ಮೈಸೂರು, ಅಕ್ಟೋಬರ್ 23: ಭ್ರೂಣ ಪತ್ತೆ ಹಾಗೂ ಹತ್ಯೆ ಎರಡು ಕಾನೂನುಬಾಹಿರ. ಆದರೂ ಕೆಲವರು ಹಣದ ಆಸೆಗೆ ಇಂತಹ ಹೇಯ ಕೃತ್ಯವೆಸಗುತ್ತಾರೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದ ಅಂತಹದೇ ಒಂದು ಗ್ಯಾಂಗ್ ಅನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಹಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಓರ್ವ ಮಹಿಳೆ ಸೇರಿ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಬನ್ನೂರಿನ ಪ್ರತಿಷ್ಠಿತ ನರ್ಸಿಂಗ್ ಹೋಂ ಒಂದರ ಕೈವಾಡ ಶಂಕೆ ಕೂಡ ವ್ಯಕ್ತವಾಗಿದ್ದು, ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು ತಾಲ್ಲೂಕು ಮೆಲ್ಲಹಳ್ಳಿ ಗ್ರಾಮದ ಬಳಿಯ ಹುನಗನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಐಶಾರಾಮಿ ಬಂಗಲೆಯಲ್ಲಿ ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಮಾಡಲಾಗುತ್ತಿತ್ತು. ಈ ಐಶಾರಾಮಿ ಬಂಗಲೆಗೆ ಗರ್ಭಿಣಿ ಮಹಿಳೆಯರನ್ನು ಕರೆದುಕೊಂಡು ಬಂದು ಅವರ ಒಡಲಿನಲ್ಲಿರುವ ಭ್ರೂಣದ ಲಿಂಗ ಪತ್ತೆ ಕೆಲಸ ಮಾಡಲಾಗುತಿತ್ತು. ಅದು ಹೆಣ್ಣಾ ಅಥವಾ ಗಂಡಾ ಅಂತಾ ಪತ್ತೆ ಮಾಡಲಾಗುತ್ತಿತ್ತು. ಇದಕ್ಕಾಗಿ ಅವರ ಬಳಿ ಸಾವಿರಾರು ರೂ. ಹಣ ಪೀಕಲಾಗುತಿತ್ತು. ಆ ಮನೆಯಲ್ಲಿ ಹಣಕಾಸಿನ ಡೈರಿ ಪತ್ತೆಯಾಗಿದ್ದು ಅದರಲ್ಲಿದ್ದ ಮಾಹಿತಿ ಎಂತವರನ್ನು ಬೆಚ್ಚಿ ಬೀಳಿಸುತ್ತದೆ.
ಲಕ್ಷಾಂತರ ರೂ. ವಹಿವಾಟನ್ನು ಡೈರಿಯಲ್ಲಿ ಬರೆದಿಡಲಾಗಿತ್ತು. ಮಾಹಿತಿಗಳ ಪ್ರಕಾರ ಭ್ರೂಣದ ಲಿಂಗ ಪತ್ತೆಗಾಗಿ 25 ಸಾವಿರ ರೂ. ಭ್ರೂಣ ಪತ್ತೆ ಹಚ್ಚಿ ಒಂದು ವೇಳೆ ಅದು ಹೆಣ್ಣು ಭ್ರೂಣವಾದರೆ ಅದರ ಹತ್ಯೆಗೆ 30 ಸಾವಿರ ರೂ ಹಣ ನಿಗದಿ ಮಾಡಲಾಗಿತ್ತು. ಅಷ್ಟೇ ಅಲ್ಲದೆ ಕೊಠಡಿಯಲ್ಲಿ ಇದ್ದ ಕಬ್ಬಿಣದ ಲಾಕರ್ನಲ್ಲಿ ಮೂರು ಲಕ್ಷಕ್ಕೂ ಹೆಚ್ಚು ನಗದು ಪತ್ತೆ ಆಗಿದೆ. ಸ್ಥಳದಲ್ಲಿ ಭ್ರೂಣ ಹತ್ಯೆಗೆ ಬೇಕಾದ ಕಿಟ್‌ಗಳು, ಔಷಧಿಗಳು ಪತ್ತೆಯಾಗಿದ್ದು, ಎಲ್ಲವನ್ನೂ ವಶಕ್ಕೆ ಪಡೆಯಲಾಗಿದೆ.


