ಕನ್ನಡ ನಾಡು, ನುಡಿ ರಕ್ಷಣೆಗೆ ಎಲ್ಲರೂ ಒಗ್ಗಟ್ಟಾಗಿ ದುಡಿಯೋಣ : ಲಕ್ಷ್ಮೀ ಹೆಬ್ಬಾಳಕರ 

Ravi Talawar
ಕನ್ನಡ ನಾಡು, ನುಡಿ ರಕ್ಷಣೆಗೆ ಎಲ್ಲರೂ ಒಗ್ಗಟ್ಟಾಗಿ ದುಡಿಯೋಣ : ಲಕ್ಷ್ಮೀ ಹೆಬ್ಬಾಳಕರ 
WhatsApp Group Join Now
Telegram Group Join Now
ಉಡುಪಿ : ಅತ್ಯಂತ ಸಂಭ್ರಮ, ಸಡಗರ ಹಾಗೂ ವೈಭವಯುತವಾಗಿ ಆಚರಿಸುತ್ತಿರುವ ಇಂದಿನ 70ನೇ ಕನ್ನಡ ರಾಜ್ಯೋತ್ಸವ ಶುಭ ಸಂದರ್ಭದಲ್ಲಿ ಜಿಲ್ಲೆಯ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಜೊತೆಗೆ, ಇಂದು ರಾಜ್ಯೋತ್ಸವ ಪ್ರಶಸ್ತಿ ಪಡೆಯುತ್ತಿರುವ ಮಹನೀಯರೆಲ್ಲರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
 ನಮ್ಮ ರಾಜ್ಯದ ಸ್ವಾತಂತ್ರ್ಯ ಹೋರಾಟಗಾರರು, ವಿದೇಶಿಯರ ಆಡಳಿತದಿಂದ ದೇಶವನ್ನು ಮುಕ್ತಗೊಳಿಸುವ ಜೊತೆಗೆ, ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡ ಭಾಷಿಕರನ್ನು ಒಂದುಗೂಡಿಸಿ, ಕನ್ನಡ ನಾಡಿನ ಪುನರ್ ‌ರಚನೆಯ ಕಾರ್ಯವನ್ನು ಸಾಧಿಸುವ ಕನಸು ಹೊಂದಿದ್ದರು.
 ಕನ್ನಡ ಭಾಷೆಯನ್ನಾಡುವ ಜನರು ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮದ್ರಾಸ್ ಪ್ರಾಂತ್ಯ, ಸೇರಿದಂತೆ ಮತ್ತಿತರ ಹತ್ತು ಹಲವು ವಿಭಾಗಗಳಲ್ಲಿ ನೆಲೆಸಿದ್ದರು. ಅಲ್ಲಿಯೂ ಕನ್ನಡದ ಕೃಷಿ, ಕನ್ನಡದ ಬಗ್ಗೆ ಅಪಾರ ಚಿಂತನೆ, ಅಭಿಮಾನ, ಸಾಹಿತ್ಯ ರಚನೆ ನಡೆಯುತ್ತಿತ್ತು.
ಸ್ವತಂತ್ರ ಭಾರತದ ರಾಜ್ಯ ಪುನರ್ ವಿಂಗಡಣೆಯು ಭಾಷಾ ಆಧಾರಿತ ರಾಜ್ಯವಾಗಬೇಕೆಂಬ ಸೂತ್ರದ ಆಧಾರದ ಮೇಲೆ 1956ರ ನವೆಂಬರ್ 1 ರಂದು ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬರುವುದರೊಂದಿಗೆ ಕನ್ನಡದ ಮನಸ್ಸುಗಳು ಒಂದಾದವು. 1973ರಲ್ಲಿ ದೇವರಾಜ ಅರಸರು “ಕರ್ನಾಟಕ” ಎಂದು ಮರುನಾಮಕರಣ ಮಾಡಿದರು.
ಕರ್ನಾಟಕ ಏಕೀಕರಣ ಹೋರಾಟದಲ್ಲಿ ಭಾಗವಹಿಸಿದ ಹಿರಿಯ ರಾಜಕೀಯ ಮುತ್ಸದ್ದಿಗಳು, ಸಾಹಿತಿಗಳು, ಹಿರಿಯ ನಾಗರಿಕರ ತ್ಯಾಗ, ಬಲಿದಾನ ಅವಿಸ್ಮರಣೀಯ.
ಇಂದು ಕನ್ನಡ ಸಾಹಿತ್ಯ ಹಾಗೂ ನಾಡನ್ನು ಶ್ರೀಮಂತಗೊಳಿಸಿದ ಎಲ್ಲರನ್ನೂ ಕೃತಜ್ಞತಾ ಪೂರ್ವಕವಾಗಿ ಗೌರವಿಸೋಣ.
ನಮ್ಮ ರಾಜ್ಯ ಸಾಂಸ್ಕೃತಿಕ ವೈಭವಕ್ಕೆ ಹೆಸರುವಾಸಿಯಾಗಿದೆ. ಕಾಫಿ, ಚಿನ್ನ, ರೇಷ್ಮೆ ಸೀರೆಗಳು ರಾಜ್ಯವನ್ನು ವಿಶ್ವ ವಿಖ್ಯಾತಿಗೊಳಿಸಿವೆ.
 ಬಸವಣ್ಣ, ರಾಣಿ ಚೆನ್ನಮ್ಮ, ಸರ್.ಎಂ ವಿಶ್ವೇಶ್ವರಯ್ಯ ಅವರಂತಹ ಮಹಾನ್ ಚೇತನರು ರಾಜ್ಯದ ಹಿರಿಮೆಯನ್ನು ಹೆಚ್ಚಿಸಿದ್ದಾರೆ.
 ನಮ್ಮ ನಾಡು -ನುಡಿಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವುದರ ಜೊತೆಗೆ, ನಮ್ಮ ಭಾಷೆ ಮತ್ತು ಕನ್ನಡ ಸಂಸ್ಕೃತಿಯನ್ನು ಮತ್ತಷ್ಟು ಶ್ರೀಮಂತಗೊಳಿಸುವ ಅವಶ್ಯಕತೆ ಇದೆ. ಇದಕ್ಕೆ ನಾವೆಲ್ಲರೂ ಕೈಜೋಡಿಸೋಣ.
ಸ್ವಾತಂತ್ರ್ಯಾ ನಂತರ ಜಿಲ್ಲೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಗುರುತರ ಬದಲಾವಣೆ ಕಂಡಿದೆ. ಜಿಲ್ಲೆಯ ಜನತೆ ಉತ್ತಮ ಶಿಕ್ಷಣ ಪಡೆದು ಉದ್ಯೋಗವನ್ನು ಅರಸಿ, ಮಧ್ಯ ಪ್ರಾಚ್ಯ ಸೇರಿದಂತೆ ಹಲವು ದೇಶಗಳಿಗೆ ಹಾಗೂ ಮುಂಬೈ ಮುಂತಾದ ರಾಜ್ಯಗಳಲ್ಲಿ ನೆಲೆಸಿ ಅಲ್ಲಿಯೂ ಕನ್ನಡದ ಕಂಪನ್ನು ಪಸರಿಸುವುದರ ಜೊತೆಗೆ ಆರ್ಥಿಕ ಸಫಲತೆಯನ್ನು ಹೊಂದಿರುವುದು ಹೆಮ್ಮೆಯ ವಿಷಯ.
ಜಿಲ್ಲೆಯ ಜನತೆಯು ವಿಶಿಷ್ಟ ಆಚಾರ -ವಿಚಾರ, ಪರಂಪರೆ, ಸಂಸ್ಕೃತಿಯನ್ನು ಹೊಂದುವುದರ ಜೊತೆಗೆ ಸಮಾಜದ ಒಳಿತಿಗಾಗಿ ಸಮಾಜಸೇವಾ ಕಾರ್ಯದಲ್ಲೂ ಮುಂದಿದ್ದಾರೆ.
ಕಳೆದ ಮಾಹೆಯಲ್ಲಿ ನಾನೇ ಉದ್ಘಾಟಿಸಿದ ನೀರೆ ಗ್ರಾಮ ಪಂಚಾಯತಿ ಕಟ್ಟಡಕ್ಕೆ ಸರ್ಕಾರದ ಅನುದಾನದ ಜೊತೆಗೆ ಸಾರ್ವಜನಿಕ ದೇಣಿಗೆಯಿಂದ ತಾಲೂಕು ಮಟ್ಟದ ಕಟ್ಟಡ ರೀತಿಯಲ್ಲಿ ಸುಸಜ್ಜಿತವಾದ ಗ್ರಾಮ ಪಂಚಾಯತ್ ನಿರ್ಮಾಣ ಮಾಡಿರುವುದು ಇದಕ್ಕೆ ಸಾಕ್ಷಿ.
ಕಳೆದವಾರ ಜಿಲ್ಲಾ ಆಸ್ಪತ್ರೆಗೆ ದೇವದಾಸ್ ಕುಟುಂಬಸ್ಥರು 25 ಲಕ್ಷ ರೂ. ಮೊತ್ತದ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಯಂತ್ರವನ್ನು ದೇಣಿಗೆಯಾಗಿ  ನೀಡಿದ್ದಾರೆ.
ಇಂತಹ ಸಮಾಜಮುಖಿ ಕಾರ್ಯಗಳು ಜಿಲ್ಲೆಯಾದ್ಯಂತ ನಿರಂತರವಾಗಿ ನಡೆಯುತ್ತಿರುವುದು ಶ್ಲಾಘನೀಯ ವಿಷಯ.
ಜಿಲ್ಲೆಯಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆಯೆ ಅಧಿಕವಾಗಿದ್ದು, ಪ್ರಸಕ್ತ ಲಿಂಗಾನುಪಾತದಲ್ಲಿ 1000 ಪುರುಷರಿಗೆ 1004 ಮಹಿಳೆಯರಿದ್ದಾರೆ.
ಇದು ನಾವೆಲ್ಲ ಹೆಮ್ಮೆ ಪಡುವ ವಿಚಾರವಾಗಿದೆ. ಇಂದಿಗೂ ಮಾತೃಪ್ರಧಾನ ಕುಟುಂಬ ವ್ಯವಸ್ಥೆಯಿರುವುದು ಜಿಲ್ಲೆಯ ಹೆಗ್ಗಳಿಕೆ. ಇದು ಜಗತ್ತಿನಲ್ಲೇ ಅತೀ ಅಪರೂಪದ ಸಂಗತಿಯಾಗಿದೆ.
ಜಿಲ್ಲೆಯ ಪ್ರಮುಖ ಕಲೆಯಾದ ಯಕ್ಷಗಾನ ಬಯಲಾಟ, ತಾಳಮದ್ದಳೆಗಳು ಜಿಲ್ಲೆಯ ಜನರ ಸಾಂಸ್ಕೃತಿಕ ಬದುಕಿನ ಭಾಗವಾಗುವುದರ ಜೊತೆಗೆ ಅಂತರಾಷ್ಟ್ರೀಯ ಕಲೆಯಾಗಿ ಆಕರ್ಷಣೆ ಪಡೆದಿದೆ.
ಪಾಡ್ದನ, ಭೂತಕೋಲ, ಆಟಿ ಕಳಂಜ, ನಾಗಮಂಡಲ ಮುಂತಾದ ಜಾನಪದ ಸಂಸ್ಕೃತಿ ಈ ಮಣ್ಣಿನಲ್ಲಿ ರೂಪತಳೆದ ಆರಾಧನ ಕಲೆಗಳಾಗಿವೆ.
  ನಮ್ಮ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಗ್ರಾಮೀಣ ಮಟ್ಟದಲ್ಲಿ ಮಹಿಳಾ ಸಬಲೀಕರಣಕ್ಕೆ ಹೊಸ ಆಯಾಮ ನೀಡಿವೆ. ಇದರಿಂದ ರಾಜ್ಯಾದ್ಯಂತ ಶೇ. 70 ರಿಂದ 95 ರಷ್ಟು ಬಡ ಹಿಂದುಳಿದ ಮಹಿಳೆಯರ ಜೀವನ ಮಟ್ಟ ಸುಧಾರಣೆಯಾಗಿದೆ.
ಶಕ್ತಿ, ಗೃಹಜ್ಯೋತಿ ಉಳಿತಾಯದ ಹಣ ಮತ್ತು ಗೃಹಲಕ್ಷ್ಮೀ ಹಣವನ್ನು ಪ್ರಮುಖವಾಗಿ ಆಹಾರ ಪದಾರ್ಥಗಳ ಖರೀದಿಗೆ ಬಳಸುತ್ತಿದ್ದು, ಇದರಿಂದ ಶೇ.88ರಷ್ಟು ಕುಟುಂಬಗಳು ಉತ್ತಮ ಮತ್ತು ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸುತ್ತಿದ್ದಾರೆ.
ಶೇ. 83 ರಷ್ಟು ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಗ್ಯಾರಂಟಿಗಳು ಸಹಕಾರಿಯಾಗಿರುವ ಅಂಶ ಅಧ್ಯಯನದಿಂದ ಬಹಿರಂಗವಾಗಿದೆ.
ಯುವ ಜನಾಂಗಕ್ಕೆ ಯುವನಿಧಿ ಯೋಜನೆ ಆರ್ಥಿಕ ಬಲ ನೀಡಿದೆ. ನಮ್ಮ ಸರ್ಕಾರ ಇದುವರೆಗೂ ಸುಮಾರು 1 ಲಕ್ಷ ಕೋಟಿ ರೂಪಾಯಿಗಳನ್ನು ಗ್ಯಾರಂಟಿ ಯೋಜನೆಗಳಿಗೆ ವಿನಿಯೋಗಿಸಿದೆ.
  ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಗದು ಪುರಸ್ಕಾರವನ್ನು ಹೆಚ್ಚಿಸಲಾಗಿದ್ದು, ಚಿನ್ನದ ಪದಕ ವಿಜೇತರಿಗೆ 7 ಲಕ್ಷ ರೂ, ಬೆಳ್ಳಿ ಪದಕ ವಿಜೇತರಿಗೆ 5 ಲಕ್ಷ ರೂ, ಹಾಗೂ ಕಂಚಿನ ಪದಕ ವಿಜೇತರಿಗೆ 3 ಲಕ್ಷ ರೂ. ನೀಡಲು ಸರ್ಕಾರ ನಿರ್ಧರಿಸಿದೆ.
ಜೊತೆಗೆ ಬಜೆಟ್ ‌ನಲ್ಲೂ ಕ್ರೀಡಾ ಕ್ಷೇತ್ರಕ್ಕೆ ವಿಶೇಷ ಅನುದಾನ, ಬೆಂಬಲವನ್ನು ನೀಡಲಾಗುವುದು.
ನಮ್ಮ ರಾಜ್ಯ ಸಿಲಿಕಾನ್ ರಾಜಧಾನಿಯಾಗಿದೆ. ಮುಂದಿನ ದಿನಗಳಲ್ಲಿ ನಾವು ವಿಶ್ವದ ನಾವೀನ್ಯತಾ ರಾಜಧಾನಿಯಾಗುವತ್ತ ಸಾಗುತ್ತಿದ್ದೇವೆ.
 ಸಂಕಷ್ಟದಲ್ಲಿ ಇರುವ ಮಕ್ಕಳು ಮತ್ತು ಮಹಿಳೆಯರಿಗೆ ನೆರವಾಗಲು ಅಕ್ಕಪಡೆಗಳನ್ನು ಸ್ಥಾಪಿಸಲಾಗುತ್ತಿದ್ದು, ನವೆಂಬರ್ 19 ರಂದು ಬೆಂಗಳೂರಿನಲ್ಲಿ ಚಾಲನೆ ನೀಡಲಿದ್ದೇವೆ. ನಂತರದಲ್ಲಿ ಉಡುಪಿ, ಮೈಸೂರು, ಮಂಗಳೂರು ಮತ್ತು ಬೆಳಗಾವಿಯಲ್ಲೂ ಅಕ್ಕಪಡೆಗಳು ಜಾರಿಗೆ ಬರಲಿವೆ.
ಇಂಡಿಯಾ ಫಾರ್ ಜಸ್ಟೀಸ್ ವರದಿಯಲ್ಲಿ ಕರ್ನಾಟಕ ಪೊಲೀಸ್ ನಂ.1 ಸ್ಥಾನದಲ್ಲಿದೆ ಎಂಬ ವರದಿ ರಾಜ್ಯದ ಘನತೆಯನ್ನು ಹೆಚ್ಚಿಸಿದೆ.
ರೈತ ಬಾಂಧವರ ಭೂಮಿಯ ಮಾಲೀಕತ್ವದ ದಾಖಲೆಗಳ ನಿರ್ವಹಣೆಗೆ “ನನ್ನ ಭೂಮಿ”, “ಪೋಡಿ ಆಂದೋಲನ”, “ಇ-ಪೌತಿ ಯೋಜನೆ”, “ಇ-ಚಾವಡಿ” ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ.
ನಮ್ಮ ಸರ್ಕಾರ ಕಾರ್ಮಿಕರ ಕಲ್ಯಾಣಕ್ಕಾಗಿ ಅನೇಕ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ.
ನಮ್ಮ ರಾಜ್ಯವು ಪ್ರಗತಿಪರ ರಾಜ್ಯವಾಗಿದ್ದು, ಬಂಡವಾಳ ಹೂಡಿಕೆಗೆ ಪೂರಕವಾದ ವಾತಾವರಣವನ್ನು ಉತ್ತಮಪಡಿಸಲಾಗುತ್ತಿದೆ.
ಅಂತರ್ಜಲ ಮಿತಬಳಕೆ ಮತ್ತು ಅಭಿವೃದ್ಧಿಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ  “ನೀರಿದ್ದರೆ ನಾಳೆ” ಎಂಬ ವಿನೂತನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ.
ಮಳೆ ಮತ್ತು ಪ್ರವಾಹದಿಂದಾಗುತ್ತಿದ್ದ ಬೆಳೆಹಾನಿಯ ಪರಿಹಾರದ ಮೊತ್ತವನ್ನು ಹೆಚ್ಚಿಸಲಾಗಿದೆ. ಎನ್.ಡಿ.ಆರ್.ಎಫ್ ನಿಯಮಾವಳಿಯ ಅನ್ವಯ ನೀಡುತ್ತಿದ್ದ ಪರಿಹಾರ ಮೊತ್ತಕ್ಕೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಹೆಕ್ಟೇರಿಗೆ 8,500 ರೂ. ನೀಡುತ್ತಿದೆ.
2024-29ರ ನಮ್ಮ ಹೊಸ ಕರ್ನಾಟಕ ಪ್ರವಾಸೋದ್ಯಮ ನೀತಿ ಅನುಷ್ಠಾನಗೊಳಿಸಿದ್ದು,  ರಾಜ್ಯವನ್ನು ಭಾರತದ ನಂ. 1 ಪ್ರವಾಸೋದ್ಯಮ ತಾಣವನ್ನಾಗಿ ಪರಿವರ್ತಿಸಲು ಇದು ನಮ್ಮ ಕಾರ್ಯತಂತ್ರದ ನೀಲ ನಕ್ಷೆಯಾಗಿದೆ.
1.5 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಹಾಗೂ 8 ಸಾವಿರ ಕೋಟಿ ಹೂಡಿಕೆಗಳನ್ನು ಆಕರ್ಷಿಸುವ ಗುರಿ ಹೊಂದಿದ್ದೇವೆ. ನಮ್ಮ ಕರಾವಳಿ ಆಕರ್ಷಣೆಯನ್ನು ಹೆಚ್ಚಿಸಲು 200 ಕೋಟಿ ರೂ. ಮೀಸಲಿಡಲಾಗಿದೆ.
ಮಕ್ಕಳ ಹಕ್ಕುಗಳ ರಕ್ಷಣೆ ಇಂದಿನ ತುರ್ತು ಅಗತ್ಯವಿರುವ ಹಿನ್ನೆಲೆಯಲ್ಲಿ ಅನುಷ್ಠಾನಗೊಂಡಿರುವ ಮಿಷನ್ ವಾತ್ಸಲ್ಯ ಯೋಜನೆಯು ಮಕ್ಕಳ ಅಭಿವೃದ್ಧಿ ಮತ್ತು ರಕ್ಷಣೆಯ ಆದ್ಯತೆಯನ್ನು ಸಾಧಿಸುವ ಒಂದು ಮಾರ್ಗವಾಗಿದೆ. ಮಕ್ಕಳ ಹಿತರಕ್ಷಣೆಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ.
ರಾಜ್ಯದಲ್ಲಿ ಅಂಗನವಾಡಿ ಪ್ರಾರಂಭವಾಗಿ 50 ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್ 19ರಂದು ಸುವರ್ಣ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುವುದು.
 ಮಹಿಳಾ ಉದ್ಯೋಗಿಗಳಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ಋತುಚಕ್ರ ರಜೆ ನೀಡುವುದನ್ನು ಜಾರಿ ಮಾಡಲು ನಿಯಮ ರೂಪಿಸಲಾಗಿದೆ.
2024-25ನೇ ಸಾಲಿನಿಂದಲೇ ನಾಲ್ಕು ಬಗೆಯ ವಿಕಲಚೇತನರ ಆರೈಕೆದಾರರಿಗೆ ಪ್ರತಿ ಮಾಹೆಗೆ 1000 ರೂ.ಗಳ ಆರೈಕೆದಾರರ ಭತ್ಯೆ ನೀಡುವ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ. ಇದು ದೇಶದಲ್ಲೇ ಪ್ರಥಮ.
 ಜಿಲ್ಲೆಯಾದ್ಯಂತ ಗೃಹ ಆರೋಗ್ಯ ಯೋಜನೆಯನ್ನು ನಿರಂತರವಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, 20 ಸಾವಿರದ 48 ಫಲಾನುಭವಿಗಳು ಇದರ ಲಾಭ ಪಡೆದಿದ್ದಾರೆ. ಇವುಗಳ ಜೊತೆಗೆ ನಗರ ಪ್ರದೇಶದ ದುರ್ಬಲ ವರ್ಗದವರ ಸೇವೆಗಾಗಿ 13 ನಮ್ಮ ಕ್ಲಿನಿಕ್ ಕಾರ್ಯನಿರ್ವಹಿಸುತ್ತಿವೆ.
ಮೀನುಗಾರರು ಕಡಲಿನಲ್ಲಿ ಹಗಲು – ರಾತ್ರಿಯನ್ನು ಲೆಕ್ಕಿಸದೆ ತಮ್ಮ ಜೀವವನ್ನು ಪಣಕ್ಕಿಟ್ಟು ಕಾಯಕವನ್ನು ಮಾಡುವುದರೊಂದಿಗೆ ನೈಸರ್ಗಿಕ ಸಂಪನ್ಮೂಲಗಳ ಸದ್ಬಳಕೆಗೆ ಮುಂದಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಆಕಸ್ಮಿಕ ಅಪಘಾತದಿಂದ ಪ್ರಾಣಹಾನಿಯಾದ 6 ಜನ ಮೃತರ ಕುಟುಂಬದ ವಾರಸುದಾರರಿಗೆ ಸಾಂತ್ವನ ಹೇಳುವುದರ ಜೊತೆಗೆ ತಲಾ 10 ಲಕ್ಷ ರೂ. ಗಳಂತೆ 60 ಲಕ್ಷ ರೂ. ಗಳನ್ನು ಹಾಗೂ ದೋಣಿಗಳ ಹಾನಿಗೆ 30 ಲಕ್ಷ ರೂ. ಪರಿಹಾರ ಧನವನ್ನು ನೀಡಲಾಗಿದೆ.
ಸಾಮರಸ್ಯದಿಂದ ಕೂಡಿದ ಸಮೃದ್ಧ ಕನ್ನಡ ನಾಡನ್ನು ನಿರ್ಮಾಣ ಮಾಡುವುದರೊಂದಿಗೆ ಕನ್ನಡ ಕಂಪನ್ನು ಹರಡಿಸೋಣ. ನೆಲ. ಜಲದ ಉಳಿವಿಗಾಗಿ, ನಾಡಿನ ಏಳಿಗೆಗಾಗಿ ನಾವೆಲ್ಲರೂ ಒಂದಾಗಿ ದುಡಿಯೋಣ.
WhatsApp Group Join Now
Telegram Group Join Now
Share This Article