ನವದೆಹಲಿ, ಅಕ್ಟೋಬರ್ 31: ಭಾರತದ ಸ್ವಾತಂತ್ರ್ಯಾ ನಂತರ 1984ರಲ್ಲಿ ನಡೆದ ಸಿಂಗ್ ವಿರೋಧಿ ಗಲಭೆ ಭಾರತದ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ಉಳಿದುಬಿಟ್ಟಿದೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ. ಆಗಿನ ಪ್ರಧಾನಿ ಇಂದಿರಾ ಗಾಂಧಿಯ ಹತ್ಯೆಯ ನಂತರ ಮುಗ್ದ ಸಿಖ್ ಕುಟುಂಬಗಳನ್ನು ಗುರಿಯಾಗಿಸಿಕೊಂಡ ಗುಂಪುಗಳನ್ನು ಕಾಂಗ್ರೆಸ್ ರಕ್ಷಿಸಿತ್ತು ಎಂದು ಆರೋಪಿಸಿದ್ದಾರೆ.
ಎಕ್ಸ್ನಲ್ಲಿ ವಿವರವಾದ ಪೋಸ್ಟ್ ಬರೆದಿದ್ದು, ದೆಹಲಿ ಮತ್ತು ಭಾರತದ ಇತರ ಭಾಗಗಳಲ್ಲಿ ಸಾವಿರಾರು ಸಿಖ್ಖರ ಸಾವಿಗೆ ಕಾರಣವಾದ ಹಿಂಸಾಚಾರವನ್ನು ನೆನಪಿಸಿಕೊಳ್ಳುವಾಗ ನನಗೆ ಈಗಲೂ ನಡುಕ ಹುಟ್ಟುತ್ತೆ ಎಂದರು.
ಅಸಹಾಯಕ ಮತ್ತು ಮುಗ್ಧ ಸಿಖ್ ಪುರುಷರು, ಮಹಿಳೆಯರು ಮತ್ತು ಮಕ್ಕಳನ್ನು ಹತ್ಯೆ ಮಾಡಲಾಯಿತು. ಅವರ ಮನೆಗಳು ಮತ್ತು ಪೂಜಾ ಸ್ಥಳಗಳನ್ನು ಕಾಂಗ್ರೆಸ್ ನಾಯಕರು ಮಾರ್ಗದರ್ಶನದಲ್ಲಿ ಹುಟ್ಟಿಕೊಂಡ ಗುಂಪುಗಳು ದೋಚಿದವು ಎಂದು ಅವರು ಬರೆದಿದ್ದಾರೆ.
ರಾಜ್ಯ ಆಡಳಿತವು ಉದ್ದೇಶಪೂರ್ವಕವಾಗಿಯೇ ಮೌನವಾಗಿತ್ತು ಎಂದು ಪುರಿ ಆರೋಪಿಸಿದರು, ಗುಂಪುಗಳು ಸಿಖ್ಖರ ಮನೆಗಳು ಮತ್ತು ಗುರುದ್ವಾರಗಳನ್ನು ಲೂಟಿ ಮಾಡಿ ಸುಟ್ಟುಹಾಕಿದಾಗ ಪೊಲೀಸರು ಮೂಕ ಪ್ರೇಕ್ಷಕರಂತೆ ನಿಂತರು ಎಂದು ಹೇಳಿದರು.

 
		 
		 
		
