ಬಳ್ಳಾರಿ. ಅ. 10. : ದೇಶದಲ್ಲಿನ ಬ್ಯಾಂಕುಗಳಿಂದ ತನ್ನ ಗ್ರಾಹಕರು ತಮ್ಮ ಖಾತೆಯಲ್ಲಿ ಕನಿಷ್ಠ ಠೇವಣಿಯನ್ನು ಇಡದೆ ಇದ್ದಲ್ಲಿ ಅದಕ್ಕೆ ದಂಡವನ್ನು ವಿಧಿಸಲಾಗುತ್ತಿದೆ ಇದು ತನ್ನ ಗ್ರಾಹಕರನ್ನು ಹಗಲು ದರೋಡೆ ಮಾಡುವ ಕ್ರಮವಾಗಿದೆ ಎಂದು ಜನ ಹಿತಪಕ್ಷದ ಸಂಸ್ಥಾಪಕ ಅಧ್ಯಕ್ಷರಾದ ವಿ ಜಯರಾಮ್ ಆರೋಪಿಸಿದರು.
ಅವರು ಇಂದು ಜನಹಿತ ಪಕ್ಷದಿಂದ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿ, ಬ್ಯಾಂಕುಗಳು ಈಗಾಗಲೇ ಕಡಿತಗೊಳಿಸಿರುವ ಶುಲ್ಕದ ಹೆಸರಿನ ದಂಡದ ಹಣವನ್ನು ಅವರವರ ಖಾತೆಗಳಿಗೆ ಮರಳಿಸಬೇಕು ಕನಿಷ್ಠ ಬ್ಯಾಲೆನ್ಸ್ ಮೊತ್ತ ಎಂಬುದನ್ನು ರದ್ದು ಮಾಡಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ನ ಅಧಿಕಾರಿಗಳನ್ನು ಒತ್ತಾಯಿಸಿದರು. ದೇಶದ ನಾಗರಿಕರು ಹಣವನ್ನು ಖಾಸಗಿ ವ್ಯಕ್ತಿಗಳಿಗೆ ನೀಡಿ ಮೋಸ ಹೋಗುವುದನ್ನು ತಪ್ಪಿಸಿಕೊಳ್ಳಲು ಬ್ಯಾಂಕ್ ಗಳಲ್ಲಿ ಜಮೆ ಮಾಡುತ್ತಾರೆ ಇಂಥ ಜನರ ವಿಶ್ವಾಸವನ್ನು ಬ್ಯಾಂಕುಗಳು ಕನಿಷ್ಠ ಬ್ಯಾಲೆನ್ಸ್ ನಿಂದ ಕಳೆದುಕೊಳ್ಳುತ್ತಿದ್ದಾರೆ, ಅತ್ಯಂತ ಮುಖ್ಯವಾಗಿ ಸ್ವಯಂ ಚಾಲಿತವಾಗಿ ಆ ಶುಲ್ಕ ಈ ಶುಲ್ಕ ಜಿಎಸ್ಟಿ ಇತರ ತೆರಿಗೆ ದಂಡ ಎಂದು ಸಾರ್ವಜನಿಕರ ಹಣವನ್ನು ಕಡಿತಗೊಳಿಸಿ ಜನರ ಜೇಬಿಗೆ ಕನ್ನ ಹಾಕುತ್ತಿದೆ ಇದನ್ನು ಕೂಡಲೇ ರದ್ದುಪಡಿಸಬೇಕೆಂದು ಭಾರತೀಯ ರಿಸರ್ವ್ ಬ್ಯಾಂಕ್ ನ ಗವರ್ನರ್ ಗೆ ಪತ್ರ ಬರೆದು ಆಗ್ರಹಿಸಿದರು.
ಈ ರೀತಿಯಾಗಿ ಎಲ್ಲಾ ಕನಿಷ್ಠ ಬ್ಯಾಲೆನ್ಸ್ ಎಂಬ ನಿಯಮಗಳನ್ನು ರದ್ದುಪಡಿಸಿ ಅದಕ್ಕೆ ಸಂಬಂಧಿಸಿದ ಎಲ್ಲಾ ಶುಲ್ಕಗಳನ್ನು ಮರುಪಾವತಿಸಿ ಖಾತೆಗಳನ್ನು ಸ್ಥಗಿತ ಗೊಳಿಸುವ ವ್ಯವಸ್ಥೆಯನ್ನು ರದ್ದುಪಡಿಸಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ದೇಶದ ನಾಗರಿಕರನ್ನು ತಮ್ಮ ಠೇವಣಿ ಹಣವನ್ನು ಬ್ಯಾಂಕ್ ನಿಂದ ಹಿಂಪಡೆಯುವಂತಹ ಅಭಿಯಾನ ಮತ್ತು ಜಾಗೃತಿಯನ್ನು ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಜನಹಿತ ಪಕ್ಷದ ಜಿಲ್ಲಾಧ್ಯಕ್ಷರು ಇತರ ಪದಾಧಿಕಾರಿಗಳು ಇದ್ದರು.
ಈ ಸಂದರ್ಭದಲ್ಲಿ ಜನ ಜಾಗೃತಿಯ ಪೋಸ್ಟರ್ಗಳನ್ನು ಜನಹಿತ ಪಕ್ಷದಿಂದ ಬಿಡುಗಡೆಗೊಳಿಸಲಾಯಿತು.


