ಬೆಂಗಳೂರು,ಏ, 5: ರಾಜ್ಯದಲ್ಲಿನ ಮೊದಲ ಹಂತದ ಲೋಕಸಮರದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇಂದು ಅಂತ್ಯವಾಗಿದ್ದು, ರಾಜ್ಯದಲ್ಲಿ ಒಟ್ಟು 358 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಮೊದಲ ಹಂತದ 14 ಕ್ಷೇತ್ರಗಳಲ್ಲಿ ಚುನಾವಣೆಯ ನಡೆಯಲಿದೆ. ಮಾ.28ರಿಂದ ಇಂದಿನವರೆಗೆ ನಡೆದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಒಟ್ಟು 358 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಕೆ ಮಾಡಿದ್ದಾರೆ. ಈ ಪೈಕಿ 333 ಪುರುಷರು ಹಾಗೂ 25 ಮಹಿಳೆಯರು ನಾಮಪತ್ರ ಸಲ್ಲಿಸಿದ್ದಾರೆ. ಇದರಲ್ಲಿ ಒಟ್ಟು 211 ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ನೋಂದಾಯಿತ ಮಾನ್ಯತೆ ಪಡೆಯದ ವಿವಿಧ ಪಕ್ಷಗಳ ಒಟ್ಟು 161 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಇಂದು ಒಂದೇ ಕೊನೆ ದಿನ ಉಮೇದುವಾರಿಗೆ ಸಲ್ಲಿಸುವ ಭರಾಟೆ ಜೋರಾಗಿತ್ತು. ಒಂದೇ ದಿನ 183 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಈ ಪೈಕಿ 171 ಪುರುಷರು ಹಾಗೂ 12 ಮಹಿಳೆಯರಿದ್ದಾರೆ. ಒಟ್ಟು 102 ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ನೋಂದಾಯಿತ ಮಾನ್ಯತೆ ಪಡೆಯದ ವಿವಿಧ ಪಕ್ಷಗಳ 71 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಏಪ್ರಿಲ್ 26ರಂದು ರಾಜ್ಯದಲ್ಲಿ ಮೊದಲ ಹಂತದಲ್ಲಿ ನಡೆಯಲಿರುವ 14 ಲೋಕಸಭೆ ಕ್ಷೇತ್ರಗಳ ಚುನಾವಣೆಗೆ ಮಾ.28ರಂದು ಅಧಿಸೂಚನೆ ಹೊರಡಿಸಲಾಗಿತ್ತು. ನಾಮಪತ್ರ ಸಲ್ಲಿಸಲು ಏ.4 ಕೊನೆ ದಿನ ಮತ್ತು ಹಿಂಪಡೆಯುವ ಏ.8 ಕೊನೆ ದಿನವಾಗಿದೆ.
ಎಲ್ಲಿಲ್ಲಿ ಎಷ್ಟು ಅಭ್ಯರ್ಥಿಗಳು ನಾಮಪತ್ರ?:
ಉಡುಪಿ ಚಿಕ್ಕಮಗಳೂರು – 13
ಹಾಸನ – 21
ದಕ್ಷಿಣ ಕನ್ನಡ – 11
ಚಿತ್ರದುರ್ಗ (ಎಸ್ಸಿ) – 28
ತುಮಕೂರು – 22
ಮಂಡ್ಯ – 27
ಮೈಸೂರು – 28
ಚಾಮರಾಜನಗರ (ಎಸ್ಸಿ) – 25
ಬೆಂಗಳೂರು ಗ್ರಾಮಾಂತರ – 31
ಬೆಂಗಳೂರು ಉತ್ತರ – 25
ಬೆಂಗಳೂರು ಕೇಂದ್ರ – 32
ಬೆಂಗಳೂರು ದಕ್ಷಿಣ – 34
ಚಿಕ್ಕಬಳ್ಳಾಪುರ – 36
ಕೋಲಾರ (ಎಸ್ಸಿ) – 2
ಮೊದಲ ಹಂತದ ಚುನಾವಣೆಗೆ ಘಟಾನುಘಟಿ ನಾಯಕರು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಹೆಚ್.ಡಿ. ಕುಮಾರಸ್ವಾಮಿ, ಮೈಸೂರು ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕಾಂಗ್ರೆಸ್ನಿಂದ ಲಕ್ಷ್ಮಣ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಡಾ. ಸಿ.ಎನ್.ಮಂಜುನಾಥ್, ಕಾಂಗ್ರೆಸ್ನಿಂದ ಡಿ.ಕೆ.ಸುರೇಶ್, ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಯಿಂದ ಮಾಜಿ ಸಚಿವ ಡಾ. ಕೆ.ಸುಧಾಕರ್, ಬೆಂಗಳೂರು ದಕ್ಷಿಣದಿಂದ ಬಿಜೆಪಿಯ ತೇಜಸ್ವಿ ಸೂರ್ಯ, ಚಿತ್ರದುರ್ಗದಲ್ಲಿ ಬಿಜೆಪಿಯಿಂದ ಗೋವಿಂದ ಜಾರಕಿಹೊಳಿ, ಹಾಸನದಲ್ಲಿ ಜೆಡಿಎಸ್ನಿಂದ ಪ್ರಜ್ವಲ್ ರೇವಣ್ಣ, ತುಮಕೂರಲ್ಲಿ ಕಾಂಗ್ರೆಸ್ನಿಂದ ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ, ಕೋಲಾರದಲ್ಲಿ ಕಾಂಗ್ರೆಸ್ನಿಂದ ಕೆ.ವಿ. ಗೌತಮ್ ಮತ್ತು ಜೆಡಿಎಸ್ನಿಂದ ಮಲ್ಲೇಶ್ ಬಾಬು, ದಕ್ಷಿಣ ಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಇಂದು ಉಮೇದುವಾರಿಕೆ ಸಲ್ಲಿಸಿದ್ದಾರೆ.