ಕರ್ನೂಲ್: ಹೈದರಾಬಾದ್ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಬೆಂಕಿಗೆ ಆಹುತಿಯಾಗಿದೆ. ಬಸ್ನಲ್ಲಿದ್ದ 20ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಇಂದು ನಸುಕಿನ ಜಾನ ದುರಂತ ಸಂಭವಿಸಿದೆ.
ಕರ್ನೂಲ್ ಉಪನಗರ ಚಿನ್ನಟೇಕೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ವೇಮುರಿ ಕಾವೇರಿ ಟ್ರಾವೆಲ್ಸ್ಗೆ ಸೇರಿದ ಬಸ್ ಬೆಂಕಿಗಾಹುತಿಯಾಗಿದೆ. ಅವಘಡದಲ್ಲಿ ಹಲವಾರು ಮಂದಿ ಜೀವಂತ ಸುಟ್ಟುಹೋಗಿದ್ದಾರೆ. ಬಸ್ನಲ್ಲಿ ಇಬ್ಬರು ಚಾಲಕರು ಸೇರಿ 43 ಜನರಿದ್ದರು.
ಈ ಪೈಕಿ 39 ಮಂದಿ ವಯಸ್ಕರು ಮತ್ತು ಇಬ್ಬರು ಚಿಕ್ಕ ಮಕ್ಕಳು ಸೇರಿ 41 ಜನ ಪ್ರಯಾಣಿಕರಿದ್ದರು. ಇವರಲ್ಲಿ 10 ಜನ ಮಹಿಳೆಯರಿದ್ದರು. ಈವರೆಗೆ 19 ಶವಗಳನ್ನು ಹೊರತೆಗೆಯಲಾಗಿದ್ದು, ಅವರನ್ನು ಗುರುತಿಸುವ ಪ್ರಕ್ರಿಯೆ ಮುಂದುವರೆದಿದೆ. ಸುರಕ್ಷಿತವಾಗಿರುವ 19 ಜನರನ್ನು ಗುರುತಿಸಲಾಗಿದ್ದು, ಅವರಲ್ಲಿ ಹಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿಐಜಿ ಪ್ರವೀಣ್ ಮಾಹಿತಿ ನೀಡಿದ್ದಾರೆ.
ನಸುಕಿನ 3.30ರ ಸುಮಾರಿಗೆ ದುರಂತ ಸಂಭವಿಸಿದೆ. ರಾತ್ರಿ 10.30ಕ್ಕೆ ಹೈದರಾಬಾದ್ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ಗೆ ಕರ್ನೂಲ್ ನಗರದ ಹೊರವಲಯದಲ್ಲಿರುವ ಉಲಿಂದಕೊಂಡ ಬಳಿ ಹಿಂದಿನಿಂದ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿದೆ. ಬಸ್‌ನ ಕೆಳಗೆ ಹೋಗಿ ಇಂಧನ ಟ್ಯಾಂಕ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು ಬಸ್ ಹೊತ್ತಿ ಉರಿದಿದೆ.
ಗಾಢ ನಿದ್ರೆಯಲ್ಲಿದ್ದ ಪ್ರಯಾಣಿಕರು ಎಚ್ಚರಗೊಂಡು, ಕೆಲವರು ಸಹಾಯಕ್ಕಾಗಿ ಕಿರುಚಿಕೊಂಡು, ಬಸ್ಸಿನ ತುರ್ತು ಬಾಗಿಲು ಮುರಿದು ಹೊರಬಂದರೆ, ಇನ್ನೂ ಹಲವರು ಬೆಂಕಿಯಲ್ಲಿ ಸಿಲುಕಿಕೊಂಡು ಸಜೀವ ದಹನವಾಗಿದ್ದಾರೆ.


