ಕಬ್ಬಿಗೆ ಎಫ್.ಆರ್.ಪಿ ದರ ಘೋಷಿಸುವಂತೆ ಆಗ್ರಹ: ಜಂಟಿ ಸಭೆ ಕರೆಯಲು ಜಿಲ್ಲಾಧಿಕಾರಿಗೆ ಒತ್ತಾಯ

Pratibha Boi
WhatsApp Group Join Now
Telegram Group Join Now
ಮುದ್ದೇಬಿಹಾಳ: ತಾಲೂಕಿನ ಯರಗಲ್ಲ ಗ್ರಾಮದ ಹತ್ತಿರ ಇರುವ ಶ್ರೀ ಬಾಲಾಜಿ ಸಕ್ಕರೆ ಕಾರ್ಖಾನೆಯವರು ರೈತರೊಂದಿಗೆ ಸಭೆ ನಡೆಸದೆ ಏಕಪಕ್ಷೀಯವಾಗಿ ಕಬ್ಬಿಗೆ ಎಫ್.ಆರ್.ಪಿ ದರ ಟನ್ನಿಗೆ ರೂ.3770 (ಕಟಾವು, ಸರಬರಾಜು ಬೆಲೆ ತೆಗೆದು 2901 ರೂ) ನಿಗದಿಪಡಿದ್ದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಹಾಗೂ ಜೆಡಿಎಸ್ ಮುಖಂಡರು ಗುರುವಾರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ರಸ್ತೆ ತಡೆದು ಪ್ರತಿಭಟಿಸಿದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಗಣ್ಣ ಬಾಗೇವಾಡಿ ಸೇರಿ ಕೆಲ ರೈತರು ರಸ್ತೆಯಲ್ಲೇ ಮಲಗಿ ಪ್ರತಿಭಟಿಸಿದ್ದು ತೀವ್ರ ಸ್ವರೂಪ ಪಡೆದುಕೊಳ್ಳತೊಡಗಿದ್ದನ್ನು ಅರಿತು ಪೊಲೀಸರು ಬಾಗೇವಾಡಿ ಮತ್ತು ಇನ್ನಿತರ ಕೆಲ ರೈತರನ್ನು ಬಲವಂತವಾಗಿ ಸ್ಥಳದಿಂದ ಕರೆದೊಯ್ದರು.
ಈ ಸಂದರ್ಭ ಮಾತನಾಡಿದ ಜೆಡಿಎಸ್ ಮುಖಂಡ, ರೈತ ಸಂಘದ ಕಾರ್ಯಾಧ್ಯಕ್ಷ ಬಸನಗೌಡ ಪಾಟೀಲ ಹಿರೇಮುರಾಳ ಅವರು ಕಾರ್ಖಾನೆಯವರು ರೈತರೊಂದಿಗೆ ಚರ್ಚಿಸಿ ದರ ನಿಗದಿಪಡಿಸದೆ ಕಾರ್ಖಾನೆಯಲ್ಲಿ ಕಬ್ಬು ನುರಿಸುವ ಕಾರ್ಯ ಪ್ರಾರಂಭಿಸಿದ್ದಾರೆ. ಬಾಲಾಜಿ ಸಕ್ಕರೆ ಕಾರ್ಖಾನೆಯಿಂದ 40 ಕಿಮಿ ದೂರದಲ್ಲಿರುವ ನಾಯನೆಗಲಿ ಸಕ್ಕರೆ ಕಾರ್ಖಾನೆಯವರು ಎಫ್.ಆರ್.ಪಿ. ದರ ಟನ್ನಿಗೆ 4111 ರೂ( ಕಟಾವು, ಸರಬರಾಜು ಬೆಲೆ ತೆಗೆದು 3211 ರೂ) ನಿಗದಿಪಡಿದ್ದಾರೆ. ಬಾಲಾಜಿ ಕಾರ್ಖಾನೆಯವರಿಂದ ಟನ್ನಿಗೆ 340 ರೂಗಳಂತೆ ರೈತರಿಗೆ ಹಾನಿ ಆಗುತ್ತಿದೆ. ಈಗಾಗಲೇ ರೈತರು ಅತಿವೃಷ್ಠಿಯಿಂದ ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಸಾಗಾಣಿಕೆ ವೆಚ್ಚ, ಕಟಾವು ವೆಚ್ಚ ತೆಗೆದು ಟನ್ನಿಗೆ 3500 ರೂ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಗಣ್ಣ ಬಾಗೇವಾಡಿ ಅವರು ಮಾತನಾಡಿ ಈಗಾಗಲೇ ಬೆಳೆ ಹಾನಿ ಅನುಭವಿಸಿರುವ ರೈತರಿಗೆ ಇದುವರೆಗೂ ಸರ್ಕಾರ ಬೆಳೆ ಹಾನಿಯನ್ನೇ ವಿತರಿಸಿಲ್ಲ. ಇಂಥದ್ದರಲ್ಲಿ ಕಬ್ಬು ಬೆಳೆದ ರೈತರಿಗೂ ಸಕ್ಕರೆ ಕಾರ್ಖಾನೆಗಳವರು ಅನ್ಯಾಯ ಮಾಡುತ್ತಿದ್ದಾರೆ. ಇದನ್ನು ತಡೆಯದಿದ್ದರೆ ಹೋರಾಟ ಇನ್ನಷ್ಟು ತೀವ್ತಗೊಳಿಸುವುದಾಗಿ ತಿಳಿಸಿದರು.
ಪ್ರತಿಭಟನೆ ಕಾವು ಪಡೆದಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ರೈತರನ್ನು ಸ್ಥಳದಿಂದ ಚದುರಿಸಿ ಸಂಚಾರ ಸುಗಮಗೊಳಿಸಲು ಮುಂದಾದರು. ಈ ವೇಳೆ ರೈತ ಮುಖಂಡರು, ಪೊಲೀಸರ ನಡುವೆ ಜಟಾಪಟಿ ನಡೆಯಿತು. ಕಾರ್ಖಾನೆಯವರನ್ನು ಸ್ಥಳಕ್ಕೆ ಕರೆಸಿ ಮಾತುಕತೆ ನಡೆಸಿ ರೈತರಿಗೆ ನೈಜ ಎಫ್.ಆರ್.ಪಿ ನಿಗದಿಪಡಿಸಿದ್ದರ ಕುರಿತು ಭರವಸೆ ನೀಡಿದರೆ ಮಾತ್ರ ಪ್ರತಿಭಟನೆ ಕೈಬಿಡುವುದಾಗಿ ಪಟ್ಟು ಹಿಡಿದದ್ದು ಪರಿಸ್ಥಿತಿ ತೀವ್ರಗೊಳ್ಳಲು ಕಾರಣವಾಯಿತು.
ವಿಷಯ ತಿಳಿದು ತಹಶೀಲ್ದಾರ್ ಕೀರ್ತಿ ಚಾಲಕ್ ಅವರು ಸ್ಥಳಕ್ಕೆ ಆಗಮಿಸಿ ರೈತ ಮುಖಂಡರ ಮನವೊಲಿಸಲು ಸಾಕಷ್ಟು ಹೆಣಗಿದರು. ಸಿಪಿಐ ಮೆಹಮ್ಮೂದ್ ಫಸಿಯುದ್ದೀನ್, ಪಿಎಸೈ ಸಂಜಯ್ ತಿಪ್ಪರಡ್ಡಿ ಅವರು ರೈತರನ್ನು ರಸ್ತೆ ತಡೆ ನಡೆಸದಂತೆ ನಿಗ್ರಹಿಸಲು ಸಾಕಷ್ಟು ಯತ್ನಿಸಿದರಾದರೂ ರೈತರು ಮಣಿಯಲಿಲ್ಲ.
ಈ ಸಂದರ್ಭ ಪ್ರಗತಿಪರ ರೈತ ಅರವಿಂದ ಕೊಪ್ಪ ಅವರು ಮಾತನಾಡಿ, ಸ್ಥಳಕ್ಕೆ ತಹಶೀಲ್ದಾರ್ ಭೇಟಿ ಕೊಟ್ಟಾಗ ರೈತರ ಬೇಡಿಕೆಯನ್ನು ಅವರ ಮುಂದೆ ಇಡಲಾಗಿದೆ. ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಜಂಟಿ ಸಭೆ ನಡೆಸಬೇಕು. ಸಕ್ಕರೆ ಕಾರ್ಖಾನೆಯವರು ನಮ್ಮ ಬೇಡಿಕೆಗೆ ಸ್ಪಂಧಿಸುತ್ತಾರೋ ಇಲ್ಲವೋ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಇದಕ್ಕಾಗಿ ಒಂದು ವಾರ ಕಾಲಾವಕಾಶ ಕೊಟ್ಟು ಸಧ್ಯಕ್ಕೆ ಹೋರಾಟ ಕೈಬಿಟ್ಟಿದ್ದೇವೆ. ಒಂದು ವಾರದೊಳಗೆ ಬೇಡಿಕೆಗೆ ಸ್ಪಂಧನೆ ದೊರಕದಿದ್ದರೆ ಇದಕ್ಕಿಂತ ಹೆಚ್ಚು ತೀವ್ರವಾದ ಹೋರಾಟವನ್ನು ರೈತರು ಹಮ್ಮಿಕೊಳ್ಳಬೇಕಾಗುತ್ತದೆ ಎಂದರು.
ಮುಖಂಡರಾದ ಗುರುಸಂಗಪ್ಪಗೌಡ ಹಂಡರಗಲ್ಲ, ವೈ.ಎಲ್.ಬಿರಾದಾರ, ಅಯ್ಯಪ್ಪ ಬಿದರಕುಂದಿ, ಮಹಾಂತಗೌಡ ಪಾಟೀಲ, ಬಸನಗೌಡ ಬ್ಯಾಲ್ಯಾಳ, ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ ರೈತರು ಪಾಲ್ಗೊಂಡಿದ್ದರು.
*ಜಿಲ್ಲಾಧಿಕಾರಿ ಜೊತೆ ಚರ್ಚೆ:
ಇದೇ ವಿಷಯವಾಗಿ ರೈತರು ಮುಖಂಡ ಬಸನಗೌಡ ಪಾಟೀಲ ಹಿರೇಮುರಾಳ ಅವರ ನೇತೃತ್ವದಲ್ಲಿ ವಿಜಯಪುರದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಡಾ|ಆನಂದ ಅವರನ್ನು ಭೇಟಿ ಮಾಡಿ ಸಕ್ಕರೆ ಕಾರ್ಖಾನೆಯ ಬಗ್ಗೆ ದೂರು ಸಲ್ಲಿಸಿದರು. ರೈತರಿಗೆ ಅನ್ಯಾಯವಾಗುತ್ತಿದ್ದು ಕೂಡಲೇ ಇದನ್ನು ತಡೆಯುವಂತೆ ಆಗ್ರಹಿಸಿದರು. ನ್ಯಾಯಯುತವಾದ ಎಫ್.ಆರ್.ಪಿ.ದರ ನಿಗದಿಪಡಿಸುವ ಮೂಲಕ ಈಗಾಗಲೇ ತೊಂದರೆಯಲ್ಲಿರುವ ರೈತರನ್ನು ಕಾಪಾಡುವಂತೆ ಮತ್ತು ಕಾರ್ಖಾನೆಯವರನ್ನು ಕರೆಸಿ ಜಂಟಿ ಸಭೆ ನಡೆಸುವ ಮೂಲಕ ಎಫ್.ಆರ್.ಪಿ.ದರದ ಬಗ್ಗೆ ಸ್ಪಷ್ಟ ಭರವಸೆಯನ್ನು ರೈತರಿಗೆ ಕೊಡಿಸುವಂತೆ ಆಗ್ರಹಿಸಿದರು.
WhatsApp Group Join Now
Telegram Group Join Now
Share This Article