಂಡಿರುವ ಕಾರ್ಖಾನೆಗಳಲ್ಲಿ ಮುಂಚೂಣಿಯಲ್ಲಿದೆ. ಒಬ್ಬ ರಾಜ್ಯ ಸರ್ಕಾರದ ಸಚಿವರಾಗಿರುವ ವ್ಯಕ್ತಿಯ ಸೌಭಾಗ್ಯ ಲಕ್ಷ್ಮಿ ಸಕ್ಕರೆ ಕಾರ್ಖಾನೆ ಇಂದು ರೈತರ ಹತ್ತಾರು ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ. ಬೀದರ ಭಾಗದ ಈಶ್ವರ್ ಖಂಡ್ರೆಯವರ ಕಾರ್ಖಾನೆ, ದಾವಣಗೆರೆ ಬಾಗದ ಕಾರ್ಖಾನೆಗಳು ಎಲ್ಲವೂ ಸಾಲು ಸಾಲಾಗಿ ರೈತರನ್ನು ತುಳಿಯುತ್ತಿವೆ. ಕರ್ನಾಟಕದಲ್ಲಷ್ಟೇ ಈ ಗತಿ ಯಾಕೆ ಎಂಬುದು ನಮ್ಮ ಪ್ರಶ್ನೆ. ಮಹಾರಾಷ್ಟ್ರದಲ್ಲಿ ಸಧ್ಯ FRP ಮೇಲೆ ಸ್ವಲ್ಪ ಅಂತ ಸೇರಿಸಿ ೩೨೦೦-೩೬೦೦ ರವರೆಗೆ ಪ್ರತಿ ಟನ್ ಕಬ್ಬಿಗೆ ಬೆಲೆ ನೀಡಲಾಗುತ್ತಿದೆ, ಗುಜರಾತ ಇನ್ನು ಮುಂದೆ ಹೋಗಿ ೪೬೦೦ ರೂಪಾಯಿ ಪ್ರತಿ ಟನ್ ವರೆಗೂ ನೀಡುತ್ತಿರುವುದು ಗಮನಾರ್ಹ . ಕರ್ನಾಟಕ ಈ ದೇಶದಲ್ಲಿಲ್ಲವೇ ?
ಇನ್ನು ಸಕ್ಕರೆ ಕಾರ್ಖಾನೆಗಳ ಲೆಕ್ಕಾಚಾರ ನೋಡುವುದಾದರೆ ಕಬ್ಬು ಅರೆದು ತೆಗೆಯುವ ಸಕ್ಕರೆ ಜೊತೆಗೆ ಬರುವ ಪ್ರಮುಖ ಉತ್ಪನ್ನಗಳು ಹಾಗು ಬೈ-ಪ್ರಾಡಕ್ಟ್ಸ್ ಒಟ್ಟಾರೆಯಾಗಿ ಈ ಕಾರ್ಖಾನೆಗಳಿಗೆ ಆದಾಯ ತಂದು ಕೊಡುತ್ತವೆ. ಒಂದು ಟನ್ ಕಬ್ಬಿಗೆ ಅಂದಾಜು ೯೫ ಕೆಜಿ ಸಕ್ಕರೆ ಉತ್ಪತ್ತಿಯಾಗುತ್ತದೆ (೯. ೫ ರಿಕವರಿ ಗೆ, ಸಾಮಾನ್ಯವಾಗಿ ನಮ್ಮ ಕಬ್ಬಿನಲ್ಲಿ ೧೦-೧೨ ರಿಕವರಿ ಸಿಗುತ್ತದೆ ), ಇಂದಿನ ಮಾರುಕಟ್ಟೆ ಬೆಲೆ ಕೆ ಜಿ ಸಕ್ಕರೆಗೆ ೩೦ ರೂಪಾಯಿ ಅಂತಾದರೂ ಒಟ್ಟು ಸಕ್ಕರೆಯಿಂದ ಟನ್ ಕಬ್ಬಿಗೆ ಸಿಗುವ ಆದಾಯ ೨೮೫೦ ರೂಪಾಯಿ. ಇನ್ನು ಸಕ್ಕರೆಯೊಟ್ಟಿಗೆ ಕನಿಷ್ಠ ಎರಡು ಪ್ರಮುಖ ಉತ್ಪನ್ನಗಳನ್ನು ಈ ಫ್ಯಾಕ್ಟರಿಗಳಲ್ಲಿ ತಯಾರಿಸಲಾಗುತ್ತದೆ, ಬಗ್ಯಾಸ್, ಮೊಲಾಸಿಸ್, ಪಶು ಆಹಾರ, ಸ್ಪಿರಿಟ್, ಎಥೇನೋಲ ಇಂಧನ, ಇತ್ಯಾದಿ. ಈ ಪ್ರಮುಖ ಎರಡು ಉತ್ಪನ್ನಗಳಿಂದ ಸಕ್ಕರೆಯಿಂದ ಬಂದ ಆದಾಯದಷ್ಟೇ ಹಣ ಬರುವುದು ಗಮನಿಸಬೇಕಾದ ವಿಷಯ. ಅಂದರೆ ಇತರ ಪ್ರಮುಖ ಉತ್ಪನ್ನಗಳ ಆದಾಯದ ಬೆಲೆ ೨೮೫೦X೨ = ೫೭೦೦ ರೂಪಾಯಿ. ಇಲ್ಲಿಗೆ ಒಟ್ಟು ೮೫೫೦ ರೂಪಾಯಿ ಆದಾಯ ಈ ಸಕ್ಕರೆ ಕಾರ್ಖಾನೆಗಳಿಗೆ ಸಿಕ್ಕಿತು. ಇನ್ನು ಬೈ- ಪ್ರಾಡಕ್ಟ್ ತಯಾರಿಸುವ ಇದೆ ಸಕ್ಕರೆ ಕಾರ್ಖಾನೆಗಳು ಅಂದಾಜು ೧೫೦೦-೨೦೦೦ ರೂಪಾಯಿ ಪ್ರತಿ ಟನ್ ಕಬ್ಬಿಗೆ ಗಳಿಸುವುದಾದರೆ ಅಂದಾಜು ೯೦೦೦-೧೧೦೦೦ ರೂಪಾಯಿ ಈ ಕಾರ್ಖಾನೆಗಳು ನಮ್ಮ ಒಂದು ಟನ್ ಕಬ್ಬಿನಿಂದ ಗಿಟ್ಟಿಸುತ್ತವೆ. ಈ ಪ್ರಕ್ರಿಯೆಯಲ್ಲಿ ಕೋ-ಜನರೇಶನ್ ನಲ್ಲಿ ತಯಾರಾಗುವ ವಿದ್ಯುತ ಈ ಕಾರ್ಖಾನೆಗಳಿಗೆ ಬಳಕೆಯಾಗಿ ವಿದ್ಯುತ ಖರ್ಚು ಕಡಿಮೆ ಮಾಡುವುದೂ ನಾವು ಕೊಟ್ಟ ಕಬ್ಬಿನಿಂದಲೆ.
ಇಷ್ಟೆಲ್ಲಾ ಇದ್ದರೂ ರೈತರಿಗೆ ೨೭೫೦ ರೂಪಾಯಿ ಪ್ರತಿ ಟನ್ ಗೆ ನೀಡಲಿಕ್ಕೆ ಈ ಕಾರ್ಖಾನೆಗಳಿಗೆ, ಕಾರ್ಖಾನೆ ನಡೆಸುತ್ತಿರುವ ಮಾಲೀಕರಿಗೆ ಏನು ಸಮಸ್ಸೆ ? ಖಾಸಗಿ ಸಕ್ಕರೆ ಉದ್ಯಮ ನಡೆಸುತ್ತಿರುವ ಹಲವಾರು ಮುಖಂಡರು, ಜನನಾಯಕರು, ಉದ್ಯಮಿಗಳು ಇಂದು ಸಹಕಾರಿ ಸಕ್ಕರೆ ಕಾರ್ಖಾನೆಗಳಲ್ಲಿ ನಿರ್ದೇಶಕರಾಗಿದ್ದಾರೆ, ಲಾಭ ಮಾಡಬೇಕಾದ ಈ ಸಹಕಾರಿ ಸಕ್ಕರೆ ಕಾರ್ಖಾನೆಗಳು ನಷ್ಟದಲ್ಲಿರುವುದೂ ಇವರಿಂದಲೇ. ಸಹಕಾರಿ ಸಕ್ಕರೆ ಕಾರ್ಖಾನೆಗಳಿಂದ ಟೆಂಡರ್ ಕರೆದು ಮಾಲು ಖರೀದಿಸಿ ತಮ್ಮ ತಮ್ಮ ಖಾಸಗಿ ಉದ್ಯಮಗಳಲ್ಲಿ ಅದನ್ನು ಬಳಸಿಕೊಳ್ಳುತ್ತಿರುವ ಭ್ರಷ್ಟರೂ ಇವರೇ, ಲಾಭ ನಷ್ಟದ ಬಾಲನ್ಸ್ ಶೀಟ್ ತೆಗೆದು ನೋಡಿದರೆ ಯಾವೊಂದು ಸಹಕಾರಿ ಸಕ್ಕರೆ ಕಾರ್ಖಾನೆ ವರ್ಷದ ಕೊನೆಯಲ್ಲಿ ಲಾಭ ಸೂಚಿಸಿಲ್ಲ, ಎಲ್ಲವೂ ನಷ್ಟದಲ್ಲೇ ಇವೆ. ಟನ್ ಕಬ್ಬಿಗೆ ೯ ರಿಂದ ೧೧ ಸಾವಿರದ ಉತ್ಪನ್ನ ಹುಟ್ಟಿಸುವ ಈ ಕಾರ್ಖಾನೆಗಳಿಗೆ ರೈತರ ಬಿಡಿಗಾಸು ಕೊಡುವುದು ಮಾತ್ರ ದೊಡ್ಡ ಭಾರದ ವಿಚಾರ. ಈ ತರಹದ ಭ್ರಷ್ಟಾಚಾರ ಮಾಡಿದರೆ ಇನ್ನೇನಾಗೋದು ? ಆದರೆ ಖಾಸಗಿ ಕಾರ್ಖಾನೆಗಳು ಲಾಭದಾಯಕ ವಹಿವಾಟು ನಡೆಸುತ್ತಿದ್ದರೂ ನಮ್ಮ ಹಣ ನೀಡದೆ ವಂಚಿಸುತ್ತಿರುವುದು ಯಾವ ಪುರುಷಾರ್ಥಕ್ಕಾಗಿ ?
ಇನ್ನು ಇಷ್ಟೆಲ್ಲಾ ಘಟನೆಗಳು ನಡೆದಿದ್ದರು ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ, ರಾಜ್ಯ ಸರ್ಕಾರ, ರಾಜ್ಯದ ಮುಖ್ಯಮಂತ್ರಿ ಮಾತ್ರ ಈ ಕಡೆ ತಲೆ ಹಾಕಿಲ್ಲ. ನಾನು ೧೯ ನೇ ತಾರೀಕಿಗೆ ಬಂದು ಈ ಸಮಸ್ಸೆಯನ್ನು ಆಲಿಸಿ ಬಗೆಹರಿಸುತ್ತೇನೆಂದು ಕುಮಾರಸ್ವಾಮಿಯವರು ಕರೆ ಮಾಡಿ ತಿಳಿಸಿದ ಮೇಲೆ ಈಗ ಈ ಹೋರಾಟ ಬೂದಿ ಮುಚ್ಚಿದ ಕೆಂಡದಂತೆ ಇದೆ. ಇನ್ನು ಕೊಟ್ಟ ಮಾತಿನಂತೆ ಬಂದು ರೈತರ ಸಮಸ್ಸೆ ಬಗೆಹರಿಸುತ್ತಾರೋ, ಇಲ್ಲ ಮತ್ತೆ ವಚನ ಭ್ರಷ್ಟರಾಗುತ್ತಾರೋ ಕಾದು ನೋಡುತ್ತೇವೆ. ಇನ್ನು ಕಾಟಾಚಾರಕ್ಕೆ ಬಂದು ಕಾಗೆ ಹಾರಿಸಿ ಹೋಗುವುದಾದರೆ ಈ ಹೋರಾಟ ಇದರಲ್ಲಿ ಬಾಗವಾಗಿರುವ ಭ್ರಷ್ಟರ ಬುಡ ಸುಡುವುದಂತೂ ಖಚಿತ.



