ಧರಾಶಾಹಿಯಾದ ಭತ್ತ: ಪರಿಹಾರಕ್ಕೆ ಸಂಪತ್ ಕುಮಾರಗೌಡ ಮನವಿ

Ravi Talawar
ಧರಾಶಾಹಿಯಾದ ಭತ್ತ: ಪರಿಹಾರಕ್ಕೆ ಸಂಪತ್ ಕುಮಾರಗೌಡ ಮನವಿ
WhatsApp Group Join Now
Telegram Group Join Now
ಬಳ್ಳಾರಿ: 23..ಜಿಲ್ಲೆಯ ಸಿರುಗುಪ್ಪ ತಾಲೂಕಿನಾದ್ಯಂತ ಇತ್ತೀಚೆಗೆ ಸುರಿದ ಭಾರೀ ಮಳೆ ಮತ್ತು ಗಾಳಿಯಿಂದ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಭತ್ತ ಧರಾಶಾಹಿಯಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಸರ್ಕಾರ ಕೂಡಲೇ ಪರಿಹಾರ ನೀಡಬೇಕೆಂದು ರೈತ ಮುಖಂಡರಾದ ಸಿರಿಗೇರಿ ಸಂಪತ್ ಕುಮಾರಗೌಡ ಅವರು ಮನವಿ ಮಾಡಿದ್ದಾರೆ.

ದಾಸಾಪುರ, ಸಿರಿಗೇರಿ, ತೆಕ್ಕಲಕೋಟೆ, ಕೊಂಚಿಗೇರಿ ಮತ್ತು ಹಾವಿನಾಳ ಸೇರಿದಂತೆ ಹಲವಾರು ಗ್ರಾಮಗಳ ರೈತರು ಬೆಳೆದಿದ್ದ ಸಾವಿರಾರು ಎಕರೆ ಪ್ರದೇಶದ ಭತ್ತದ ಬೆಳೆ ಹುಲುಸಾಗಿ ಫಸಲು ಬಂದಿತ್ತು. ಇನ್ನೂ ಹದಿನೈದು ದಿನಗಳಲ್ಲಿ ಭತ್ತದ ಕಟಾವು ಮಾಡುವ ಸಿದ್ಧತೆಯಲ್ಲಿ ಇದ್ದರು. ಇದೀಗ ಏಕಾಏಕಿ ಸುರಿದ ಭಾರೀ ಮತ್ತು ಗಾಳಿಯಿಂದಾಗಿ ಭತ್ತ ನೆಲಕ್ಕೆ ಉರುಳಿದೆ. ಸಾಲ ಮಾಡಿಕೊಂಡು ಭತ್ತ ನಾಟಿ ಮಾಡಿ, ಪೋಷಣೆ ಮಾಡಿದ್ದ ರೈತರಿಗೆ ಇದೀಗ ದಿಕ್ಕು ತೋಚದಂತಾಗಿದೆ. ಮುಂದಿನ ಬೇಸಿಗೆಗೆ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಗಳ ಅಳವಡಿಕೆ ಕಾರ್ಯ ಇರುವುದರಿಂದ ಬೇಸಿಗೆ ಬೆಳೆಗೂ ಜಲಾಶಯದಿಂದ ನೀರು ಲಭಿಸುವುದಿಲ್ಲ. ಇದರಿಂದ ರೈತರು ಮಾಡಿದ ಸಾಲ ತೀರಿಸಲಾಗದೇ, ಬಡ್ಡಿಗೆ ಹಣ ಜೋಡಿಸಲಾಗದೇ, ಬೇಸಿಗೆ ಬೆಳೆಗೆ ಅಣಿಯಾಗದೇ ಆಘಾತಕ್ಕೊಳಗಾಗಿದ್ದಾರೆ.

ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು ಮತ್ತು ತಹಶೀಲ್ದಾರರು ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ರೈತರ ಪರಿಸ್ಥಿತಿಯನ್ನು ಅವಲೋಕಿಸಿ ತಕ್ಷಣವೇ ಪರಿಹಾರ ಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಸಂಪತ್‌ಕುಮಾರಗೌಡ ಅವರು ಮನವಿ ಮಾಡಿದ್ದಾರೆ.

WhatsApp Group Join Now
Telegram Group Join Now
Share This Article