ಬದುಕಿನ ಮೌಲ್ಯಗಳನ್ನು ತಮ್ಮ ಸಾಹಿತ್ಯದ ಮೂಲಕ ಗಾಢವಾಗಿ ತೋರಿಸಿಕೊಟ್ಟವರು ಬೇಂದ್ರೆ: ಡಾ. ಮಲ್ಲಿಕಾ ಘಂಟಿ

Ravi Talawar
ಬದುಕಿನ ಮೌಲ್ಯಗಳನ್ನು ತಮ್ಮ ಸಾಹಿತ್ಯದ ಮೂಲಕ ಗಾಢವಾಗಿ ತೋರಿಸಿಕೊಟ್ಟವರು ಬೇಂದ್ರೆ: ಡಾ. ಮಲ್ಲಿಕಾ ಘಂಟಿ
WhatsApp Group Join Now
Telegram Group Join Now
ಧಾರವಾಡ :  ಒಬ್ಬ ಕವಿ ಕಾಲಾನಂತರದಲ್ಲಿಯೂ ಇಂದಿನ ಯುವಕರು ಕಥೆ, ಕಾವ್ಯವನ್ನು ಕಟ್ಟುವಂತಹ ರೀತಿಯಲ್ಲಿ ಬದುಕಿದ್ದರು. ಆ ಎಲ್ಲ ಪ್ರಸಂಗಗಳು ಮಾನವೀಯ ನೆಲೆಯೊಳಗೆ ಇರುವಂತಹವುಗಳು ಮತ್ತು ಬದುಕಿನ ಮೌಲ್ಯಗಳನ್ನು ಬಹಳಷ್ಟು ಗಾಢವಾಗಿ ತಮ್ಮ ಸಾಹಿತ್ಯದ ಮೂಲಕ ತೋರಿಸಿಕೊಟ್ಟವರು ಬೇಂದ್ರೆಯವರು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿ ಅವರು ಹೇಳಿದರು.
  ಧಾರವಾಡ ಡಾ.ದ.ರಾ.ಬೇಂದ್ರೆ ಭವನದಲ್ಲಿ ಧಾರವಾಡ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‍ದಿಂದ ವರಕವಿ ಡಾ.ದ.ರಾ.ಬೇಂದ್ರೆ ಅವರ 44 ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ  ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಬೇಂದ್ರೆಯವರು ಮತ್ತು ಬಸವರಾಜ ಕಟ್ಟೀಮನಿಯವರ ಒಡನಾಟವನ್ನು ಸ್ಮರಿಸುತ್ತ ಬೇಂದ್ರೆಯವರ ಸಾಹಿತ್ಯವನ್ನು ಸ್ಪರ್ಶಿಸುವುದು, ಅವರ ಕಾವ್ಯವನ್ನು ಪ್ರವೇಶಿಸುವುದು ಸಾಮಾನ್ಯವಾದುದಲ್ಲ ಎಂದು ಹೇಳಿದರು.
 ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಧಾರವಾಡ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ.ಶುಭ ಅವರು ಮಾತನಾಡಿ, ಬೇಂದ್ರೆಯವರು ಅಜ್ಜಿ ಗೋಧುಬಾಯಿ, ತಾಯಿ ಅಂಬವ್ವ ಅವರಿಂದ ಬಹಳಷ್ಟು ಪ್ರಭಾವಿತರಾಗಿದ್ದರು. ಹೆಂಡತಿಯನ್ನು ಸಖೀಯನ್ನಾಗಿ ನೋಡಿದವರು. ತಾಯಿ ಹೆಸರನ್ನೊಳಗೊಂಡು ತಮ್ಮ ಕಾವ್ಯನಾಮವನ್ನು ಅಂಬಿಕಾತನಯದತ್ತ ಎಂದು ಇಟ್ಟಿರುವುದು ಅವರ ಸ್ತ್ರೀಪರ ವಿಶೇಷ ನೋಟವನ್ನು ಗಮನಿಸಬಹುದಾಗಿದೆ. ಇಂದಿನ ಮಕ್ಕಳಿಗೆ ಬೇಂದ್ರೆಯವರ ಕಾವ್ಯದ ಸೊಗಡನ್ನು ಅರ್ಥೈಸಬೇಕಿದೆ ಎಂದರು.
      ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಡಾ. ಸರಜೂ ಕಾಟ್ಕರ್ ಅವರು ಮಾತನಾಡಿ, 44 ವರ್ಷಗಳ ಹಿಂದೆ ದೀಪಾವಳಿಯ ನರಕ ಚತುದರ್ಶಿಯಂದೇ ದ.ರಾ.ಬೇಂದ್ರೆಯವರು ಅಸ್ತಂಗತರಾಗಿದ್ದು, ಇಡೀ ಕನ್ನಡ ಸಾರಸ್ವತ ಲೋಕಕ್ಕೆ ಕತ್ತಲೆ ಆವರಿಸಿದಂತಾಗಿತ್ತು. 44 ವರ್ಷಗಳು ಗತಿಸಿದರೂ ಸಹ ಅವರು ತಮ್ಮ ಸಾಹಿತ್ಯದ ಮೂಲಕ ಓದುಗರ ಜನಮಾನಸದಲ್ಲಿ ಹಾಸುಹೊಕ್ಕಾಗಿದ್ದಾರೆ. ಬೇಂದ್ರೆಯವರ ಕಾವ್ಯವು ನವನವೀನವಾದ ಕಾವ್ಯಗಳಾಗಿವೆ. ಅವುಗಳನ್ನು ಎಷ್ಟು ಸಲ ಓದುತ್ತೇವೆಯೋ ಅಷ್ಟು ಹೊಸ ಹೊಸ ಅರ್ಥಗಳನ್ನು ನೀಡುತ್ತವೆ. ಬೇಂದ್ರೆಯವರಿಗೆ ಕರ್ನಾಟಕ ಸರ್ಕಾರವು ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡುವುದರ ಜೊತೆಗೆ ಅವರ ಜನ್ಮದಿನ ಜನೆವರಿ 31 ನ್ನು ಕವಿದಿನ ಎಂದು ಘೋಷಣೆ ಮಾಡಬೇಕೆಂದು ಆಗ್ರಹಿಸಿದರು.
ಧಾರವಾಡದ ಗಾಯಕಿ ವಿದುಷಿ ರಾಧಾ ದೇಸಾಯಿ ಮತ್ತು ವೃಂದದವರು. ಡಾ.ದ.ರಾ.ಬೇಂದ್ರೆಯವರ ಗೀತೆಗಳ ಗಾಯನ ಪ್ರಸ್ತುತ ಪಡಿಸಿದರು.  ಅಪೂರ್ವಾ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು.
ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿ, ಸದಸ್ಯರಾದ ಡಾ.ಶಿಲಾಧರ ಮುಗಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಡಾ.ಅಶೋಕ ಶೆಟ್ಟರ, ಡಾ. ಶರಣಮ್ಮ ಗೊರೇಬಾಳ, ಇಮಾಮಸಾಬ್ ವಲ್ಲೆಪ್ಪನವರ, ಪ್ರಭು ಕುಂದರಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article