ಬೆಳಗಾವಿ: ತಾಲೂಕಿನ ಯಳ್ಳೂರು ಗ್ರಾಮ ಪಂಚಾಯತ ವ್ಯಾಪ್ತಿಯ ಎಸ್ಸಿ ಮತ್ತು ಎಸ್ಟಿ ಅಭಿವೃದ್ದಿ ಕಾಮಗಾರಿಗಳನ್ನು ನಿಗದಿತ ಸಮಯವನ್ನು ಹೊರತುಪಡಿಸಿ ಕೈಗೊಳ್ಳಲಾಗಿದೆ. ಇದು ಕಾನೂನು ಬಾಹಿರವಾಗಿದ್ದು ಪಿಡಿಒ ಪೂನಮ್ ಘಾಟಗೆ ಮತ್ತು ಅಧ್ಯಕ್ಷೆ ಲಕ್ಷ್ಮೀ ಮಾಸೇಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಕೀಲ ಸುರೇಂದ್ರ ಉಗಾರೆ ಅವರು ಜಿಲ್ಲಾ ಪಂಚಾಯತ, ಜಿಲ್ಲಾ ನಾಗರಿಕ ಹಕ್ಕು ನಿರ್ದೇಶನಾಲಯಕ್ಕೆ ದೂರು ಸಲ್ಲಿಸಿದ್ದರು. ನಾಗರಿಕ ಹಕ್ಕು ನಿರ್ದೇಶನಾಲಯ ಠಾಣಾಧಿಕಾರಿ ರಂಜಿತ್ ಗಿಲ್ ಅವರು ಕೊಟ್ಟಿರುವ ತನಿಖಾ ವರದಿ ಆಧರಿಸಿ ಕ್ರಮ ಕೈಗೊಳ್ಳಬೇಕು ಎಂದು ಉತ್ತರ ವಲಯ ಎಸ್ಪಿ ರವೀಂದ್ರ ಗಡಾದಿ ಅವರು ಸಿಇಒ ಅವರಿಗೆ ಕ್ರಮ ಕೈಗೊಳ್ಳಲು ಆದೇಶ ನೀಡಿದ್ದರೂ ಇನ್ನೂ ಕ್ರಮ ಜರುಗಿಸಿಲ್ಲ ಎಂದು ವಕೀಲ ಮತ್ತು ಪರಿಸರವಾದಿ ಉಗಾರೆ ಆರೋಪಿಸಿದ್ದಾರೆ.
ನಗರದಲ್ಲಿ ಜಿಲ್ಲಾ ಪಂಚಾಯತ ಮುಂದೆ ಪ್ರತಿಭಟಿಸಿದ ಅವರು 2014-15 ನೇ ಸಾಲಿನ 14ನೇ ಹಣಕಾಸು ಯೋಜನೆಯ 2018-19ನೇ ಸಾಲಿನಲ್ಲಿ ಎಸ್ಸಿ ಹಾಗೂ ಎಸ್ಟಿ ಅಭಿವೃದ್ಧಿಯ 7 ಕಾಮಗಾರಿಗಳನ್ನು 2025ರಲ್ಲಿ ಕೈಗೊಳ್ಳಲಾಗಿದೆ. ಬರೋಬ್ಬರಿ 19,65000 ರೂಪಾಯಿಗಳ ಕಾಮಗಾರಿಗಳನ್ನು ನಿಯಮ ಬಾಹಿರವಾಗಿ ಕೈಗೊಂಡಿದ್ದು ಕ್ರಮಕ್ಕೆ ಆದೇಶ ನೀಡಲಾಗಿದೆ. ಆದರೂ ಕ್ರಮ ಜರುಗಿಸಿಲ್ಲ ಎಂದು ಉಗಾರೆ ಆರೋಪಿಸಿದ್ದಾರೆ.