ಬೆಂಗಳೂರು, ಅಕ್ಟೋಬರ್ 22: ಕರ್ನಾಟಕಕ್ಕೆ ಬರಬೇಕಾಗಿದ್ದ ಅನುದಾನ ಬರುತ್ತಿಲ್ಲ. ರಾಜ್ಯಕ್ಕೆ ಅನ್ಯಾಯ ಆಗುತ್ತಲೇ ಇದೆ ಅನ್ನೋ ಆರೋಪ ಇಂದು ನಿನ್ನೆಯದಲ್ಲ. ಆದರೆ ಇದೇ ಅನುದಾನ ಸಮರಕ್ಕೆ ಮತ್ತೆ ಜೀವ ಸಿಕ್ಕಿದೆ. ಮಂಗಳವಾರ ಸಿಎಂ ಸಿದ್ದರಾಮಯ್ಯ ಪ್ರಸ್ತಾಪಿಸಿದ ವಿಷಯ ಇಂದು ಮತ್ತಷ್ಟು ಕಿಚ್ಚು ಹಚ್ಚಿದೆ. ಸದ್ಯ ಈ ವಿಚಾರವಾಗಿ ಧ್ವನಿ ಎತ್ತಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ರಾಜ್ಯ ಸರ್ಕಾರ ತನ್ನ ಬುಡಕ್ಕೆ ತಾನೇ ಕೊಡಲಿ ಪೆಟ್ಟು ಹಾಕಿಕೊಂಡಿದ್ದು, ಕೇಂದ್ರದ ವಿರುದ್ಧ ಮಾತನಾಡುವುದು ಹಾಸ್ಯಾಸ್ಪದ ಎಂದು ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷ, ರಾಜ್ಯದ ಅಭಿವೃದ್ಧಿಯನ್ನು ಮೂಲೆಗುಂಪು ಮಾಡಿ, ಆರ್ಥಿಕ ಸ್ಥಿತಿಗತಿಗಳನ್ನು ಹಳ್ಳಕ್ಕೆ ತಳ್ಳಿ, ಇಂದು ಕೇಂದ್ರ ಸರ್ಕಾರದ ವಿರುದ್ಧ ಬೊಟ್ಟು ಮಾಡಿ ನಿಂತಿದೆ. ರಾಜ್ಯಕ್ಕೆ ಅನುದಾನ ಇಲ್ಲ ಎಂದು ಆರೋಪ ಮಾಡುವ ಸಿಎಂ ಸಿದ್ದರಾಮಯ್ಯನವರು ರಾಜ್ಯದ ಆರ್ಥಿಕತೆಯನ್ನು ಹಾಳು ಮಾಡಿ, ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ