ಬೆಂಗಳೂರು, ಅಕ್ಟೋಬರ್ 15: ಬೆಂಗಳೂರು ಐಟಿ ಕಂಪನಿಗಳ ತವರೂರು. ವಿಶ್ವದ ಟಾಪ್ ಐಟಿ ಸಿಟಿಗಳಲ್ಲಿ ಸಿಲಿಕಾನ್ ಸಿಟಿಯೂ ಸಹ ಅಗ್ರಮಾನ್ಯ ಪಟ್ಟಿಯಲ್ಲಿ ಇದೆ. ಹಲವು ಐಟಿ ಕಂಪನಿಗಳಿರುವ ಬೆಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ಮಾಡುತ್ತಿದ್ದ ಸೈಬರ್ ಕಂಪನಿ ಕೂಡ ಪತ್ತೆಯಾಗಿದೆ.
ಡಿಜಿಟಲ್ ಅರೆಸ್ಟ್ ಹೆಸರಲ್ಲಿ ದೇಶದ ಜನರಿಗೆ ಭಯ ಹುಟ್ಟಿಸಿ ಲಕ್ಷಲಕ್ಷ ಹಣ ವಸೂಲಿ ಮಾಡುತ್ತಿದ್ದ ಪ್ರಕರಣಗಳು ಸಾಕಷ್ಟು ಬೆಳಕಿಗೆ ಬಂದಿವೆ. ಅದರೆ ಇದೇ ಮೊದಲ ಬಾರಿ ಭಾರತದಲ್ಲಿ ಕುಳಿತು ಅಮೇರಿಕಾ ಮತ್ತು ಕೆನಡಾ ಪ್ರಜೆಗಳನ್ನು ಡಿಜಿಟಲ್ ಅರೆಸ್ಟ್ ಮಾಡುತ್ತಿದ್ದ ಕಚೇರಿಯೊಂದನ್ನು ಪತ್ತೆ ಹಚ್ಚಲಾಗಿದೆ. ಈ ಕಚೇರಿಯ ಮೇಲೆ ಪೊಲೀಸರು ದಾಳಿ ಮಾಡಿದ ಘಟನೆ ನಗರದ ಹೆಚ್ಎಸ್ಆರ್ ಲೇಔಟ್ ನಲ್ಲಿ ಬೆಳಕಿಗೆ ಬಂದಿದೆ.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಅಗ್ನೇಯ ಸೆನ್ ಪೊಲೀಸರು ಐಟಿ ಕಂಪನಿಗೆ ತೆರಳಿ ಪರಿಶೀಲನೆ ನಡೆಸಿ ಕಂಪನಿ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಅಲ್ಲಿ ಕೆಲಸ ಮಾಡುತ್ತಿದ್ದ 16 ಮಂದಿ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಗುಜರಾತ್ ಮೂಲದ 4 ಮಂದಿ, ಮಹಾರಾಷ್ಟ್ರದ 8, ಒರಿಸ್ಸಾ, ಜಾರ್ಖಂಡ್, ಮಧ್ಯಪ್ರದೇಶ ಮೂಲದ ತಲಾ ಒಬ್ಬ ಆರೋಪಿ ಇರುವುದು ಗೊತ್ತಾಗಿದೆ. ಕೆಲಸ ಮಾಡುತ್ತಿದ್ದ ನೌಕರರಿಗೆ 22 ಸಾವಿರ ಸಂಬಳ ಕೂಡ ನೀಡಲಾಗುತ್ತಿತ್ತು ಎಂದು ಪೊಲೀಸ್ ಕಮೀಷನರ್ ಹೇಳಿದ್ದಾರೆ.