ಬೆಳಗಾವಿ ೧೮: ಇದೇ ದಿ: ೨೩ ರಿಂದ ನಡೆಯಲಿರುವ ಕಿತ್ತೂರು ಉತ್ಸವದಲ್ಲಿ ಕಿತ್ತೂರು ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನು ರಚಿಸುವುದರ ಜೊತೆಗೆ ಬೆಳಗಾವಿಯ ಸುವರ್ಣಸೌಧದಲ್ಲಿ ಸಮಗ್ರ ಪ್ರತ್ಯೇಕ ಸಚಿವಾಲಯವನ್ನು ಪ್ರಾರಂಭಿಸಬೇಕೆಂದು ಹಾಗೂ ಬೆಳಗಾವಿಯನ್ನು ರಾಜ್ಯದ ಎರಡನೇ ರಾಜಧಾನಿಯನ್ನಾಗಿ ಘೋಷಿಸಬೇಕೆಂದು ಸರಕಾರಕ್ಕೆ ಆಗ್ರಹಿಸಿ ನಿರ್ಣಯ ಕೈಗೊಳ್ಳಬೇಕೆಂದು ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಉತ್ತರ ಕರ್ನಾಟಕ ವಿಕಾಸ ವೇದಿಕೆ ಅಧ್ಯಕ್ಷ ಅಶೋಕ ಪೂಜಾರಿ, ಉತ್ತರ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಭೀಮಪ್ಪ ಗಡಾದ ಮತ್ತು ಹಿರಿಯ ನ್ಯಾಯವಾದಿ ಹಾಗೂ ಹೋರಾಟಗಾರ ಬಿ.ಡಿ. ಹಿರೇಮಠ ಅವರುಗಳು ಕಿತ್ತೂರು ಉತ್ಸವದ ಸಂಘಟಕರು ಹಾಗೂ ಬೆಳಗಾವಿ ಜಿಲ್ಲೆಯ ಸಚಿವರುಗಳು ಹಾಗೂ ಶಾಸಕರನ್ನು ಒತ್ತಾಯಿಸಿದ್ದಾರೆ.
ಇಂದು ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರುಗಳು ಕಳೆದ ದಶಕದಿಂದಲು ಉತ್ತರ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ನಡೆಯುತ್ತಿರುವ ಜನಸಮುದಾಯದ ಭಾವನೆಗಳಿಗೆ ಪೂಕವಾದ ಹೋರಾಟಗಳಿಗೆ ಧ್ವನಿಗೂಡಿಸಿರುವ ಸರಕಾರ ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಸಚಿವಾಲಯ ಪ್ರಾರಂಭಿಸಿರುವ ನಿರ್ಣಯದ ಜೊತೆಗೆ ವಿಶೇಷ ಅನುದಾನ ನೀಡಿದ್ದರೂ ಸಹ ಈ ಪ್ರಮುಖ ಬೇಡಿಕೆಯನ್ನು ಮುಂದಿಟ್ಟು ಹೋರಾಟ ಮಾಡಿರುವ ಕಿತ್ತೂರು ಕರ್ನಾಟಕ ಭಾಗವನ್ನು ನಿರ್ಲಕ್ಷ ಮಾಡಿರುವದು ಖೇಧದ ಸಂಗತಿಯಾಗಿದ್ದು, ಸರಕಾರ ಈ ಕೂಡಲೇ ಕಿತ್ತೂರು ಕರ್ನಾಟಕ ಭಾಗಕ್ಕೆ ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನು ರಚಿಸುವುದರ ಜೊತೆಗೆ ಕಲ್ಯಾಣ ಕರ್ನಾಟಕಕ್ಕೆ ನೀಡಿರುವ ಪ್ರತ್ಯೇಕ ಸಚಿವಾಲಯ ಹಾಗೂ ಇನ್ನಿರತ ಕೊಡುಗೆಗಳನ್ನು ನೀಡಬೇಕೆಂದು ಆಗ್ರಹಿಸಿದರು.
ಈಗ ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಸಚಿವಾಲಯ ನೀಡಿರುವ ಆದೇಶದ ಸುತ್ತೋಲೆಯನ್ನು ಅವಲೋಕಿಸಿದಾಗ ಅದು ಕೇವಲ ಒಂದು ಪ್ರತ್ಯೇಕ ಸಚಿವಾಲಯವಾಗಿದ್ದು, ಎಲ್ಲ ಇಲಾಖೆಗಳಿಗೆ ಪೂರಕವಾಗಿ ಕಾರ್ಯಮಾಡಲು ಅಸಾಧ್ಯವಾಗುತ್ತದೆ. ಆದರೆ ನಮ್ಮ ಬಹುದಿನಗಳ ಬೇಡಿಕೆ ಉತ್ತರ ಕರ್ನಾಟಕ ಭಾಗದ ಎಲ್ಲ ಇಲಾಖೆಗಳ ಅಂತಿಮ ಆದೇಶಗಳು ಬೆಳಗಾವಿಯ ಸುವರ್ಣಸೌಧದಿಂದಲೇ ಹೋರಡಬೇಕೆಂಬ ಹೋರಾಟ ನಮ್ಮದು. ಆದರೆ ಈಗ ಕೈಗೊಂಡ ನಿರ್ಣಯ ಅಪೂರ್ಣವಾಗಿದ್ದು, ಕೇವಲ ಸಾಂತ್ವನಪರ ನಿರ್ಣಯವಾಗಿದೆ. ಆದ್ದರಿಂದ ನಮ್ಮ ಬೇಡಿಕೆಗಳಿಗೆ ಪೂರಕವಾದ ನಿರ್ಣಯ ಸರಕಾರದಿಂದ ಸ್ಪಂಧನೆ ಸಿಗದಿದ್ದರೆ ನಮ್ಮ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಅವರು ಸರಕಾರವನ್ನು ಎಚ್ಚರಿಸಿದರು.
ಸರಕಾರ ಇದೇ ನವೆಂಬರ ೧ ರ ರಾಜ್ಯೋತ್ಸವದ ಕೊಡುಗೆಯಾಗಿ ಕಿತ್ತೂರು ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಸಚಿವಾಲಯ ಹಾಗೂ ವಿಶೇಷ ಅನುದಾನಗಳನ್ನು ನೀಡುವುದರ ಜೊತೆಗೆ ಬೆಳಗಾವಿಯ ಸುವರ್ಣಸೌಧವನ್ನು ಆಡಳಿತಾತ್ಮಕ ಶಕ್ತಿಕೇಂದ್ರವನ್ನಾಗಿಸುವ ನಿರ್ಣಯ ಕೈಗೊಳ್ಳವದೆಂದು ನಂಬಿದ್ದೇವೆ. ಅದಕ್ಕೆ ಪೂರಕವಾಗಿಯೇ ಸರಕಾರದ ಗಮನ ಸೆಳೆಯಲು ಇದೇ ಅಕ್ಟೋಬರ ೩೧ ರಂದು ಬೆಳಗಾವಿಯ ಸುವರ್ಣವಿಧಾನಸೌಧದ ಮುಂದೆ ಮುಂಜಾನೆ ೧೧-೦೦ ಗಂಟೆಯಿಂದ ಸಾಯಂಕಾಲ ೪-೦೦ ಗಂಟೆಯ ವರೆಗೆ ಉತ್ತರ ಕರ್ನಾಟಕ ವಿಕಾಸ ವೇದಿಕೆ, ಉತ್ತರ ಕರ್ನಾಟಕ ಹೋರಾಟ ಸಮಿತಿ ಹಾಗೂ ಉತ್ತರ ಕರ್ನಾಟಕ ಪರ ಇನ್ನಿತರ ಸಂಘಟನೆಗಳೊಂದಿಗೆ ಧರಣಿ ಸತ್ಯಾಗ್ರಹ ನಡೆಸುವುದಾಗಿ ಹೇಳಿದರು.
ಪತ್ರಕಾಗೋಷ್ಠಿಯಲ್ಲಿ ರಾಜ್ಯ ಜೆ.ಡಿ.ಎಸ್. ಮುಖಂಡ ಗುರುರಾಜ ಹುಣಶಿಮರರ ಧಾರವಾಡ, ಉ. ಕ. ಹೋರಟ ಸಮಿತಿ ಜಿಲ್ಲಾಧ್ಯಕ್ಷ ಅಡಿವೇಶ ಇಟಗಿ, ವಿ.ಜಿ. ನಿರಲಗಿಮಠ, ಸಂಜೀವ ಪೂಜಾರಿ,ಅಶೋಕ ದೇಶಪಾಂಡೆ, ಪ್ರವೀಣ ಪಾಟೀಲ, ನಿಂಗಪ್ಪ ಅಮ್ಮಿನಭಾಂವಿ, ಮಲ್ಲಿಕಾರ್ಜುನ ಪೂಜಾರಿ, ಸಿದ್ದಪ್ಪ ಶಿರಸಂಗಿ, ದಾನೇಶ ಹಿರೇಮಠ ಮುಂತಾದ ಗಣ್ಯರು ಉಪಸ್ಥಿತರಿದ್ದರು.