ಭಾರತದ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯಾನಂತರದ ರಾಜಕಾರಣದಲ್ಲಿ ಬಾಬು ಜಗಜೀವನ ರಾಮ್ ಪ್ರಮುಖ ಹೆಸರು. ಜಗಜೀವನ ರಾಮ್ ಅವರ ತಂದೆ ಶೋಭಿರಾಮ್ ಬ್ರಿಟಿಷರ ಭಾರತೀಯ ಸೇನೆಯಲ್ಲಿದ್ದರು. ಹಲವು ಕಡೆಗಳಲ್ಲಿ ಕೆಲಸಮಾಡಿ, ಪೆಶಾವರದಲ್ಲಿ ಕೆಲಕಾಲ ಕೆಲಸ ಮಾಡಿದ ನಂತರ ತಮ್ಮ ಹುದ್ದೆಯನ್ನು ತ್ಯಜಿಸಿ ಬಿಹಾರಕ್ಕೆ ಬಂದು ಅರಾ ಪಟ್ಟಣದ ಸಮೀಪದ ಚಾಂದ್ವಾ ಗ್ರಾಮದಲ್ಲಿ ಭೂಮಿಯನ್ನು ಕೊಂಡು ಕೃಷಿಯನ್ನು ಆರಂಭಿಸಿದರು. ಜಗಜೀವನ್ ರಾಮ್ ಅವರು 1908ರ ಏಪ್ರಿಲ್ 5ರಂದು ಚಾಂದ್ವಾ ಗ್ರಾಮದಲ್ಲಿ ಜನಿಸಿದರು.
ಬಾಲಕ ಜಗಜೀವನ್ ರಾಮ್ 1914ರಲ್ಲಿ ಶಾಲೆಗೆ ಹೋಗಲು ಆರಂಭಿಸಿದ ದಿನಗಳಲ್ಲೇ ಅವರ ತಂದೆ ನಿಧನರಾದರು. ಆದರೆ ತಾಯಿ ವಾಸಂತಿದೇವಿ ಧೃತಿಗೆಡಲಿಲ್ಲ. ಮಗನ ವಿದ್ಯಾಭ್ಯಾಸವನ್ನು ಬೆಂಬಲಿಸಿದರು. ಬಾಲಕ ರಾಮ್ ಆರಾದಲ್ಲಿನ ಮಾಧ್ಯಮಿಕ ಶಾಲೆಯನ್ನು ಪ್ರವೇಶಿಸಿದಾಗ ಎರಡು ಮಡಿಕೆಗಳಲ್ಲಿ ನೀರನ್ನು ಇಡಲಾಗುತ್ತಿತ್ತು. ಒಂದು ಮಡಿಕೆಯ ನೀರು ಹಿಂದೂ ಮಕ್ಕಳಿಗೆ; ಮತ್ತೊಂದು ಮುಸ್ಲಿಂ ಮಕ್ಕಳಿಗೆ. ರಾಮ್ ಹಿಂದೂ ಮಡಿಕೆಯ ನೀರನ್ನು ಕುಡಿದಾಗ ದೂರು ಪ್ರಿನ್ಸಿಪಾಲರಿಗೆ ಹೋಯಿತು. ಪ್ರಿನ್ಸಿಪಾಲರು ಮೂರನೆಯ ಮಡಿಕೆಯೊಂದನ್ನು ಇಡಿಸಿ, ಅದು ಅಸ್ಪೃಶ್ಯ ಮಕ್ಕಳಿಗೆಂದು ಹೇಳಿದರು. ಮೊದಲ ಬಾರಿಗೆ ಅಸ್ಪೃಶ್ಯತೆಯ ಅಪಮಾನ ರಾಮ್ ಅವರನ್ನು ತಟ್ಟಿತು. ಇದರಿಂದ ಸಿಟ್ಟಿಗೆದ್ದ ಬಾಲಕ ರಾಮ್ ಎರಡು ಬಾರಿ ಈ ಮಡಿಕೆಯನ್ನು ಒಡೆದು ಹಾಕಿ ತಮ್ಮ ಕೋಪವನ್ನು ಪ್ರದರ್ಶಿಸಿದರು. ಪ್ರಿನ್ಸಿಪಾಲರೇನೋ ಈ ಮೂರನೆಯ ಮಡಿಕೆಯನ್ನು ತೆಗೆಸಿದರು. ಆದರೆ ಈ ಜಾತಿಪದ್ಧತಿಯ ಅಪಮಾನದ ಗಾಯ ಬಾಲಕ ರಾಮ್ ಅವರ ಎದೆಯಾಳಕ್ಕಿಳಿಯಿತು. ಮುಂದೆ ತಮ್ಮ ಜೀವನದುದ್ದಕ್ಕೂ ರಾಮ್ ನಡೆಸಿದ ಎಲ್ಲ ಚಟುವಟಿಕೆಗಳ ಹಿಂದೆ ಈ ನೋವು ಉಳಿದುಕೊಂಡೇ ಇತ್ತು. ಇಂಥ ಜಾತಿ ಅಪಮಾನದಿಂದ ದಲಿತರನ್ನು ಪಾರುಮಾಡುವ ಆಶಯವೇ ರಾಮ್ ಅವರ ಎಲ್ಲ ಚಟುವಟಿಕೆಗಳ ಪ್ರಧಾನ ಆಶಯವಾಗಿ ಮಾರ್ಪಟ್ಟಿತು.
ಒಮ್ಮೆ ವಿದ್ಯಾರ್ಥಿ ದೆಸೆಯಲ್ಲಿ ಇವರ ಪುಟ್ಟ ಭಾಷಣವನ್ನು ಮೆಚ್ಚಿದ ಪಂಡಿತ್ ಮದನ್ ಮೋಹನ್ ಮಾಳವೀಯ ಇವರನ್ನು ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ಸೇರಲು ಆಹ್ವಾನಿಸಿದರು. ಅಲ್ಲಿ ದಲಿತರಿಗೆ ಊಟಬಡಿಸುವುದರ ನಿರಾಕರಣೆ ಮಾಡುವುದರ ಜೊತೆಗೆ, ಕ್ಷೌರಕ್ಕಾಗಿ ಸಹಾ ಅಪರೂಪಕ್ಕೆ ಬರುವ ದಲಿತ ಕ್ಷೌರಿಕನಿಗೆ ಕಾಯುವಂತಹ ಘಟನೆಗಳಿಂದ ರೊಚ್ಚಿಗೆದ್ದು ಹೋರಾಟ ನಡೆಸಿದರಲ್ಲದೆ, ಇಂಟರ್ ಮೀಡಿಯೆಟ್ ನಂತರ ಅಲ್ಲಿಂದ ಹೊರನಡೆದು ಕೊಲ್ಕತ್ತಾ ವಿಶ್ವವಿದ್ಯಾಲಯದಿಂದ 1931ರಲ್ಲಿ ಬಿ.ಎಸ‍್ಸಿ ಪದವಿ ಪಡೆದರು.
ಜಗಜೀವನ್ ರಾಮ್ ಪ್ರತಿಭೆಯ ಜೊತೆಗೆ ಸ್ಪಷ್ಟ ಗ್ರಹಿಕೆ, ಒಳನೋಟ, ತತ್ವಬದ್ಧತೆ, ನಿಷ್ಠೆಗಳನ್ನೂ ಉಳ್ಳವರಾಗಿದ್ದರು. ತಾವು ಬಂದ ಸಮುದಾಯ, ಅದರ ಒಳಗುದಿ, ನೋವು, ಅಪಮಾನ, ವರ್ಣ ವ್ಯವಸ್ಥೆ ಸೃಷ್ಟಿಸಿದ ಕಠೋರ ಸನ್ನಿವೇಶ ಎಲ್ಲವನ್ನೂ ಅರಿಯುವ ಪ್ರಬುದ್ಧ ಚಿಂತನೆಯೂ ಅವರಲ್ಲಿತ್ತು. ಹೀಗಾಗಿಯೇ ಅವರು ಅವಮಾನಗಳನ್ನು, ಅದರ ಪೂರ್ವಾಪರಗಳನ್ನು, ಒಟ್ಟು ವ್ಯವಸ್ಥೆಯ ಮನೋಧರ್ಮವನ್ನು ಅರಿಯಬಲ್ಲವರಾಗಿದ್ದರು. ಅಪಮಾನಗಳನ್ನು ದಾಟುವುದು ಆ ಹೊತ್ತಿನ ಕ್ರಿಯೆ ಮಾತ್ರವಲ್ಲ ಮತ್ತು ವೈಯಕ್ತಿಕ ಸಾಧನೆಯೂ ಅಲ್ಲ ಎಂದು ತಿಳಿದಿದ್ದ ರಾಮ್ ತನ್ನ ಜನರ ಅಪಮಾನವನ್ನು ಕಾಲಾಂತರದಲ್ಲಿ ಶಾಶ್ವತವಾಗಿ ಪರಿಹರಿಸುವುದು ಹೇಗೆ ಎಂಬ ದಿಕ್ಕಿನಲ್ಲಿ ಚಿಂತಿಸಿ ಕ್ರಿಯಾಶೀಲರಾದರು. ಅದನ್ನು ವೈಯಕ್ತಿಕ ಹೋರಾಟವನ್ನಾಗಿ ಮಾಡಿಕೊಳ್ಳದೆ, ತುಳಿತಕ್ಕೊಳಗಾದ ಸಮುದಾಯದ ಹೋರಾಟವನ್ನಾಗಿ ಮಾಡಿದರು.
ರಾಮ್ ಅವರಿಗಿದ್ದ ಕನಸುಗಳಲ್ಲಿ ಮುಖ್ಯವಾದದ್ದು ತಾವು ಉನ್ನತ ಮಟ್ಟದ ವಿಜ್ಞಾನಿಯಾಗಬೇಕೆಂಬುದು. ಆದರೆ ಭಾರತದಲ್ಲಿನ ಪರಿಸ್ಥಿತಿಯಿಂದಾಗಿ ರಾಮ್ ತಮ್ಮ ದಿಕ್ಕನ್ನು ಬದಲಿಸಿದರು. ಸಮಾಜವಿಜ್ಞಾನ, ರಾಜಕೀಯ, ಹೋರಾಟ, ತನ್ನಂಥ ಅಪಮಾನಕ್ಕೊಳಗಾದವರ ಸಂಘಟನೆ, ನ್ಯಾಯಬದ್ಧ ಹಕ್ಕುಗಳಿಗೆ ಮತ್ತು ಸಮಾನತೆಗಾಗಿ ಹೋರಾಟ ಇವೇ ರಾಮ್ ಅವರ ಬದುಕಿನ ಆಸಕ್ತಿಗಳಾದವು.
ಬನಾರಸ್ನಲ್ಲಿದ್ದ ಸಂದರ್ಭದಲ್ಲಿಯೇ ರಾಮ್ ದಲಿತ ವಿದ್ಯಾರ್ಥಿಗಳನ್ನು ಸಂಘಟಿಸಿ ಸಾಮಾಜಿಕ ತಾರತಮ್ಯದ ವಿರುದ್ಧ ಪ್ರತಿಭಟನೆ ಮಾಡಿದರು. ವಿದ್ಯಾರ್ಥಿ ದೆಸೆಯಿಂದಲೇ ತಾವೊಬ್ಬ ದಲಿತರ ಸಮರ್ಥ ನಾಯಕ ಎಂಬುದನ್ನೂ ತೋರಿಸಿಕೊಟ್ಟರು. ಕೊಲ್ಕತ್ತಾ ಅವರ ವ್ಯಕ್ತಿತ್ವವನ್ನು ಇನ್ನಷ್ಟು ಹಿಗ್ಗಿಸಿತು. ಕೊಲ್ಕತ್ತಾದಲ್ಲಿ ರಾಮ್ ಜಾತಿ ವ್ಯವಸ್ಥೆಯ ದುಷ್ಟಮುಖದ ವಿರುದ್ಧ ಸಮ್ಮೇಳನಗಳನ್ನು ನಡೆಸಿದರು. ಕ್ರಮೇಣದಲ್ಲಿ ಮಜ್ದೂರ್ ಸಂಘಟನೆಯಲ್ಲಿ ಆಸಕ್ತಿ ವಹಿಸಿದ ರಾಮ್ ತಮ್ಮ ಬುದ್ಧಿಮತ್ತೆ ಮತ್ತು ಸಂಘಟನೆಯ ಚಾತುರ್ಯದಿಂದ ವೆಲ್ಲಿಂಗ್ಟನ್ ಚೌಕದಲ್ಲಿ 50,000 ಕಾರ್ಮಿಕರನ್ನು ಸೇರಿಸಿ ಬೃಹತ್ ಮಜ್ದೂರ್ ರ್‍ಯಾಲಿಯನ್ನು ಯಶಸ್ವಿಯಾಗಿ ನಿಭಾಯಿಸಿದರು. ಇದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಗಮನವನ್ನೂ ಸೆಳೆಯಿತು.
ಮುಂದೆ ದಲಿತ ನಾಯಕರಾಗಿ ರೂಪುಗೊಂಡ ಜಗಜೀವನ್ ರಾಮ್ ಅವರಿಗೆ ಬಿಹಾರ ಕಾರ್ಯಕ್ಷೇತ್ರವಾಯಿತು. ಗಾಂಧೀಜಿಯವರು ಆರಂಭಿಸಿದ್ದ ಅಸ್ಪೃಶ್ಯತೆಯ ವಿರುದ್ಧದ ಹೋರಾಟದಲ್ಲಿ ರಾಮ್ ಪಾಲ್ಗೊಂಡರು. 1934ರಲ್ಲಿ ಬಿಹಾರದ ಭೂಕಂಪದಲ್ಲಿ ನೊಂದವರಿಗೆ ನೆರವಾಗುವ ಕಾರ್ಯದಲ್ಲಿ ಸಕ್ರಿಯರಾದರು. 1935 ರಲ್ಲಿ ದಲಿತರ ಸಮಾನತೆಗಾಗಿ ಹೋರಾಡುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದ ‘ಅಖಿಲ ಭಾರತ ದಮನಿತ ವರ್ಗಗಳ ಒಕ್ಕೂಟ’ವನ್ನು ಸ್ಥಾಪಿಸುವಲ್ಲಿ ಜಗಜೀವನ್ ರಾಮ್ ನಿರ್ವಹಿಸಿದ ಪಾತ್ರ ಮಹತ್ವದ್ದಾಗಿತ್ತು. ಜಗಜೀವನ ರಾಮ್ ರವರು ಹಲವು ಬಾರಿ ಜೈಲುವಾಸವನ್ನು ಅನುಭವಿಸಿದರು. ಎರಡನೇ ಜಾಗತಿಕ ಯುದ್ಧದಲ್ಲಿ ಭಾರತ ಪಾಲ್ಗೊಳ್ಳುವುದನ್ನು ಅವರು ಬಲವಾಗಿ ಖಂಡಿಸಿದರು. ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಚಳವಳಿಯಲ್ಲಿ ಭಾಗವಹಿಸಿ ಜೈಲು ಶಿಕ್ಷೆಗೆ ಗುರಿಯಾದರು.
1935 ರಲ್ಲಿ ನಡೆದ ಹಿಂದೂ ಮಹಾಸಭಾದ ಅಧಿವೇಶನದಲ್ಲಿ ಜಗಜೀವನ ರಾಮ್ ಗೊತ್ತುವಳಿಯೊಂದನ್ನು ಮಂಡಿಸಿ ದಲಿತರಿಗೆ ದೇವಾಲಯಗಳಲ್ಲಿ ಪ್ರವೇಶ ಮತ್ತು ಕುಡಿಯುವ ನೀರಿನ ಬಾವಿಯನ್ನು ಬಳಸುವಲ್ಲಿ ಎಲ್ಲರಿಗಿರುವಂತೆಯೇ ದಲಿತರಿಗೂ ಮುಕ್ತ ಅವಕಾಶವಿರಬೇಕು ಎಂದು ಒತ್ತಾಯಿಸಿದರು. ದೇಶದ ಸ್ವಾತಂತ್ರಕ್ಕಾಗಿ ಹೋರಾಟ, ದಲಿತರ ಹಕ್ಕುಗಳಿಗಾಗಿ ಸೆಣಸಾಟ, ಸಮಾಜ ಸುಧಾರಣೆಗಾಗಿ ಚಿಂತನೆ, ಮನುಷ್ಯರ ಸಮಾನತೆ ಮತ್ತು ಘನತೆಗಾಗಿನ ನಿರಂತರ ಸಮರ ರಾಮ್ ಅವರ ಬದುಕಿನ ಸೂತ್ರಗಳಾದವು. 1946 ರಲ್ಲಿ ಪ್ರಥಮ ಹಂಗಾಮಿ ಸರ್ಕಾರ ರಚನೆಯಾದಾಗ ಸಂಪುಟದ ಅತ್ಯಂತ ಕಿರಿಯ ಸಚಿವರಾಗಿ ರಾಮ್ ಅವರಿಗೆ ಸಂಪುಟದಲ್ಲಿ ಕಾರ್ಮಿಕ ಖಾತೆ ಮುಂದಾಳತ್ವ ಸಂದಿತು. ಮುಂದೆ ರಾಮ್ ತಮ್ಮ ರಾಜಕೀಯ ಪಯಣದಲ್ಲಿ ಹಿಂದಿರುಗಿ ನೋಡಿದ್ದೇ ಇಲ್ಲ. ಹಲವಾರು ಖಾತೆಗಳ ಸಚಿವ ಸ್ಥಾನಗಳನ್ನು ನಿರ್ವಹಿಸಿದರು.
1971ರಲ್ಲಿ ಭಾರತ-ಪಾಕ್ ಮಧ್ಯೆ ಯುದ್ಧ ನಡೆದಾಗ (ಬಾಂಗ್ಲಾ ಪ್ರತ್ಯೇಕ ರಾಷ್ಟ್ರವಾಗಿ ಉದಯವಾದದ್ದು ಈ ಯುದ್ಧದ ಫಲಶ್ರುತಿ) ಜಗಜೀವನ್ ರಾಮ್ ಕೇಂದ್ರ ಸಂಪುಟದಲ್ಲಿ ರಕ್ಷಣಾ ಸಚಿವರಾಗಿದ್ದರು. ಎರಡು ಅವಧಿಗೆ ರಾಮ್ ಕೇಂದ್ರ ಸಂಪುಟದಲ್ಲಿ ಕೃಷಿ ಸಚಿವರಾಗಿದ್ದರು. ಭಾರತೀಯ ಕೃಷಿ ಆಧುನೀಕರಣಗೊಂಡದ್ದು ಮತ್ತು ಭಾರತದಲ್ಲಿ ಹಸಿರು ಕ್ರಾಂತಿಯಾದದ್ದು ರಾಮ್ ಅವರು ಕೃಷಿ ಸಚಿವರಾಗಿದ್ದ ಈ ಅವಧಿಯಲ್ಲಿ. 1974 ರಲ್ಲಿ ದೇಶ ಬರಗಾಲವನ್ನು ಎದುರಿಸಿದಾಗ ಆಹಾರದ ಬಿಕ್ಕಟ್ಟನ್ನು ನಿಭಾಯಿಸುವ ಹೊಣೆಯನ್ನು ಹೊತ್ತವರು ರಾಮ್. ತಮ್ಮ ಖಾತೆಯ ಜೊತೆಗೆ ರಾಮ್ ಅವರು ಆಹಾರ ಖಾತೆಯನ್ನು ಹೆಚ್ಚಿನ ಖಾತೆಯಾಗಿ ನಿಭಾಯಿಸಿದರು. ಕ್ರಮೇಣದಲ್ಲಿ ಬಾಬು ಜಗಜೀವನ ರಾಮ್ ಎಂದೇ ಪ್ರಸಿದ್ಧರಾದರು.
ಇಂದಿರಾ ಗಾಂಧಿ 1975 ರಲ್ಲಿ ದೇಶದಲ್ಲಿ ತುರ್ತುಸ್ಥಿತಿ ಘೋಷಿಸಿದಾಗ, ಅದನ್ನು ಅವರು ಬೆಂಬಲಿಸಿದರು. ರಾಮ್ ರಾಜಕೀಯ ಮುತ್ಸದ್ದಿಯಾಗಿ, ರಾಜಕೀಯವನ್ನು ಬಲ್ಲ, ಅದರೆಲ್ಲ ಒಳಸುಳಿಗಳನ್ನು ತಿಳಿದ ತಂತ್ರಗಾರರಾಗಿದ್ದರು. ಒಮ್ಮೆ ಅವರು ತುರ್ತು ಪರಿಸ್ಥಿತಿ ಸಮಯದಲ್ಲಿ “ತಮ್ಮ ನೆರಳೂ ತಮಗೆ ಸಂಶಯದ ದಿಗಿಲು ತರುತ್ತಿತ್ತು” ಎಂದು ಹೇಳಿದ್ದರು. 1977 ರಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಜೊತೆ ಕೈಜೋಡಿಸಿ ಜನತಾ ಪಕ್ಷದ ಮೈತ್ರಿಕೂಟವನ್ನು ಸೇರಿಕೊಂಡರು. ಉತ್ತರ ಭಾರತದಲ್ಲಿ ಜನತಾ ಪಕ್ಷದ ಮೈತ್ರಿಕೂಟ ಸಾಧಿಸಿದ್ದ ಗೆಲುವಿನಲ್ಲಿ ಬಾಬು ಜಗಜೀವನ್ ರಾಮ್ ಅವರ ಪ್ರಭಾವ ಮಹತ್ವದ್ದಾಗಿತ್ತು. ಪ್ರಧಾನಿ ಹುದ್ದೆಗೆ ಕೇಳಿಬಂದರಾದರೂ ಉಪ ಪ್ರಧಾನಿ ಪಟ್ಟಕ್ಕೆ ಸೀಮಿತರಾಗಬೇಕಾಯಿತು. ಬಾಬು ಜಗಜೀವನ್ ರಾಮ್ ಅವರು 1986 ವರ್ಷದ ಜುಲೈ 6 ರಂದು ನಿಧನರಾದರು.
ಎನ್.ಎನ್.ಕಬ್ಬೂರ
ಶಿಕ್ಷಕರು ತಾ-ಸವದತ್ತಿ ಜಿ-ಬೆಳಗಾವಿ
ಮೊಬೈಲ್-9740043452