ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಶಕ್ತಿಶಾಲಿ LVM3 ರಾಕೆಟ್ ಮೂಲಕ CMS-03 ಸಂವಹನ ಉಪಗ್ರಹವನ್ನು ನವೆಂಬರ್ 2ರಂದು ಉಡ್ಡಯನ ಮಾಡಲಿದೆ. ಇದು LVM3ನ ಐದನೇ ಕಾರ್ಯಾಚರಣಾ ಹಾರಾಟ (LVM3-M5)ವಾಗಿರಲಿದೆ. CMS-03 ಇಲ್ಲಿಯವರೆಗಿನ ದೇಶದ ಅತ್ಯಂತ ಭಾರವಾದ ಸಂವಹನ ಉಪಗ್ರಹವಾಗಿದ್ದು, ಸುಮಾರು 4,400 ಕಿಲೋಗ್ರಾಂಗಳಷ್ಟು ತೂಗುತ್ತದೆ.
ಈ ಉಪಗ್ರಹವು ಸಾಗರ ಪ್ರದೇಶಗಳು ಮತ್ತು ಭಾರತೀಯ ಭೂಪ್ರದೇಶಗಳಿಗೆ ಸಂವಹನ ಸೇವೆಗಳನ್ನು ಒದಗಿಸುತ್ತದೆ. ಹಿಂದಿನ LVM3 ಮಿಷನ್ ಚಂದ್ರಯಾನ-3 ಅನ್ನು ಚಂದ್ರನಿಗೆ ಕಳುಹಿಸಿತ್ತು. ಚಂದ್ರನ ದಕ್ಷಿಣ ಧ್ರುವದ ಬಳಿ ಯಶಸ್ವಿಯಾಗಿ ಇಳಿಸಲಾಗಿತ್ತು.
LVM3 (ಲಾಂಚ್ ವೆಹಿಕಲ್ ಮಾರ್ಕ್-3) ಇಸ್ರೋದ ಅತ್ಯಂತ ಶಕ್ತಿಶಾಲಿ ರಾಕೆಟ್ ಆಗಿದ್ದು, ‘ಬಾಹುಬಲಿ’ ಎಂದೂ ಕರೆಯುತ್ತಾರೆ. ಇದು ಮೂರು ಹಂತದ ಮಧ್ಯಮ-ಭಾರೀ ಲಿಫ್ಟ್ ರಾಕೆಟ್ ಆಗಿದ್ದು, ಭಾರವಾದ ಉಪಗ್ರಹಗಳನ್ನು ಎಲಿಪ್ಟಿಕಲ್ ಜಿಯೋಸಿಂಕ್ರೋನಸ್ ಟ್ರಾನ್ಸ್ಫರ್ ಆರ್ಬಿಟ್ (GTO)ಗೆ ಉಡಾಯಿಸುವ ಸಾಮರ್ಥ್ಯ ಹೊಂದಿದೆ.


