ಬೆಳಗಾವಿ -ದೇಶದ 4,980 ಪ್ರದೇಶಗಳಲ್ಲಿ, ವಿಶ್ವದ 49 ದೇಶಗಳಲ್ಲಿ ಸಂಸ್ಕೃತದ ಪ್ರಚಾರಕ್ಕಾಗಿ ಕೆಲಸ ಮಾಡುತ್ತಿರುವ ಸಂಸ್ಕೃತ ಭಾರತೀಯ ಸಂಸ್ಥಾಪಕ ಜನಾರ್ದನ ಹೆಗಡೆ ಬೆಳಗಾವಿಗೆ ಭೇಟಿ ನೀಡಿದ್ದರು.
ಅವರ ಸಾಹಿತ್ಯ ಸಾಧನೆಗೆ ರಾಷ್ಟ್ರಪತಿ ಪ್ರಶಸ್ತಿ, ಬಾಲ ಸಾಹಿತ್ಯ ಮತ್ತು ಗ್ರಂಥ ರಚನೆಗಾಗಿ ಎರಡು ಬಾರಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಎಸ್. ಎಲ್. ಭೈರಪ್ಪನವರ ಕಾದಂಬರಿಯನ್ನು ಸಂಸ್ಕೃತಕ್ಕೆ (ಧರ್ಮಶ್ರೀ) ಅನುವಾದಿಸಿದ್ದಕ್ಕೆ ಭಾಷಾ ಭಾರತಿ ಪ್ರಶಸ್ತಿ ಹಾಗೂ ವಿವಿಧ ವಿಶ್ವವಿದ್ಯಾಲಯಗಳ ಡಿ. ಲಿಟ್ ಪದವಿ ಪಡೆದಿದ್ದಾರೆ.
ಬೆಳಗಾವಿಯ ಶ್ರೀ ಹನುಮಾನ್ ಮಂದಿರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ್ದ ಜನಾರ್ದನ ಹೆಗಡೆ, ‘ಸಂಸ್ಕೃತ ಕಠಿಣವಾದದ್ದಲ್ಲ, ಅದನ್ನು ಕಲಿಸುವ ಪದ್ಧತಿಯಲ್ಲಿ ಸಂಸ್ಕೃತ ಭಾರತಿ ಬದಲಾವಣೆ ತಂದಿದೆ, ಇದರ ಪರಿಣಾಮದಿಂದಾಗಿ ಭಾಷಾಶಿಕ್ಷಣ ಕ್ಷೇತ್ರದಲ್ಲಿ ಪರಿವರ್ತನೆಯಾಗುತ್ತಿದೆ ಎಂದು ತಿಳಿಸಿದರು. ಸಂಸ್ಕೃತಕ್ಕಾಗಿ ಸಮಯ ಕೊಡುತ್ತಿರುವ ಕಾರ್ಯಕರ್ತರೇ ಮುಂದಿನ ಭೌದ್ಧಿಕ ಯುಗದ ಆಧಾರ ಎಂದು ಜನಾರ್ದನ ಹೆಗಡೆ ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಕೃತ ಭಾರತೀಯ ಬೆಳಗಾವಿ ನಗರ ಉಪಾಧ್ಯಕ್ಷರಾದ ಮಂಜುಳಾ ಹರ್ಲೆಕರ್, ನಾಗರತ್ನ ಹೆಗಡೆ, ಲಕ್ಷ್ಮಿನಾರಾಯಣ ಭುವನಕೋಟೆ, ಸುಬ್ರಹ್ಮಣ್ಯ ಭಟ್, ಸಂಧ್ಯಾ ಭಟ್ ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅವರು ಬೆಳಗಾವಿ ಹಿಂದವಾಡಿಯ ಏ. ಸಿ. ಪಿ. ಆರ್. ರಾನಡೆ ಮಂದಿರಕ್ಕೆ ಸಹ ಭೇಟಿ ನೀಡಿದ್ದರು.


