ಜೋಡೆತ್ತು  ಇದು ಚಿಕ್ಕಣ್ಣನ ಹೊಸ ಸಿನಿಮಾ 

Ravi Talawar
ಜೋಡೆತ್ತು  ಇದು ಚಿಕ್ಕಣ್ಣನ ಹೊಸ ಸಿನಿಮಾ 
WhatsApp Group Join Now
Telegram Group Join Now
     ಚಿಕ್ಕಣ್ಣ ನಾಯಕ ನಟರಾಗಿರುವ ಹೊಸ ಸಿನಿಮಾಕ್ಕೆ ‘ಜೋಡೆತ್ತು’ ಎಂದು ನಾಮಕರಣ ಮಾಡಲಾಗಿದೆ. ಸೋಮಶೇಖರ್ ನಿರ್ಮಾಣದ, ಎಸ್.ಮಹೇಶ್ ಕುಮಾರ್ ನಿರ್ದೇಶನವಿರುವ ಈ ಚಿತ್ರದ ಮುಹೂರ್ತ ಅದ್ಧೂರಿಯಾಗಿ ನೇರವೇರಿದೆ.
     ಖ್ಯಾತ ನಿರ್ದೇಶಕ, ನಿರ್ಮಾಪಕ ಆರ್.ಚಂದ್ರು ಕ್ಯಾಮೆರಾ ಸ್ವಿಚ್ ಆನ್ ಮಾಡಿ ಹಾಗು ಸ್ಯಾಂಡಲ್‌ವುಡ್ ‘ಅಧ್ಯಕ್ಷ’ ಶರಣ್ ಆರಂಭ ಫಲಕ ತೋರಿಸಿ, ಟೈಟಲ್ ಟೀಸರ್ ಬಿಡುಗಡೆ ಮಾಡಿ ‘ಜೋಡೆತ್ತು’ ತಂಡಕ್ಕೆ ಶುಭ ಹಾರೈಸಿದರು. ಕಂದಾಯ ಸಚಿನ ಕೃಷ್ಣ ಬೈರೇಗೌಡ ಸಮಾರಂಭಕ್ಕೆ ಆಗಮಿಸಿ ‘ಜೋಡೆತ್ತು’ ಬಳಗದ ಬಲ ಹೆಚ್ಚಿಸಿದರು.
     ಸದ್ಯ ಚಿಕ್ಕಣ್ಣ ಹಾಗೂ ತೆಲುಗಿನ ಸುನಿಲ್ ಕಾಣಿಸಿಕೊಂಡಿರುವ ಟೈಟಲ್ ಟೀಸರ್ ಹರಿಬಿಡಲಾಗಿದ್ದು, ‘ಡಿ ಬೀಟ್ಸ್’ ಯೂ ಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗಿದೆ. ಕನ್ನಡ ಸೇರಿದಂತೆ ತಮಿಳು ಹಾಗೂ ತೆಲುಗಿನಲ್ಲಿ ಈ ಸಿನಿಮಾ ತಯಾರಾಗುತ್ತಿದ್ದು, ಆಯಾ ಭಾಷೆಯ ಕಲಾವಿದರು ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಮಾಹಿತಿ ಚಿತ್ರತಂಡದಿಂದ ಕೇಳಿಬಂತು.
     ‘ಎಲ್ಲಾ ಆಯಾಮದಲ್ಲೂ ಈ ಸಿನಿಮಾ ಅದ್ಧೂರಿಯಾಗಿದೆ ಎಂಬುದಕ್ಕೆ ಟೈಟಲ್ ಟೀಸರ್ ಸಾಕ್ಷಿಯಾಗಿದೆ. ನುರಿತ ಕಲಾವಿದರು, ತಂತ್ರಜ್ಞರೇ ತುಂಬಿರುವ ಈ ಸಿನಿಮಾ ಹಲವು ಮೊದಲುಗಳಿಗೆ ಸಾಕ್ಷಿಯಾಗಿದೆ. ‘ಜೋಡೆತ್ತು’ ದೊಡ್ಡ ಮಟ್ಟದಲ್ಲಿ ಹಿಟ್ ಆಗಲಿ” ಎಂದು ಶರಣ್ ಶುಭ ಹಾರೈಸಿದರು.
     “ಈ ಸಿನಿಮಾದ ಕಥೆ ೮೦ರ ದಶಕದ ಕಾಲಘಟ್ಟದಲ್ಲಿ ನಡೆಯುತ್ತದೆ. ನಿಜವಾದ ‘ಜೋಡೆತ್ತು’ ಯಾರೆಂಬುದನ್ನು ಸದ್ಯದಲ್ಲೇ ತಿಳಿಸುತ್ತೇವೆ. ಇದು ನನ್ನ ಕೆರಿಯರ್‌ನಲ್ಲೇ ದೊಡ್ಡ ಬಜೆಟ್‌ನ ಸಿನಿಮಾ. ಹಳ್ಳಿಯಲ್ಲಿ ಶುರುವಾಗಿ ಹಳ್ಳಿಯಲ್ಲೇ ಮುಗಿಯುವ ಸಿನಿಮಾ. ಫ್ಯಾಮಿಲಿ ಸೆಂಟಿಮೆಂಟ್, ಕಾಮಿಡಿ, ಆಕ್ಷನ್ ಎಲ್ಲಾ ಅಂಶಗಳೂ ಕೂಡಿರುವ ಸಿನಿಮಾವಿದು. ನವೆಂಬರ್‌ನಿಂದ ಶೂಟಿಂಗ್ ಶುರುವಾಗಲಿದೆ. ಅಂದಹಾಗೆ ಈ ಸಿನಿಮಾದ ಟೈಟಲ್ ರಾಮಮೂರ್ತಿ ಅವರ ಬಳಿಯಿತ್ತು. ನಮಗಾಗಿ ಬಿಟ್ಟುಕೊಟ್ಟರು ಅವರಿಗೆ ಧನ್ಯವಾದಗಳು” ಎಂದರು ನಟ ಚಿಕ್ಕಣ್ಣ.
     “ಈ ಚಿತ್ರದಲ್ಲಿ ಚಿಕ್ಕಣ್ಣ ಅವರ ಪಾತ್ರ ಹಾಗೂ ಗೆಟಪ್ ಎರಡೂ ಭಿನ್ನವಾಗಿದೆ. ಕಥೆಯಲ್ಲಿ ಗಟ್ಟಿತನವಿದೆ. ಇದು ಪಕ್ಕಾ ದೇಸಿ ಸೊಗಡಿನಲ್ಲಿ ತಯಾರಾಗುತ್ತಿರುವ ಸಿನಿಮಾ. ನಾನೂ ಮಂಡ್ಯ ಸೀಮೆಯಿಂದ ಬಂದಿರುವುದರಿಂದ ಅಲ್ಲಿನ ಸೊಗಡನ್ನು ಈ ಸಿನಿಮಾದಲ್ಲಿ ಸಾಧ್ಯವಾದಷ್ಟೂ ಕಟ್ಟಿಕೊಡಲು ಪ್ರಯತ್ನಿಸುತ್ತೇನೆ” ಎಂದರು ನಿರ್ದೇಶಕ ಮಹೇಶ್ ಕುಮಾರ್.
     “ಆಕಾಶ್ ಎಂಟರ್‌ಪ್ರೈಸಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಮೂರನೇ ಸಿನಿಮಾವಿದು. ಹಿಂದಿನ ಸಿನಿಮಾಗಳಿಗಿಂತ ಇದು ಭಿನ್ನವಾಗಿರಲಿದೆ. ದೊಡ್ಡ ಮಟ್ಟದಲ್ಲಿ ನಿರ್ಮಿಸಿ, ಬಿಡುಗಡೆ ಮಾಡುವ ಆಲೋಚನೆಯಿದೆ. ಮಹೇಶ್ ದೇವ್ ಕಥೆಯನ್ನು ನೀಟಾಗಿ ಬರೆದಿದ್ದಾರೆ. ಅದನ್ನು ತೆರೆಯ ಮೇಲೆ ಇನ್ನೂ ಸೊಗಸಾಗಿ ಮೂಡಿಬರುವಂತೆ ಮಾಡಲು ಯೋಜನೆ ಹಾಕಿಕೊಂಡಿದ್ದೇವೆ. ಬಜೆಟ್‌ನ ಯಾವುದೇ ಮಿತಿಯಿಲ್ಲ” ಎಂಬುದು ನಿರ್ಮಾಪಕ ಸೋಮಶೇಖರ್ (ಕಟ್ಟಿಗೇನಹಳ್ಳಿ) ಮಾತು.
     ಈ ಚಿತ್ರಕ್ಕೆ ವಿ.ಹರಿಕೃಷ್ಣ ಐದು ಹಾಡುಗಳನ್ನು ಹೊಸೆಯಲಿದ್ದಾರೆ. “ಎಲ್ಲವೂ ಭಿನ್ನವಾಗಿರಲಿದ್ದು, ಮಾಸ್-ಕ್ಲಾಸ್ ಅಂಶಗಳಿಂದ ಕೂಡಿರಲಿದೆ” ಎಂಬುದು ಹರಿಕೃಷ್ಣ ಮಾತು. ಈಗಾಗಲೇ ಸ್ಟಾರ್ ಸಿನಿಮಾಗಳಿಗೆ ಕ್ಯಾಮೆರಾಮನ್ ಆಗಿ ಕಾರ್ಯ ನಿರ್ವಹಿಸಿರುವ ಸುಧಾಕರ್ ಎಸ್ ರಾಜ್ ‘ಜೋಡೆತ್ತು’ಗಳಿಗೆ ಛಾಯಾಗ್ರಹಣ ಮಾಡಲಿದ್ದಾರೆ. ಮಾಸ್ತಿ, ರಾಜಶೇಖರ್ ಹಾಗೂ ರಘು ನಿಡುವಳ್ಳಿ ಈ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದು, ಮೋಹನ್ ಬಿ ಕೆರೆ ಕಲಾ ನಿರ್ದೇಶನ ಸಿನಿಮಾಕ್ಕಿದೆ.
WhatsApp Group Join Now
Telegram Group Join Now
Share This Article