ಬಾಗಲಕೋಟೆ: ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಎಂಟು ಜನ ಗಾಯಗೊಂಡು, ಏಳು ಬೈಕ್ಗಳು ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಬಾಗಲಕೋಟೆ ತಾಲೂಕಿನ ಗದ್ದನಕೇರಿ ಕ್ರಾಸ್ ಬಳಿ ಜರುಗಿದೆ. ಇಂದು ಮುಂಜಾನೆ ಸುಮಾರು 2.30ರ ಸುಮಾರಿಗೆ ಸಿಲಿಂಡರ್ ಸ್ಫೊಟಗೊಂಡಿದೆ.
ಬೋರ್‌ವೆಲ್ ಕೊರೆಯುವ ಕೆಲಸದಲ್ಲಿ ಬಳಸುವ ದ್ರವ ಪದಾರ್ಥದಿಂದ ಶಾರ್ಟ್ ಸರ್ಕ್ಯೂಟ್ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ. ಆಗ ಹತ್ತಿರದಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು, ಪರಿಣಾಮ ಬೆಂಕಿಯು ತೀವ್ರತೆ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.
ಈ ಘಟನೆಯಲ್ಲಿ, ಏಳು ಬೈಕ್ಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಅಲ್ಲದೆ, ಮೂವರು ಮಹಿಳೆಯರು, ಇಬ್ಬರು ಮಕ್ಕಳು ಮತ್ತು ಮೂವರು ಪುರುಷರು ಸೇರಿದಂತೆ ಎಂಟು ಜನರು ಗಾಯಗೊಂಡಿದ್ದಾರೆ. ಎಲ್ಲಾ ಗಾಯಾಳುಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗಾಯಗೊಂಡವರನ್ನು ಕಲ್ಮೇಶ್ ದರಿಯಪ್ಪ ಲೋಕಣ್ಣಬಾರ (30 ವರ್ಷ), ಸಚಿನ್ ಪ್ರಕಾಶ್ ಮೇರಿ (28), ಗಣೇಶ್ (26), ದಾಪು ದೇವಿ (28), ಡಿಂಪಲ್ ಪಟೇಲ್ (1 ವರ್ಷ), ಸ್ನೇಹಾ (22), ಐಶ್ವರ್ಯಾ (13) ಹಾಗೂ ಶ್ರುತಿ (23) ಎಂದು ಗುರುತಿಸಲಾಗಿದೆ.
ಮಾಹಿತಿ ದೊರೆತ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ನಿರ್ಲಕ್ಷ್ಯತನ ಹಾಗೂ ಅಪಾಯಕಾರಿ ವಸ್ತುಗಳನ್ನು ಸುರಕ್ಷತಾ ಕ್ರಮವಿಲ್ಲದೆ ಸಂಗ್ರಹಿಸಿದ್ದ ಆರೋಪ ಹಿನ್ನೆಲೆಯಲ್ಲಿ ಬೋರ್‌ವೆಲ್ ಅಂಗಡಿ ಮಾಲೀಕ ಮತ್ತು ಕಟ್ಟಡದ ಮಾಲೀಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 287 ಮತ್ತು 125ರ ಅಡಿಯಲ್ಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.