ಸಂಡೂರು11..: ರಾಜ್ಯಕ್ಕೆ ತೆರಿಗೆ ಪಾಲು ಹಾಗೂ ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ತೀವ್ರ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಮಂಜುನಾಥ್ ಗೌಡ, ಕೇಂದ್ರದ ಜನವಿರೋಧಿ ನೀತಿಗಳ ವಿರುದ್ಧ ಅಭಿಯಾನ ರೂಪಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಯುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳ ಯಶಸ್ಸು ಹಾಗೂ ಹೊಸ ಜನಪರ ಯೋಜನೆಗಳನ್ನು ಶ್ಲಾಘಿಸಿದರು.
“ಮಹಾತ್ಮ ಗಾಂಧೀಜಿಯವರು ‘ದಕ್ಷಿಣದ ಕಾಶ್ಮೀರ’ ಎಂದು ಕರೆದಿದ್ದ ಈ ಪುಣ್ಯಭೂಮಿಯಿಂದ ನೀವು ಗಾಂಧಿ ಮುನ್ನಡೆಸಿದ ಕಾಂಗ್ರೆಸ್ ಪಕ್ಷವನ್ನು ನಿರಂತರವಾಗಿ ಗೆಲ್ಲಿಸುತ್ತಿದ್ದೀರಿ. ನಿಮ್ಮ ಈ ಬೆಂಬಲದಿಂದಾಗಿಯೇ ಇ. ತುಕಾರಾಂ ಅವರು ಸಂಸದರಾಗಿ ಮತ್ತು ಅನ್ನಪೂರ್ಣ ತುಕಾರಾಂ ಅವರು ಶಾಸಕರಾಗಿ ಆಯ್ಕೆಯಾಗಲು ಸಾಧ್ಯವಾಯಿತು,” ಎಂದು ಹೇಳಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಹೇಳಿದಂತೆ ಸಂಡೂರಿಗೆ 1200 ಕೋಟಿ ರೂ. ಅನುದಾನ ಬಂದಿದ್ದು, ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂಬುದಕ್ಕೆ ಇದು ಸಾಕ್ಷಿ ಎಂದು ಅವರು ತಿಳಿಸಿದರು.
“ಪಂಚ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಸಂಡೂರಿನ 1.21 ಲಕ್ಷ ತಾಯಂದಿರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ತಲುಪುತ್ತಿದೆ. 500 ಕೋಟಿಗೂ ಹೆಚ್ಚು ಬಾರಿ ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣ ಮಾಡಿದ್ದು, ಇದು ಗಿನ್ನಿಸ್ ದಾಖಲೆ ಸೇರಿದೆ,” ಎಂದರು. ಸಚಿವ ಸಂಪುಟದ ಹೊಸ ನಿರ್ಧಾರಗಳ ಬಗ್ಗೆ ಮಾತನಾಡಿದ ಅವರು, “5 ಕೆ.ಜಿ. ಅಕ್ಕಿಯೊಂದಿಗೆ ತೊಗರಿ ಬೇಳೆ, ಹೆಸರು ಕಾಳು, ಅಡುಗೆ ಎಣ್ಣೆ ಮತ್ತು ಉಪ್ಪು ಒಳಗೊಂಡ ‘ಇಂದಿರಾ ಆಹಾರ ಕಿಟ್’ ನೀಡುವ ಕ್ರಾಂತಿಕಾರಿ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಅಲ್ಲದೆ, ದೇಶದಲ್ಲೇ ಮೊದಲ ಬಾರಿಗೆ ಎಲ್ಲಾ ಉದ್ಯೋಗಿ ಮಹಿಳೆಯರಿಗೆ ಋತುಚಕ್ರದ ರಜೆ ನೀಡುವ ನೀತಿ ಜಾರಿಗೆ ತಂದಿರುವುದು ಮಾತೃಹೃದಯಿ ಸರ್ಕಾರದ ಬದ್ಧತೆಗೆ ಸಾಕ್ಷಿ,” ಎಂದು ತಿಳಿಸಿದರು.
“ಕೇಂದ್ರ ಸರ್ಕಾರವು ರಾಜ್ಯಗಳಲ್ಲಿ ನಡೆಸುತ್ತಿರುವ ‘ಮತಗಳ್ಳತನ’ದ ವಿರುದ್ಧ ಯುವ ಕಾಂಗ್ರೆಸ್ ಸಾಕ್ಷ್ಯ ಸಂಗ್ರಹಿಸುತ್ತಿದ್ದು, ಶೀಘ್ರದಲ್ಲೇ ಕೆಪಿಸಿಸಿಗೆ ವರದಿ ಸಲ್ಲಿಸಿ ಬೃಹತ್ ಹೋರಾಟ ಹಮ್ಮಿಕೊಳ್ಳಲಿದೆ. ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸಿ, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ಮತ್ತಷ್ಟು ಬಲ ತುಂಬಬೇಕು,” ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ ಉಸ್ತುವಾರಿ ನಿಗಮ್ ಭಂಡಾರಿ ಉಪಸ್ಥಿತರಿದ್ದರು.