ವಾಷಿಂಗ್ಟನ್, ಅಕ್ಟೋಬರ್ 11: ನೊಬೆಲ್ ಶಾಂತಿ ಪುರಸ್ಕಾರ ಕೈತಪ್ಪುತ್ತಿದ್ದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ರೆಬೆಲ್ ಆಗಿದ್ದಾರೆ. ಭಾರತದ ಬಳಿಕ ಇದೀಗ ಚೀನಾದ ಮೇಲೆ ಶೇ.100ರಷ್ಟು ಹೆಚ್ಚುವರಿ ಸುಂಕ ವಿಧಿಸಿದ್ದಾರೆ. ಇದಲ್ಲದೆ, ಡೊನಾಲ್ಡ್ ಟ್ರಂಪ್ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರೊಂದಿಗೆ ಮಾತುಕತೆ ಮತ್ತು ಸಭೆಗಳ ಸಾಧ್ಯತೆಯನ್ನು ಸಹ ತಿರಸ್ಕರಿಸಿದ್ದಾರೆ. ಚೀನಾದ ಉತ್ಪನ್ನಗಳ ಮೇಲಿನ ಶೇ.100 ರಷ್ಟು ಸುಂಕವು ನವೆಂಬರ್ 1, 2025 ರಿಂದ ಜಾರಿಗೆ ಬರಲಿದೆ ಎಂದು ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
ಅಮೆರಿಕವು ಎಲ್ಲಾ ಪ್ರಮುಖ ಸಾಫ್ಟ್ವೇರ್ ರಫ್ತುಗಳನ್ನು ನಿಷೇಧಿಸುತ್ತದೆ ಎಂದು ಟ್ರಂಪ್ ಹೇಳಿದ್ದಾರೆ. ಟ್ರಂಪ್ ಅವರ ಈ ನಡೆಯ ನಂತರ, ವಿಶ್ವದ ಎರಡು ದೊಡ್ಡ ಆರ್ಥಿಕತೆಗಳ ನಡುವಿನ ವ್ಯಾಪಾರ ಯುದ್ಧವು ಉತ್ತುಂಗಕ್ಕೇರಿದೆ. ನವೆಂಬರ್ 1 ರಿಂದ ಜಾರಿಗೆ ಬರಲಿರುವ ಅಪರೂಪದ ಭೂಮಿಯ ಖನಿಜಗಳ ಮೇಲೆ ರಫ್ತು ಮಿತಿಗಳನ್ನು ವಿಧಿಸುವ ಚೀನಾ ನಿರ್ಧಾರಕ್ಕೆ ಪ್ರತಿಕ್ರಿಯೆಯಾಗಿ ಸುಂಕಗಳನ್ನು ಹೆಚ್ಚಿಸುವ ಮತ್ತು ಸಾಫ್ಟ್ವೇರ್ ರಫ್ತುಗಳನ್ನು ನಿಯಂತ್ರಿಸುವ ಟ್ರಂಪ್ ಅವರ ಘೋಷಣೆ ಬಂದಿದೆ.