ಬೆಂಗಳೂರು, ಅಕ್ಟೋಬರ್ 9: ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಲು ಹಿಂದಿನ ಬಿಜೆಪಿ ಸರ್ಕಾರ ಶಿಫಾರಸು ಮಾಡಿತ್ತು ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಂಸದ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕುರುಬ ಸಮುದಾಯವನ್ನು ಎಸ್ಟಿ ಸಮುದಾಯಕ್ಕೆ ಸೇರಿಸಲು ಸಿದ್ದರಾಮಯ್ಯ ಅವರ ಹಿಂದಿನ ಸರ್ಕಾರದ ಅವಧಿಯಲ್ಲಿ ಕೇಂದ್ರಕ್ಕೆ ಪ್ರಸ್ತಾಪ ಹೋಗಿತ್ತು. ನಮ್ಮ ಅವಧಿಯಲ್ಲಿ ಕುಲಶಾಸ್ತ್ರಿಯ ಅಧ್ಯಯನ ವರದಿ ಬಂದಿತ್ತು. ಈಗಿನ ಕಾಂಗ್ರೆಸ್ ಸರ್ಕಾರ ಅದನ್ನು ಪರಿಶೀಲನೆ ಮಾಡಿ 2023 ರ ಜುಲೈ 20 ರಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಿದ್ದರಾಮಯ್ಯ ಅವಧಿಯಲ್ಲೇ ಕುರುಬ ಸಮುದಾಯ ಎಸ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು: ಸಂಸದ ಬಸವರಾಜ ಬೊಮ್ಮಾಯಿ

ಕುರುಬ ಸಮುದಾಯವನ್ನು ಎಸ್ಟಿ ಸಮುದಾಯಕ್ಕೆ ಸೇರಿಸಲು ಸಿದ್ದರಾಮಯ್ಯ ಅವರ ಹಿಂದಿನ ಸರ್ಕಾರದ ಅವಧಿಯಲ್ಲಿ ಕೇಂದ್ರಕ್ಕೆ ಪ್ರಸ್ತಾಪ ಹೋಗಿತ್ತು. ಕುಲ ಶಾಸ್ತ್ರೀಯ ಅಧ್ಯಯನ ಮಾಡಿಸುವಂತೆ ವಾಪಸ್ ಬಂದಿತ್ತು. ಸಮ್ಮಿಶ್ರ ಸರ್ಕಾರ ಕುಲಶಾಸ್ತ್ರೀಯ ಅಧ್ಯಯನ ನಡೆಸಲು ಆದೇಶ ಮಾಡಿತ್ತು. ನಮ್ಮ ಅವಧಿಯಲ್ಲಿ ಕುಲಶಾಸ್ತ್ರಿಯ ಅಧ್ಯಯನ ವರದಿ ಬಂದಿತ್ತು. ಅದನ್ನು ನಮ್ಮ ಸರ್ಕಾರ ಒಪ್ಪಿತ್ತು. ಚುನಾವಣೆ ಬಂದು ನಮ್ಮ ಸರ್ಕಾರ ಹೋಯಿತು. ಈಗಿನ ಕಾಂಗ್ರೆಸ್ ಸರ್ಕಾರ ಅದನ್ನು ಪರಿಶೀಲನೆ ಮಾಡಿ 2023 ರ ಜುಲೈ 20 ರಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಸರ್ಕಾರ ದಾಖಲೆಗಳನ್ನು ತೆಗೆದು ನೋಡಲಿ. ಈಗ ಸಿದ್ದರಾಮಯ್ಯ ಅವರ ಕೈಯಲ್ಲಿ ಇದೆ ಅವರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ನೋಡಬೇಕು. ವಾಲ್ಮೀಕಿ ಸಮುದಾಯ ಮತ್ತು ಕುರುಬರ ನಡುವೆ ಏನೂ ಸಮಸ್ಯೇ ಆಗುವುದಿಲ್ಲ. ಅಹಿಂದ ನಾಯಕ ಸಿದ್ದರಾಮಯ್ಯ ಅವರೇ ಇದ್ದಾರೆ. ಮೀಸಲಾತಿ ಹೆಚ್ಚಳ ಮಾಡುವುದು ಅಷ್ಟು ಸುಲಭವಿಲ್ಲ ಎಂದರು.