ಜವಾಬ್ದಾರಿಯುತ ಕೆಲಸ ಮಾಡಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

Ravi Talawar
ಜವಾಬ್ದಾರಿಯುತ ಕೆಲಸ ಮಾಡಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ
WhatsApp Group Join Now
Telegram Group Join Now
 **
* *ಸುದೀರ್ಘವಾಗಿ ತ್ರೈಮಾಸಿಕ ಕೆ.ಡಿ.ಪಿ ಸಭೆ ನಡೆಸಿದ ಸಚಿವರು*
 *ಉಡುಪಿ:* ಸರ್ಕಾರದ ಯೋಜನೆಗಳು ಜನ ಸಾಮಾನ್ಯರಿಗೆ ತಲುಪಬೇಕೆಂದರೆ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ಆಗಷ್ಟೇ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಜಿಲ್ಲಾ ಪಂಚಾಯತ್ ಆವರಣದಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಸಚಿವರು, ಅಧಿಕಾರಿಗಳು ಬದ್ಧತೆಯಿಂದ ರೈತರ ಸಮಸ್ಯೆಗಳನ್ನು ಬಗೆಹರಿಸಲು ಸೂಚನೆ ನೀಡಿದರು.
ಅತಿವೃಷ್ಟಿಯಿಂದ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಲು ತಯಾರಿ ಮಾಡಲಾಗುತ್ತದೆ. ಇದಕ್ಕೆ ರಾಜ್ಯ ಸರ್ಕಾರ 8000 ಕೋಟಿ ರೂಪಾಯಿ ಅನುದಾನವನ್ನು ನೀಡುತ್ತಿದೆ‌. ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಪರಿಹಾರ ನೀಡಲು ತೀರ್ಮಾನಿಸಲಾಗಿದೆ ಎಂದರು.
ವಾರಾಹಿ ನೀರಾವರಿ ಯೋಜನೆಗೆ ರೈತರ ಜಮೀನನ್ನು ಸ್ವಾಧೀನಪಡಿಸಿಕೊಂಡಿದ್ದು, ಈವರೆಗೂ ರೈತರಿಗೆ ಸರ್ಕಾರದಿಂದ ಪರಿಹಾರ ನೀಡಿರುವುದಿಲ್ಲ, ಈ ಕುರಿತು ಸರ್ಕಾರದಿಂದ ಹಣ ಬಿಡುಗಡೆಗೊಳಿಸಲು ಪ್ರಯತ್ನಿಸಲಾಗುವುದು. ಈ ಯೋಜನೆಯಲ್ಲಿ ಕೆಲವು ಜಮೀನುಗಳು ಡೀಮ್ಡ್ ಫಾರೆಸ್ಟ್ ಹಾಗೂ ಮೀಸಲು ಅರಣ್ಯ ಪ್ರದೇಶದಲ್ಲಿ ಹಾದು ಹೋಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅನುಮತಿ  ನೀಡುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಸಾರ್ವಜನಿಕರು ವಾಸದ ಮನೆ ಅಥವಾ ಕಟ್ಟಡ ಕಟ್ಟಲು ಬೇಡಿಕೆ ಇರುವ ಕೆಂಪು ಕಲ್ಲು ಗಣಿಗಾರಿಕೆಗೆ ಪಟ್ಟಾ ಲ್ಯಾಂಡ್ ನಲ್ಲಿ 3A ನಲ್ಲಿ ಅನುಮತಿ ನೀಡಿದರೂ‌ ಸಹ ಅರಣ್ಯ ಇಲಾಖೆಯಿಂದ ಆಕ್ಷೇಪಣೆ ಮಾಡುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಶೀಘ್ರದಲ್ಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ಕೊಟ್ಟು ಕ್ರಮ ವಹಿಸಬೇಕು ಎಂದ ಸಚಿವರು, ಇದಕ್ಕಾಗಿ  ಮೂರು ದಿನಗಳ ಗಡುವು ನೀಡಿದರು.
ಪ್ರಧಾನ ಮಂತ್ರಿ ಸಿಂಚಾಯಿ ಯೋಜನೆಯಡಿ ಸಣ್ಣ ಪ್ರಮಾಣದ ಚೆಕ್ ಡ್ಯಾಂಗಳನ್ನು ನಿರ್ಮಾಣ  ಕೈಗೆತ್ತಿಕೊಳ್ಳಲಾಗಿದ್ದು,  ಈ ಚೆಕ್ ಡ್ಯಾಂಗಳಲ್ಲಿ ನೀರು ನಿಲ್ಲದ ಸ್ಥಿತಿಯಿದೆ. ಈ ಚೆಕ್ ಡ್ಯಾಂಗಳ ನಿರ್ಮಾಣಕ್ಕೆ ನಕ್ಷೆ ಅವೈಜ್ಞಾನಿಕವಾಗಿದ್ದು, ಅನುದಾನದ ಬಳಕೆಯೂ‌ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ, ಎಂಬ ದೂರುಗಳು ಕೇಳಿ ಬರುತ್ತಿವೆ, ಈ ಬಗ್ಗೆ ಜಿಪಂ‌ ಸಿಇಒ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಕೈಗೊಂಡಿರುವ ಬಂದರು ಅಭಿವೃದ್ಧಿ ಕಾಮಗಾರಿಗಳನ್ನು ಆದ್ಯತೆಯ ಮೇಲೆ ನಿಗದಿತ ಅವಧಿಯಲ್ಲಿ ಪೂರ್ಣ ಗೊಳಿಸಬೇಕು. ಕೆಲವು ನಿರ್ಮಾಣ ಕಾರ್ಯಗಳಿಗೆ ಸಿಆರ್ ಝಡ್ ನ ಅನುಮತಿಯ ಅಗತ್ಯವಿದೆ, ಅದನ್ನು ಪಡೆಯಲು ಅನುಕೂಲ ಆಗುವಂತೆ ರಾಜ್ಯ ಮಟ್ಟದ CRZ ಕಮಿಟಿ ರಚಿಸಬೇಕಿದ್ದು, ಈಗಾಗಲೇ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದಿದೆ, ಸಮಿತಿಯನ್ನು ತ್ವರಿತವಾಗಿ ರಚಿಸುವಂತೆ ನೋಡಿಕೊಳ್ಳಬೇಕು ಎಂದರು.‌
ಜಿಲ್ಲೆಯಲ್ಲಿ ಕಡಲ ಕೊರೆತ ಉಂಟಾಗುತ್ತಿದ್ದು, ಇದನ್ನು ಗಂಭೀರವಾಗಿ ತೆಗೆದುಕೊಂಡು ವೈಜ್ಞಾನಿಕವಾಗಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
* *ಸೂಕ್ತವಾಗಿ ಹಾಸ್ಟೆಲ್ ನಿರ್ವಹಣೆಗೆ ಕ್ರಮ*
ಜಿಲ್ಲೆಗೆ ವಿದ್ಯಾಭ್ಯಾಸಕ್ಕೆ ಹೊರ ಜಿಲ್ಲೆಗಳಿಂದ ಅದರಲ್ಲೂ ಉತ್ತರ ಕರ್ನಾಟಕದಿಂದ ವಿದ್ಯಾರ್ಥಿಗಳು ಬರುತ್ತಿದ್ದಾರೆ, ಶಾಲಾ ದಾಖಲಾತಿ ಒಂದು ತಿಂಗಳಾದರೂ ಹಾಸ್ಟೆಲ್ ಸೌಲಭ್ಯ ಸಿಗದೆ ತೊಂದರೆ ಉಂಟಾಗುತ್ತಿದೆ. ಈ‌ ಬಗ್ಗೆ ಕ್ರಮ ವಹಿಸಿ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು. ತಾಲೂಕು ಕೇಂದ್ರಗಳಲ್ಲಿ ಸೂಕ್ತವಾಗಿ ಹಾಸ್ಟೆಲ್ ನಿರ್ವಹಣೆ ಮಾಡಬೇಕು ಎಂದರು.
* *ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಪ್ರಮಾಣ ಹೆಚ್ಚಿಸಲು ಕ್ರಮ*
ಸರ್ಕಾರ ಜನ ಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ನೀಡಬೇಕು, ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಉತ್ತಮ ಸೇವೆಯನ್ನು ನೀಡಬೇಕು, ಹೆರಿಗೆ ತಜ್ಞರ ಕೊರತೆಯಿಂದ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಪ್ರಮಾಣವು ಕಡಿಮೆ ಆಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಪ್ರಮಾಣ ಹೆಚ್ಚಿಸುವಂತೆ ಸಚಿವರು ಆದೇಶಿಸಿದರು.
ಈ ವೇಳೆ ಶಾಸಕರಾದ ಸುನೀಲ್ ಕುಮಾರ್, ಯಶ್ ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ,‌ ಗುರುರಾಜ್ ಗಂಟಿಹೊಳೆ, ಕಿರಣ್ ಕುಮಾರ್ ಕೊಡ್ಗಿ, ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್. ಭೋಜೇಗೌಡ, ಮಂಜುನಾಥ್ ಭಂಡಾರಿ, ಡಾ.ಧನಂಜಯ್ ಸರ್ಜಿ, ಜಿಲ್ಲಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾಧಿಕಾರಿ ‌ಟಿ.ಕೆ.ಸ್ವರೂಪ, ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್, ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article