ನಾನು ಸಾಮಾನ್ಯ ಕಾರ್ಯಕರ್ತೆ, ಪಕ್ಷ ಹೇಳಿದಂತೆ ಕೇಳುವೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Ravi Talawar
ನಾನು ಸಾಮಾನ್ಯ ಕಾರ್ಯಕರ್ತೆ, ಪಕ್ಷ ಹೇಳಿದಂತೆ ಕೇಳುವೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
WhatsApp Group Join Now
Telegram Group Join Now
ಡಿಸಿಎಂ ಅವರು ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುತ್ತಾರೆ
 *ಉಡುಪಿ:* ನಾನು ಕಾಂಗ್ರೆಸ್ ಸಾಮಾನ್ಯ ಕಾರ್ಯಕರ್ತೆ, ನವೆಂಬರ್ ತಿಂಗಳ ಕ್ರಾಂತಿ, ಶಾಂತಿ ಎಲ್ಲವೂ ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಕನ್ನಡ ರಾಜ್ಯೋತ್ಸವದ ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮುಖ್ಯಮಂತ್ರಿ ಬದಲಾವಣೆ ಎಐಸಿಸಿ ಅಧ್ಯಕ್ಷರಿಗೆ ಬಿಟ್ಟ ವಿಚಾರ. ನಾನು ಸೇರಿದಂತೆ ಎಲ್ಲರೂ ಪಕ್ಷ ಹೇಳಿದಂತೆ ಕೇಳುತ್ತೇವೆ‌. ಪಕ್ಷ ನನ್ನನ್ನು ಗುರುತಿಸಿ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದೆ. ನಿಮ್ಮ ಕೆಲಸ ಬೇರೆ ಇದೆ ಎಂದು ಪಕ್ಷ ಸೂಚಿಸಿದರೂ ಸಂತೋಷದಿಂದ ಕೇಳುತ್ತೇವೆ ಎಂದರು.‌
ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೈಕಮಾಂಡ್ ಮಾತಿನಂತೆ ನಡೆದುಕೊಳ್ಳುವ ವ್ಯಕ್ತಿ. ಸೋನಿಯಾ ಗಾಂಧಿ ಅವರ ತ್ಯಾಗದ ಮಾತನ್ನು ಬಹಳಷ್ಟು ಸಾರಿ ಹೇಳಿದ್ದಾರೆ. ಇದಕ್ಕೆ ವಿಶೇಷ ಅರ್ಥವನ್ನು ಕಲ್ಪಿಸುವುದು ಬೇಡ. ಗಾಂಧಿ ಪರಿವಾರದ ಇಂದಿರಾಗಾಂಧಿ, ರಾಜೀವ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರ ಇತಿಹಾಸದ ಬಗ್ಗೆ ನಮಗೆಲ್ಲ ಗೊತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.‌
ನವೆಂಬರ್ ಕ್ರಾಂತಿ ಅಂದರೆ ಬರೀ  ಭ್ರಾಂತಿಯಷ್ಟೇ ಎಂದಿರುವ ಸಚಿವ ಹೆಚ್.ಸಿ ಮಹಾದೇವಪ್ಪ ಅವರ ಹೇಳಿಕೆ‌ಗೆ ಪ್ರತಿಕ್ರಿಯಿಸಿದ ಸಚಿವರು, ಅವರು ನಮ್ಮ ಪಕ್ಷದ ಹಿರಿಯ ಮುಖಂಡರು, ಸಂಪುಟದಲ್ಲಿ ಅತ್ಯಂತ ಬುದ್ಧಿವಂತ ಮಂತ್ರಿ. ಅವರೇನು ಹೇಳಿದರೂ ಅದಕ್ಕೆ ನಾನು ಬೆಂಬಲಿಸುತ್ತೇನೆ ಎಂದು ಹೇಳಿದರು.
* *ಪ್ರತ್ಯೇಕ ಕಲ್ಯಾಣ ಕರ್ನಾಟಕ ರಾಜ್ಯ ಹೋರಾಟಕ್ಕೆ ಬೆಂಬಲ ಇಲ್ಲ*
ಕರ್ನಾಟಕ ರಾಜ್ಯೋತ್ಸವ ದಿನ ಬಹಳ ಪವಿತ್ರವಾದದ್ದು. ಪ್ರತ್ಯೇಕ ಧ್ವಜ ಹಾರಿಸಿದವರಿಗೆ ನಾನು ಬೆಂಬಲ ಮಾಡಲ್ಲ. ಕರ್ನಾಟಕದ ಏಕೀಕರಣಕ್ಕೆ ಹಿರಿಯರು, ಸಾಹಿತಿಗಳು ಹೋರಾಟ ಮಾಡಿದ್ದಾರೆ. ಈ ಸುಸಂದರ್ಭದಲ್ಲಿ ಈ ಬೆಳವಣಿಗೆಗಳ ಬಗ್ಗೆ ನಾನು ಮಾತಾಡಲ್ಲ. ಈ ಬೆಳವಣಿಗೆ ಬಗ್ಗೆ ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ ಎಂದರು.
 *ಪ್ರತಾಪ್ ಸಿಂಹ- ಪ್ರದೀಪ್ ಈಶ್ವರ್ ಕೀಳು ಮಟ್ಟದ ಮಾತು ನಿಲ್ಲಿಸಿ*
ಶಾಸಕ ಪ್ರದೀಪ್ ಈಶ್ವರ್ ಹಾಗೂ ಮಾಜಿ ಸಂಸದ ಪ್ರತಾಪ್‌ ಸಿಂಹ ನಡುವಿನ ಮಾತಿನ ಸಮರಕ್ಕೆ ಕುರಿತಂತೆ ಪ್ರತಿಕ್ರಿಯಿಸಿದ ಸಚಿವರು, ಅಕ್ಕನ ಸ್ಥಾನದಲ್ಲಿ ನಿಂತು ಇಬ್ಬರಿಗೂ ಕಿವಿಮಾತು ಹೇಳುತ್ತೇನೆ. ನನ್ನ ವಿಚಾರದಲ್ಲೂ ಬಹಳಷ್ಟು ಅಪಮಾನಗಳನ್ನು ಅನುಭವಿಸಿದ್ದೇನೆ. ರಾಜಕಾರಣಿಗಳನ್ನು ಜನ ಗಮನಿಸುತ್ತಿದ್ದಾರೆ. ನಾವು ರೋಲ್ ಮಾಡೆಲ್ ಆಗಬೇಕೆ ಹೊರತು ನಾಚಿಕೆ ಆಗುವಂತೆ ವರ್ತಿಸಬಾರದು ಎಂದರು.‌
ನಿಮ್ಮ ಆಚಾರ ವಿಚಾರ ಭಾಷೆಯನ್ನು ಜನ ನೋಡುತ್ತಾರೆ. ನಿಮ್ಮ ತಂದೆ ತಾಯಿಯನ್ನು ಎಳೆಯುವುದು. ಸರಿಯಲ್ಲ, ಇಲ್ಲಿಗೆ ಬಿಟ್ಟುಬಿಡಿ. ಇಬ್ಬರೂ ಬುದ್ಧಿವಂತರಿದ್ದೀರಿ, ಸಾಕು ಇಲ್ಲಿಗೇ ಬಿಟ್ಟುಬಿಡಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಿವಿ ಮಾತು ಹೇಳಿದರು.
* *ಧರ್ಮಸ್ಥಳ ಕೇಸ್: ಹೈಕೋರ್ಟ್ ತೀರ್ಪು ಪಾಲನೆ*
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆಗೆ ಕೋರ್ಟ್ ನಿರ್ಬಂಧನೆಯನ್ನು ಹೇರಿದೆ. ಕೋರ್ಟ್‌ ಆದೇಶವನ್ನು ನಾವು ಪಾಲಿಸಬೇಕು, ಪಾಲಿಸುತ್ತಿದ್ದೇವೆ. ಸರ್ಕಾರಕ್ಕೆ, ತನಿಖೆಗೆ ಹಿನ್ನಡೆ ಆಗಿದೆ ಎಂಬ ಚರ್ಚೆ ಸರಿಯಲ್ಲ.‌ ತಡೆಯಾಜ್ಞೆಯನ್ನು ತೆರವು ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ. ಧರ್ಮಸ್ಥಳ ಪವಿತ್ರ ಕ್ಷೇತ್ರ ಕ್ಷೇತ್ರ ಎಂಬ ಸಂದೇಶ ಹೊರಗೆ ಬರಬೇಕು ಎಂದರು.‌
ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ಪೂರ್ಣ ಸಹಕಾರ ಕೊಡುತ್ತದೆ. ಸರಕಾರಕ್ಕೆ ಸಂಪನ್ಮೂಲದ ಕೊರತೆ ಇಲ್ಲ, ಸರಾಗವಾಗಿ ಸಾಗುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
WhatsApp Group Join Now
Telegram Group Join Now
Share This Article