ಬಳ್ಳಾರಿ,ಅ.೨೩: ನಗರದ ಹೃದಯ ಬಾಗದಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಇತ್ತೀಚೆಗೆ ಹೊಸದಾಗಿ ಅಳವಡಿಸಿಕೊಂಡಿರುವ ನೋಂದಣಿ ನೀತಿಯಿಂದಾಗಿ ಪ್ರತಿನಿತ್ಯ ನೂರಾರು ಜನ ಎರೆಡೆರೆಡು ಬಾರಿ ಸಾಲಿನಲ್ಲಿ ನಿಂತು ಕಾಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಇದನ್ನು ಕೂಡಲೇ ಸರಿಪಡಿಸಬೇಕು ಎಂದು ಎಐಕೆಕೆಎಂಎಸ್ ರೈತ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.
ಸಂಘದ ಜಿಲ್ಲಾ ಕಾರ್ಯದರ್ಶಿ ಗುರಳ್ಳಿರಾಜ ಪತ್ರಿಕಾಹೇಳಿಕೆ ನೀಡಿದ ಅವರು, ಜಿಲ್ಲಾಸ್ಪತ್ರೆಗೆ ಸಾವಿರಾರು ಜನ ಪ್ರತಿದಿನ ಆಗಮಿಸುತ್ತಿರುವುದು ಆಡಳಿತ ಮಂಡಳಿ ಗಮನಕ್ಕಿದ್ದರೂ ಸಹ ಅಲ್ಲಿ ಉಂಟಾಗುತ್ತಿರುವ ಜನ ಸಂದಣಿಯನ್ನು ನಿಯಂತ್ರಿಸಲು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಜೊತೆಗೆ, ಆಡಳಿತ ಮಂಡಳಿ ಇತ್ತೀಚೆಗೆ ಅಳವಡಿಸಿಕೊಂಡಿರುವ ನೋಂದಣಿ ಪ್ರಕ್ರಿಯೆಯೂ ಸಹ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಾಕಷ್ಟು ಸಮಸ್ಯೆ ತಂದೊಡ್ಡುತ್ತಿದೆ. ಇಲ್ಲಿಗೆ ಬರುವ ರೋಗಿಗಳು ಎರೆಡು ಬಾರಿ ನೋಂದಣಿ ಮಾಡಿಸಬೇಕಾಗಿದೆ. ಈ ಸಮಸ್ಯೆ ಪರಿಹರಿಸುವ ಗೋಜಿಗೆ ಹೋಗದ ಜಿಲ್ಲಾ ಅಸ್ಪತ್ರೆಯ ಆಡಳಿತ ಮಂಡಳಿ, ಇದಕ್ಕೆ ಪರಿಹಾರ ಕೇಳಿದಲ್ಲಿ ಅವರ ಬಳಿ ಸಿಬ್ಬಂದಿ ಕೊರತೆ ಇದೆ ಎಂಬ ಉತ್ತರ ಸಿಗುತ್ತಿದೆ. ಇದನ್ನು ಕೂಡಲೇ ಬಗೆಹರಿಸುವ ಜವಾಬ್ದಾರಿ ತೆಗೆದುಕೊಳ್ಳದಿದ್ದಲ್ಲಿ ಹಲವಾರು ಸಮಸ್ಯೆಗಳು ಉಂಟಾಗಬಹುದು ಮತ್ತು ಜನರ ಆಕ್ರೋಶಕ್ಕೆ ಗುರಿಯಾಗಬಹುದು ಎಂದು ಎಚ್ಚರಿಕೆ ನೀಡಿದರು.