ಮಂಗಳೂರು, ಅಕ್ಟೋಬರ್ 25: ಧರ್ಮಸ್ಥಳ ಬುರುಡೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಧರ್ಮಸ್ಥಳ ಬುರುಡೆ ಷಡ್ಯಂತ್ರ ಪ್ರಕರಣದಲ್ಲಿ ಎಸ್ಐಟಿ ಮತ್ತೊಂದು ಪ್ರಮುಖ ಹೆಜ್ಜೆ ಇಟ್ಟಿದೆ. ಈ ಪ್ರಕರಣದ ಕುರಿತು ವಿಚಾರಣೆಗಾಗಿ ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಸೇರಿದಂತೆ ನಾಲ್ವರಿಗೆ ನೋಟಿಸ್ ನೀಡಲಾಗಿದೆ.
ಸೋಮವಾರ ಬೆಳಿಗ್ಗೆ 10.30ಕ್ಕೆ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಹಾಜರಾಗಲು ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ. ಹಾಗೂ ವಿಠಲ ಗೌಡರಿಗೆ ನೋಟಿಸ್ ನೀಡಲಾಗಿದೆ. ನೋಟಿಸ್ ನೀಡಿರುವ ಎಸ್ಐಟಿ ತನಿಖಾಧಿಕಾರಿ ಜಿತೇಂದ್ರ ದಯಾಮಾ, ಹಾಜರಾಗದಿದ್ದರೆ ಬಂಧನ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಬಿಎನ್ ಎಸ್ಎಸ್ 35(3) ಅಡಿಯಲ್ಲಿ ನೀಡಲಾದ ನೋಟಿಸ್ನಲ್ಲಿ, ಪ್ರಕರಣದ ಸಂದರ್ಭಗಳು ಮತ್ತು ಸಂಬಂಧಿತ ಸಂಗತಿಗಳನ್ನು ಖಚಿತಪಡಿಸಲು ಈ ನಾಲ್ವರ ಹಾಜರಾತಿ ಅಗತ್ಯವಿದ್ದುದಾಗಿ ವಿವರಿಸಲಾಗಿದೆ. ತನಿಖಾಧಿಕಾರಿಯು ನೋಟಿಸ್ನಲ್ಲಿ ಪ್ರಕರಣದ ಮಹತ್ವಪೂರ್ಣ ಅಂಶಗಳನ್ನು ಉಲ್ಲೇಖಿಸಿ, ಮಾಹಿತಿಯನ್ನು ದೃಢಪಡಿಸಲು ಅವರ ಸಹಕಾರವನ್ನು ಕೇಳಿದ್ದಾರೆ.
ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ನಾಲ್ವರಿಗೆ ಎಸ್ಐಟಿ ನೀಡಿರುವ ನೋಟಿಸ್ನಲ್ಲಿ ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆಯ ಕಲಂ 35(3) ಅಡಿಯಲ್ಲಿ , ದಿನಾಂಕ 04/07/2025 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಕುರಿತಂತೆ ಸಂದರ್ಶನಕ್ಕಾಗಿ 27/10/2025 ರಂದು ಬೆಳಿಗ್ಗೆ 10.30ಕ್ಕೆ SIT ಕಛೇರಿಗೆ ಹಾಜರಾಗಲು ಸೂಚಿಸಲಾಗಿದೆ.


