ಘಟಪ್ರಭಾ -ಕೇಂದ್ರ ಬಸವ ಸಮಿತಿ ಪ್ರಕಟಿಸಿರುವ ಮಹಾನ್ ದಾರ್ಶನಿಕ ಬಸವಣ್ಣ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಘಟಪ್ರಭಾ ಪಟ್ಟಣದ ವಿವೇಕಾನಂದ ನಗರದ ಶ್ರೀಗುರು ನಿವಾಸದ ಆವರಣದಲ್ಲಿ ಶ್ರೀಮತಿ ಗಂಗಮ್ಮ ಮ. ತಿರಕಣ್ಣವರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಗ್ರಂಥ ಲೋಕಾರ್ಪಣೆಗೊಳಿಸಿದ ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕಿ,ಕವಯಿತ್ರಿ ಶ್ರೀಮತಿ ವಿಜಯಲಕ್ಷ್ಮಿ ಮಹದೇವ ತಿರಕನ್ನವರ ಅವರು ಮಾತನಾಡಿ ಕೇಂದ್ರ ಬಸವ ಸಮಿತಿ ಪ್ರಕಟಿಸಿರುವ *ಮಹಾನ್ ದಾರ್ಶನಿಕ ಬಸವಣ್ಣ* ಗ್ರಂಥ ಬಸವಣ್ಣನವರ ಜನನ, ಕಪ್ಪಡಿ ಸಂಗಮದಲ್ಲಿ ಬಸವಣ್ಣನವರ ವಿದ್ಯಾಭ್ಯಾಸ, ಕಾಯಕ ಜೀವನ, ಕಲ್ಯಾಣದಲ್ಲಿ ಬಸವಣ್ಣನವರ ಸಾಧನೆಗಳು, ಬಸವ ಮಹಾಮನೆ, ಪ್ರಸಾದ- ದಾಸೋಹ, ಅನುಭವ ಮಂಟಪದ ಸ್ಥಾಪನೆ, ಬಸವ ಪೂರ್ವದ ಪರಿಸ್ಥಿತಿ ಹಾಗೂ ನಂತರದ ಸಾಮಾಜಿಕ, ಆರ್ಥಿಕ, ಸಾಹಿತ್ಯಿಕ, ಶೈಕ್ಷಣಿಕ ಪರಿಸ್ಥಿತಿ ವಿವರದೊಡನೆ ಬಸವಣ್ಣನವರ ಘನ ವ್ಯಕ್ತಿತ್ವ ಹಾಗೂ ಜೀವನದ ಘಟನೆಗಳನ್ನು ಒಳಗೊಂಡು ಜನರಿಗೆ ಒಳ್ಳೆಯ ಸಂದೇಶಗಳನ್ನು ತಲುಪಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಗೋಕಾಕ ತಾಲೂಕಿನ ದುರದುಂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ,ಕವಿ ಮಹಾಂತೇಶ ಯಲ್ಲಪ್ಪ ಗೋವನಕೊಪ್ಪ ಅವರು ಮಾತನಾಡಿ ಸಕಲ ಜೀವಾತ್ಮರಿಗೆ ಲೇಸನೆ ಬಯಸಿದ ಮಹಾನ್ ಮಾನವತಾವಾದಿ, ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸಿದ ವಿಶ್ವದ ಯುಗಪುರುಷ ಬಸವಣ್ಣನವರು ಮಹಾ ಮಾನವತಾವಾದಿ, ಸ್ವತಂತ್ರ ವಿಚಾರವಾದಿ, ಸಮತಾವಾದಿ, ದಲಿತೋದ್ಧಾರಕ, ಶ್ರೇಷ್ಠ ಅರ್ಥಶಾಸ್ತ್ರಜ್ಞ, ಸ್ತ್ರೀಕುಲೋದ್ಧಾರಕ, ಪ್ರಾಮಾಣಿಕ ಬದುಕಿನ ಪಾರದರ್ಶಕ ವ್ಯಕ್ತಿತ್ವದ ಮಹಾನ್ ದಾರ್ಶನಿಕರಾಗಿದ್ದರು. ಇಂದಿನ ವಿದ್ಯಾರ್ಥಿಗಳಲ್ಲಿ ಇಂತಹ ಕಲ್ಪನೆ ಬಿತ್ತುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲೆಯ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಅವರು ಮಾತನಾಡಿ ಬಸವ ಸಮಿತಿಯು ಈಗಾಗಲೇ 50 ಭಾಷೆಗಳಲ್ಲಿ ವಚನಗಳನ್ನು ಭಾಷಾಂತರಿಸಿದೆ. ಶಾಲೆಯಿಂದ ಶಾಲೆಗೆ, ಕಾಲೇಜಿನಿಂದ ಕಾಲೇಜಿಗೆ, ವಚನಕಾರರು ಮತ್ತು ವ್ಯಕ್ತಿತ್ವ ಕಾರ್ಯಕ್ರಮವನ್ನು ಹಮ್ಮಿಕೊಂಡು ಲಕ್ಷಾಂತರ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನವಾಗಿದೆ ಎಂದು ಹೇಳಿದರು.
ಬಸವ ಅಭಿಮಾನಿ ಅಮರ ತಿರಕನ್ನವರ ಸ್ವಾಗತಿಸಿದರು, ಅಥರ್ವ ಗೋವನಕೊಪ್ಪ ಪ್ರಾರ್ಥನೆ ಮಾಡಿದರು, ಅಭಿನವ ಗೋವನಕೊಪ್ಪ ವಂದಿಸಿದರು.


