ಬೆಂಗಳೂರು,ಏಪ್ರಿಲ್ 05:: ರಾಜ್ಯ ಕಾಂಗ್ರೆಸ್ ಸರ್ಕಾರದ ಆರ್ಥಿಕ ನೀತಿಗಳು ಕರ್ನಾಟಕವನ್ನು ಹಾಳು ಮಾಡುತ್ತಿದೆ ಎಂದು ಶುಕ್ರವಾರ ಆರೋಪಿಸಿದ ಬಿಜೆಪಿ ನಾಯಕ ಸಿಟಿ ರವಿ, ಕೇರಳದಂತೆಯೇ ನಾವು ಸಾಲದ ಸುಳಿಯಲ್ಲಿ ಸಿಲುಕಿದ್ದೇವೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, “ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲದಿದ್ದರೆ ಕಾಶ್ಮೀರದಲ್ಲಿ ಮತ್ತೆ 370 ನೇ ವಿಧಿ ಹೇರುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ನಂತರ ಮತ್ತೆ ಸೈನಿಕರ ಮೇಲೆ ಕಲ್ಲು ತೂರಾಟ ಆರಂಭವಾಗುತ್ತದೆ. ಅವರು ಮತ್ತೆ ಬಾಬ್ರಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಮತ್ತೆ ಎಲ್ಲಾ ಯೋಜನೆಗಳು ಮುಗಿಯುತ್ತವೆ ಎಂದು ಹೇಳಿದರು.
ಕಾಂಗ್ರೆಸ್ ಯಾವಾಗಲೂ ಸೈನಿಕರ ಬಗ್ಗೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದೆ. ಸೈನಿಕರ ಮೇಲೆ ಅನುಮಾನ ವ್ಯಕ್ತಪಡಿಸುವವರು ಯಾರು? ಅಂತಹವರ ಬಗ್ಗೆ ನಾವು ಏನು ಹೇಳುತ್ತೇವೆ? ಪುಲ್ವಾಮಾ ದಾಳಿಗೆ ಯಾರು ಹೊಣೆ ಎಂದು ನಮಗೆಲ್ಲರಿಗೂ ತಿಳಿದಿದೆ. ಸರ್ಜಿಕಲ್ ಸ್ಟ್ರೈಕ್ ನಿಂದ ಉಗ್ರರ ತರಬೇತಿ ಕೇಂದ್ರವನ್ನು ಧ್ವಂಸಗೊಳಿಸಲಾಯಿತು ಎಂಬುದು ನಮಗೆ ತಿಳಿದಿದೆ. ಪಾಕಿಸ್ತಾನ ಈ ವಿಚಾರಕ್ಕೆ ವಿಶ್ವಸಂಸ್ಥೆಯ ಮೊರೆ ಹೋಗಿತ್ತು.ಆಗಲೂ ಕಾಂಗ್ರೆಸ್ ಈ ವಿಚಾರದಲ್ಲಿ ಸಂಶಯ ವ್ಯಕ್ತಪಡಿಸಿತ್ತು. ಆ ಪಕ್ಷಕ್ಕೆ ಸನಾತನ ಧರ್ಮ ಮತ್ತು ಸೈನಿಕರ ಬಗ್ಗೆ ಅನುಮಾನವಿದೆ. ದೇಶಪ್ರೇಮಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಅವರು ಸದಾ ಅನುಮಾನ ವ್ಯಕ್ತಪಡಿಸುತ್ತಾರೆ ಎಂದರು.