ಬೆಳಗಾವಿ. ನಗರದ ಕನ್ನಡ ಭವನದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ಕನ್ನಡ ಭವನ ಮತ್ತು ತೇಜೋಮಯ ಪ್ರದರ್ಶನ ಕಲೆಗಳ ಸಂಘ (ರಿ) ರವರ ಸಹಯೋಗದೊಂದಿಗೆ ನಡೆದ ಮೂರು ದಿನಗಳ ಕಿತ್ತೂರು ಕರ್ನಾಟಕ ನಾಟಕೋತ್ಸವ ಸಂತ ಶಿಶುನಾಳ ಶರೀಫ್ ನಾಟಕದೊಂದಿಗೆ ಸಮಾರೋಪ ಗೊಂಡಿತು.ಕಾರ್ಯಕ್ರಮದಲ್ಲಿ ಅಕಾಡೆಮಿಯ ಅಧ್ಯಕ್ಷರಾದ ಡಾ. ಕೆ ವಿ ನಾಗರಾಜಮೂರ್ತಿ ರವರು ಮಾತನಾಡಿ ಇಂದು ನಾವೆಲ್ಲ ಮಾನವಿತೆಯನ್ನು ಮರೆತು ಯುದ್ದಗಳನ್ನು ಸಂಭ್ರಮಿಸುವ ಕಾಲಕ್ಕೆ ಬಂದು ನಿಂತಿರುವದು ಬಹಳ ವಿಷಾದದ ಸಂಗತಿ. ಯುದ್ದದ ಭಯಂಕರ ಕರಾಳ ದಿನಗಳನ್ನು ನಾವು ಕಾಣುತಿದ್ದೇವೆ. ಏನೂ ತಪ್ಪು ಮಾಡದ ಚಿಕ್ಕ ಮಕ್ಕಳ, ಅನಾಮಿಕರ, ಮಹಿಳೆಯರ ರಾಶಿ ರಾಶಿ ಹೆಣಗಳನ್ನು ಕಂಡಾಗ ಮಾನವೀಯತೆ ಎಂಬುದು ಎಲ್ಲಿಗೆ ಬಂದು ನಿಂತಿದೆ ಎಂಬುದು ಪರಾಮರ್ಶಿಕೊಳ್ಳುಬೇಕಾಗಿದೆ. ಜಗತ್ತಿನಲ್ಲಿ ಶಾಂತಿ ನೆಲೆಸಿದರೆ ಮಾತ್ರ ಮಾನವ ಕುಲಕ್ಕೆ ಉಳಿಗಾಲವಿದೆ. ನೊಬೆಲ್ ಶಾಂತಿ ಪ್ರಶಸ್ತಿಗಾಗಿ ಯುದ್ದ ಅಸ್ತ್ರವನ್ನು ಬಳಸಿ ಕೊಳ್ಳುವ ಪ್ರಭಾವಿಗಳ ಮದ್ಯದಲ್ಲಿ ನಾವಿದ್ದೇವೆ. ರಾಜಕಾರಣದ ವಿಷಯವಾಗಿ ಮಾತನಾಡುತ್ತ ಇಂದಿನ ಕೆಲ ರಾಜಕಾರಣಿಗಳು ನಮ್ಮ ಕಲಾವಿದರಿಗಿಂತ ಚೆನ್ನಾಗಿ ನಾಟಕಗಳನ್ನಾಡುತಿದ್ದಾರೆ ಜನರು ಅದನ್ನು ನಿಜವೆಂದು ತಿಳಿದು ಸಂಭ್ರಮ ಪಡುತ್ತಿದ್ದಾರೆ. ಸಮಾಜದಲ್ಲಿ ಶಾಂತಿ, ನೆಮ್ಮದಿ, ಸಮಾನತೆಯ ಪಾಠವನ್ನು ರಂಗಭೂಮಿಯ ಮಾಧ್ಯಮದಿಂದ ಕಲಿಸಿ ಕೋಡಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ಹಿರಿಯ ಸಾಹಿತಿ ಯ ರು ಪಾಟೀಲ ಮಾತನಾಡಿ ಇಂದಿನ ಯುವ ಜನಾಂಗ ನಾಟಕದ ವೀಕ್ಷಣೆಯಿಂದ ದೂರ ಸಾಗುತ್ತಿದ್ದು ಅದನ್ನು ಬಿಟ್ಟು ನಾಟಕ ರಂಗಕ್ಕೆ ಪ್ರೋತ್ಸಾಹ ನೀಡಬೇಕು ಎಂದರು. ಅಕಾಡೆಮಿಯ ಸದಸ್ಯ ಸಂಚಾಲಕರಾದ ಬಾಬಾಸಾಹೇಬ ಕಾಂಬಳೆಯವರು ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗಭೂಮಿಯಲ್ಲಿ ಸಾಧನೆಗೈದ ಸಾಧಕರಾದ ಶಿವಾನಂದ ತಾರೀಹಾಳ, ಪ್ರೇಮ ನೀರಗಟ್ಟಿ, ಭರತ್ ಕಲಾಚಂದ್ರ, ಶ್ರೀಮತಿ ನಿರ್ಮಲಾ ಬಟ್ಟಲರವರನ್ನು ಸನ್ಮಾನಿಸಲಾಯಿತು.ಮುಖ್ಯ ಅತಿಥಿಗಳಾಗಿ ಡಾ. ಗುರುದೇವಿ ಹುಲೇಪ್ಪನವರಮಠ, ರಂಗಕರ್ಮಿಗಳಾದ ಜಾಕೀರ ನದಾಫ್, ಹಿರಿಯ ಪತ್ರಕರ್ತರಾದ ಮುರಗೇಶ ಶಿವಪೂಜಿ, ತೇಜೋಮಯ ಸಂಘದ ಅಧ್ಯಕ್ಷರಾದ ಅರವಿಂದ ಪಾಟೀಲರು ಉಪಸ್ಥಿತರಿದ್ದರು. ರಾಜು ಮಠಪತಿ ವಂದಿಸಿದರು, ಶ್ವೇತಾ ಕುಂಬಾರ ಮತ್ತು ಬಸವರಾಜ ತಳವಾರ ನಿರೂಪಿಸಿದರು.