ದೇವನಹಳ್ಳಿ, ಅಕ್ಟೋಬರ್ 30: ಆಂಧ್ರ ಪ್ರದೇಶದ ಕರ್ನೂಲ್ ಬಸ್ ದುರಂತದ ಬೆನ್ನಲ್ಲೇ ಕರ್ನಾಟಕ ಸಾರಿಗೆ ಇಲಾಖೆ ಎಚ್ಚೆತ್ತುಕೊಂಡು ಬಸ್ಗಳಲ್ಲಿ ಸುರಕ್ಷತಾ ಕ್ರಮಗಳ ಬಗ್ಗೆ ಸಾರಿಗೆ ನಿಗಮಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಇದೀಗ ಆರ್ಟಿಒ ಅಧಿಕಾರಿಗಳು ದೇವನಹಳ್ಳಿಯ ಏರ್ಪೋರ್ಟ್ ಟೋಲ್ ಬಳಿ ಕಾರ್ಯಾಚರಣೆ ನಡೆಸಿದ್ದು, ಸುರಕ್ಷತಾ ಕ್ರಮಗಳನ್ನು ಪಾಲಿಸದ ಹಾಗೂ ಸಾಮರ್ಥ್ಯಕ್ಕಿಂತ ಹೆಚ್ಚು ಪ್ರಯಾಣಿಕರನ್ನು ತುಂಬಿಕೊಂಡು ಬಂದಿದ್ದ 40ಕ್ಕೂ ಹೆಚ್ಚು ಬಸ್‌ಗಳನ್ನು ಸೀಜ್ ಮಾಡಿದ್ದಾರೆ. ನಿರ್ದಿಷ್ಟವಾಗಿ, ನೇಪಾಳದಿಂದ ಜನರನ್ನು ಕರೆದುಕೊಂಡು ಬೆಂಗಳೂರಿಗೆ ಬರುತ್ತಿದ್ದ ಉತ್ತರ ಭಾರತದ ಸ್ಲೀಪರ್ ಕೋಚ್ ಬಸ್ ಒಂದನ್ನು ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. 40-50 ಜನರ ಸಾಮರ್ಥ್ಯವಿರುವ ಈ ಬಸ್‌ನಲ್ಲಿ 100ಕ್ಕೂ ಅಧಿಕ ಪ್ರಯಾಣಿಕರನ್ನು ತುಂಬಿಕೊಂಡು ಬಂದಿರುವುದು ಕಾಣಿಸಿದೆ. ಮಹಿಳೆಯರು ಮತ್ತು ಮಕ್ಕಳೂ ಸೇರಿದಂತೆ ಪ್ರಯಾಣಿಕರನ್ನು ‘ಕುರಿಗಳ ಮಂದೆ’ಯಂತೆ ತುಂಬಿಕೊಂಡು ಬರಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಸ್ ಅನ್ನು ಸೀಜ್ ಮಾಡಿದ ಅಧಿಕಾರಿಗಳು, ಈಗಾಗಲೇ ಇಂತಹ ಐದು ಬಸ್‌ಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಒಟ್ಟಾರೆಯಾಗಿ ಸುಮಾರು 41 ಬಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.


