ಕಲಬುರಗಿ, ಅಕ್ಟೋಬರ್ 19: ಜಿಲ್ಲೆಯ ಚಿತ್ತಾಪುರದಲ್ಲಿ ಆರ್ಎಸ್ಎಸ್ ಪಥಸಂಚಲನಕ್ಕೆ ಅನುಮತಿ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ಮಾಡಿದ ಕಲಬುರಗಿ ಹೈಕೋರ್ಟ್ ಪೀಠ, ಪಥಸಂಚಲನ ಮಾರ್ಗದೊಂದಿಗೆ ಹೊಸದಾಗಿ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚನೆ ನೀಡಿದೆ. ಅರ್ಜಿದಾರರ ಮನವಿಯನ್ನು ಪರಿಗಣಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಜೊತೆಗೆ ಅಕ್ಟೋಬರ್ 24ರ ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದೂಡಿದೆ.
ಚಿತ್ತಾಪುರದಲ್ಲಿ ಭಾನುವಾರ ಆರ್ಎಸ್ಎಸ್ ಪಥ ಸಂಚಲನ ನಡೆಯಬೇಕಿತ್ತು. ಆದರೆ ಅನುಮತಿ ನಿರಾಕರಿಸಿ ತಹಶೀಲ್ದಾರ್ ನಾಗಯ್ಯ ಹಿರೇಮಠ ಆದೇಶ ಹೊರಡಿಸಿದ್ದರು. ಹೀಗಾಗಿ ಆರ್ಎಸ್ಎಸ್ ಕಾರ್ಯಕರ್ತರು ಕಾನೂನು ಹೋರಾಟಕ್ಕೆ ಮುಂದಾಗಿದ್ದರು. ಅದರಂತೆಯೇ ಡಿಸಿ ಕ್ರಮ ಪ್ರಶ್ನಿಸಿ ಕಲಬುರಗಿ ಹೈಕೋರ್ಟ್ ಪೀಠಕ್ಕೆ ಆರ್ಎಸ್ಎಸ್ ಕಲಬುರಗಿ ಜಿಲ್ಲಾ ಪ್ರಮುಖರಾದ ಅಶೋಕ್ ಪಾಟೀಲ್ ಎಂಬುವವರು ರಿಟ್ ಅರ್ಜಿ ಸಲ್ಲಿಸಿದ್ದರು.
ನ್ಯಾ. ಎಂಜಿಎಸ್ ಕಮಲ್ ಅವರ ಪೀಠದಲ್ಲಿ ತುರ್ತು ವಿಚಾರಣೆ ಮಾಡಲಾಯಿತು. ಅರ್ಜಿದಾರರ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದರು. ಕಾನೂನಿನ ಪ್ರಕಾರ ಅನುಮತಿ ಕೊಡಬೇಕಾದವರು ಯಾರು ಎಂದು ಜಡ್ಜ್ ಪ್ರಶ್ನಿಸಿದರು. ಪೊಲೀಸರಿಗೆ ಭದ್ರತೆ ನೀಡಲು ಮಾಹಿತಿ ನೀಡಿದ್ದೆವು. ಅ.13ರಂದೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೆವು. ಅ.17ರಂದು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ಗೆ ಅರ್ಜಿ ಸಲ್ಲಿಸಿದ್ದೆವು. ಶನಿವಾರ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದ್ದಾರೆ ಎಂದು ಅರುಣ್ ಶ್ಯಾಮ್ ವಾದಿಸಿದರು.