ಯುವಜನರು ದೇಶದ ಸಂಪತ್ತು: ಕೆ.ಇ ಚಿದಾನಂದಪ್ಪ

Ravi Talawar
ಯುವಜನರು ದೇಶದ ಸಂಪತ್ತು: ಕೆ.ಇ ಚಿದಾನಂದಪ್ಪ
WhatsApp Group Join Now
Telegram Group Join Now

ಬಳ್ಳಾರಿಯಲ್ಲಿ ಸಂಭ್ರಮದ ಯುವಜನೋತ್ಸವ ಕಾರ್ಯಕ್ರಮ

ಬಳ್ಳಾರಿ,ಅ.28.ಯುವಜನರು ದೇಶದ ಸಂಪತ್ತು. ಯುವಪೀಳಿಗೆ ಸದಾ  ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿರಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ ಚಿದಾನಂದಪ್ಪ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲೆಯ ಸಮಸ್ತ ಸಂಘ ಸಂಸ್ಥೆಗಳ ಇವರ ಸಹಯೋಗದಲ್ಲಿ ನಗರದ ಜಿಲ್ಲಾ ಕ್ರೀಡಾಂಗಣ ರಸ್ತೆಯ ಡಾ.ಜೋಳದರಾಶಿ ದೊಡ್ಡನಗೌಡ ರಂಗಮAದಿರದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವಜನೋತ್ಸವ-2025-26 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಯುವಕ-ಯುವತಿಯರಲ್ಲಿ ವಿಭಿನ್ನ ಹಾಗೂ ವಿಶಿಷ್ಟವಾದ ಪ್ರತಿಭೆಯನ್ನು ಹೊಂದಿರುತ್ತಾರೆ. ಸಂಕಲ್ಪ ಇಟ್ಟುಕೊಂಡು ಗುರಿ ತಲುಪಿದರೆ, ಯಶಸ್ಸು ನಿಮ್ಮದಾಗುತ್ತದೆ. ವಿದ್ಯಾಭ್ಯಾಸದ ಜೊತೆಗೆ ಅನೇಕ ರಂಗಗಳಲ್ಲಿ ಯುವಕರು ತಮ್ಮನ್ನು ತಾವು ತೊಡಗಿಸಿಕೊಂಡು ಮುನ್ನಡೆಯಬೇಕು ಎಂದು ಕಿವಿಮಾತು ಹೇಳಿದರು.
ಕುಟುಂಬ ಹಿನ್ನಲೆಯಲ್ಲಿ ಅನೇಕ ಸಮಸ್ಯೆಗಳಿದ್ದರೂ, ಯುವಜನ ತಮ್ಮ ಗುರಿಯನ್ನು ತಲುಪಲು ಛಲ ಬಿಡದೆ, ತಮ್ಮ ಕನಸುಗಳನ್ನು ಕಟ್ಟಿಕೊಳ್ಳುವ ಕೆಲಸ ಮಾಡಬೇಕು. ಯುವಕರಲ್ಲಿ ಮುಖ್ಯವಾಗಿ ಒಳ್ಳೆಯ ಗುಣ ಮತ್ತು ಸಂಸ್ಕೃತಿ ಅಳವಡಿಸಿಕೊಂಡಾಗ ಮಾತ್ರ ಎಲ್ಲವನ್ನೂ ಪಡೆಯಲು ಸಾಧ್ಯ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯವು ಮೊಬೈಲ್ ಗೀಳಿಗೆ ಬೀಳದೇ ಹಾಗೂ ಮಾದಕ ವಸ್ತುಗಳಿಂದ ದೂರವಿರಬೇಕು. ಪೋಷಕರ ವಿಶ್ವಾಸಕ್ಕೆ ಅಗೌರವ ತರದೇ ಯುವಕರು ಜೀವನದಲ್ಲಿ ಒಳ್ಳೆಯ ದಾರಿಯನ್ನು ಆಯ್ದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಇಂತಹ ಯುವಜನೋತ್ಸವ ಕಾರ್ಯಕ್ರಮವನ್ನು ಯುವಕರಿಗಾಗಿ ಆಯೋಜಿಸಲಾಗುತ್ತಿದ್ದು, ಇನ್ನೂ ಹೆಚ್ಚಿನ  ಸಂಖ್ಯೆಯಲ್ಲಿ ಯುವಕರು ಭಾಗವಹಿಸಬೇಕು. ಕ್ರೀಡಾ ಇಲಾಖೆಯು ಇದರ ಬಗ್ಗೆ ಗಮನ ಹರಿಸಿ ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಕಲಾವಿದರ ಒಕ್ಕೂಟ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರಬAಡೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಜೀವನದ ಸ್ವಾರಸ್ಯವನ್ನು ಗೀಗಿ ಪದ ಹಾಡುವ ಮೂಲಕ ಯುವಕ ಯುವತಿಯರಿಗೆ ತಿಳಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ. ಗ್ರೇಸಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಯುವ ಸಬಲೀಕರಣ ಇಲಾಖೆಯಿಂದ ಯುವಜನರನ್ನು ಪ್ರೋತ್ಸಾಹಿಸಲು ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಯುವಕರು ತಮ್ಮಲ್ಲಿನ ಕಲೆ ಮತ್ತು ಪ್ರತಿಭೆಗಳನ್ನು ಅನಾವರಣಗೊಳಿಸಲು ಉತ್ತಮ ವೇದಿಕೆಯಾಗಿದೆ. ಇಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಹೋಗಬಹುದು. ಯುವಕ-ಯುವತಿಯರು ವೇದಿಕೆ ಬಳಸಿಕೊಂಡು ತಮ್ಮ ಕಲೆಗಳ ಪ್ರದರ್ಶನ ನೀಡಬೇಕು ಹಾಗೂ ಬಳ್ಳಾರಿ ಜಿಲ್ಲೆಗೆ ಕೀರ್ತಿ ತರಬೇಕು ಎಂದು ಕರೆ ನೀಡಿದರು.
ನಂತರದಲ್ಲಿ ವಿವಿಧ ಶಾಲಾ – ಕಾಲೇಜು ವಿದ್ಯಾರ್ಥಿಗಳಿಂದ ಜಾನಪದ ನೃತ್ಯ, ಜಾನಪದ ಗೀತೆ, ಕಥೆ ಬರೆಯುವುದು, ಚಿತ್ರಕಲೆ, ಭಾಷಣ, ಕವಿತೆ, ವಿಜ್ಞಾನ ಮೇಳ  ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ವಿವಿಧ ಗಣ್ಯರಿಗೆ ಹಾಗೂ ಜಾನಪದ ಕಲಾವಿದರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಾಹಿತಿ ಹಾಗೂ ಸಹಾಯಕ ಪ್ರಾಧ್ಯಾಪಕ ಡಾ.ಶಾಮ್ ಮೂರ್ತಿ, ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯ ಕನ್ನಡ ಅಧ್ಯಾಯನ ವಿಭಾಗದ ಉಪನ್ಯಾಸಕರಾದ ಡಾ.ಶಕೀಲಾ, ಮಾತೃ ಮಹಿಳಾ ಮಂಡಳಿ ಅಧ್ಯಕ್ಷರಾದ ಪುಷ್ಪ ಚಂದ್ರಶೇಖರ, ಬಿಐಟಿಎಂ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ರವೀಂದ್ರ ಹಿರೇಮಠ, ಕೊರ್ಲಗುಂದಿ ಬಸವನಗೌಡ, ವೀರಶೈವ ಕಾಲೇಜಿನ ಉಪನ್ಯಾಸಕ ವೀರೇಶ್ ಸ್ವಾಮಿ, ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು, ಯುವಕರು ಹಾಗೂ ಮತ್ತಿತರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article