ಪಾಕಿಸ್ತಾನ ಭಾರತದ ವಿರುದ್ಧ ಒಂದಲ್ಲ ಒಂದು ಹೇಳಿಕೆ ನೀಡುತ್ತ ಬಂದಿದೆ. ಅದರೆ ಇಲ್ಲಿಯವರೆಗೆ ನೀಡಿದ ಹೇಳಿಕೆಯಂತೆ ಪಾಕ್ ನಡೆದುಕೊಂಡಿಲ್ಲ. ಈ ಹಿಂದೆ ಭಾರತವನ್ನು ಮಾತ್ರ ಟಾರ್ಗೆಟ್ ಮಾಡುತ್ತಿದ್ದ ಪಾಕಿಸ್ತಾನ ಇದೀಗ ಅಫ್ಘಾನಿಸ್ತಾನದ ವಿರುದ್ಧವು ಕಿಡಿಕಾರಿದೆ. ಯಾವಾಗ ಅಫ್ಘಾನಿಸ್ತಾನದ ತಾಲಿಬಾನ್ ವಿದೇಶಾಂಗ ಸಚಿವ ಭಾರತಕ್ಕೆ ಬಂದ್ರು ಅಲ್ಲಿಂದ ಪಾಕಿಸ್ತಾನಕ್ಕೆ ಉರಿ ಶುರುವಾಗಿದೆ. ಇದೀಗ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಭಾರತ ಹಾಗೂ ಅಫ್ಘಾನಿಸ್ತಾನದ ವಿರುದ್ಧ ಯುದ್ಧ ಅಗತ್ಯತೆ ಬಗ್ಗೆ ಮಾತನಾಡಿದ್ದಾರೆ. ಅಗತ್ಯವಿದ್ದರೆ ಇಸ್ಲಾಮಾಬಾದ್ ಎರಡು ಕಡೆ ಯುದ್ಧ ಮಾಡಲು ಸಿದ್ಧವಾಗಿದೆ, ಒಂದು ತಾಲಿಬಾನ್ ವಿರುದ್ಧ ಮತ್ತು ಇನ್ನೊಂದು ಭಾರತದ ವಿರುದ್ಧ ಎಂದು ಎಚ್ಚರಿಕೆ ನೀಡಿದ್ದಾರೆ.
ಕಾಬೂಲ್ ಮತ್ತು ಕಂದಹಾರ್‌ನಲ್ಲಿರುವ ಟಿಟಿಪಿ (ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್) ಶಿಬಿರಗಳ ಮೇಲೆ ಪಾಕಿಸ್ತಾನ ವಾಯುದಾಳಿ ನಡೆಸಿದ ನಂತರ ತಾಲಿಬಾನ್ ಜತೆಗೆ ಮತ್ತಷ್ಟು ದ್ವೇಷ ಕಟ್ಟಿಕೊಂಡಿದೆ. ಪಾಕ್ ಮಾಡಿದ ದಾಳಿಗೆ ತಾಲಿಬಾನ್ ಕೂಡ ಪ್ರತಿಕಾರವಾಗಿ ದಾಳಿಯನ್ನು ನಡೆಸಿದೆ. ಈ ದಾಳಿಯನ್ನು ತಾಲಿಬಾನ್ 58 ಪಾಕಿಸ್ತಾನಿ ಸೈನಿಕರನ್ನು ಕೊಂದಿದೆ ಮತ್ತು ಟ್ಯಾಂಕ್‌ಗಳು ಸೇರಿದಂತೆ ಮಿಲಿಟರಿ ಉಪಕರಣಗಳನ್ನು ವಶಪಡಿಸಿಕೊಂಡಿದೆ. ದಾಳಿಗಳಲ್ಲಿ 200 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕ್ ಹೇಳಿಕೊಂಡಿದೆ. ಕೆಲವು ದಿನಗಳ ಹಿಂದೆ ಸೌದಿ ಅರೇಬಿಯಾ ಮತ್ತು ಕತಾರ್ ಮಧ್ಯಸ್ಥಿಕೆಯಲ್ಲಿ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ತಾಲಿಬಾನ್ ನಡುವೆ ಕದನ ವಿರಾಮ ಪ್ರಯತ್ನ ಮಾಡಲಾಗಿತ್ತು. ಆದರೆ ಈ ಮಧ್ಯಸ್ಥಿಕೆ ವಿಫಲಗೊಂಡಿದೆ. ಪಾಕ್ – ಅಫ್ಘಾನಿಸ್ತಾನದ ನಡುವಿನ ಸಂಘರ್ಷದ ವೇಳೆ ತಾಲಿಬಾನ್ ಹೋರಾಟಗಾರರು, ಪಾಕಿಸ್ತಾನಿ ಟ್ಯಾಂಕ್‌ಗಳಲ್ಲಿ ಮೆರವಣಿಗೆ ನಡೆಸಿದ್ದಾರೆ. ತಾಲಿಬಾನ್ ಜತೆಗೆ ಸಂಘರ್ಷ ಮಾಡಲಾಗದೇ ಪಾಕ್ ಸೈನಿಕರು ಪಲಾಯನ ಮಾಡಿದ್ದಾರೆ. ಈ ಬಗ್ಗೆ ವಿಡಿಯೋ ಕೂಡ ವೈರಲ್ ಆಗಿತ್ತು. ಈ ವಿಡಿಯೋ ಪಾಕ್ ಸಾರ್ವಜನಿಕರಿಗೆ ಮುಜುಗರ ಉಂಟು ಮಾಡಿದೆ.